ಸಾರಾಂಶ
ಕನ್ನಡಪ್ರಭ ವಾರ್ತೆ ಕಾರಟಗಿ
ಹೈದ್ರಾಬಾದ್ ಕರ್ನಾಟಕವನ್ನು ಆಳಿದ ನಿಜಾಮರು ಈ ಭಾಗದ ಶೈಕ್ಷಣಿಕ, ಔದ್ಯಮಿಕ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡದ ಕಾರಣ ಈ ಪ್ರದೇಶ ಹಿಂದುಳಿದಿದೆ. ಈಗ ಭಾರತ ಸರ್ಕಾರ ಸಾಂವಿಧಾನಿಕವಾಗಿ ೩೭೧ಜೆ ವಿಶೇಷ ಸೌಲಭ್ಯ ನೀಡಿದೆ. ಈ ಕಾಯ್ದೆಯನ್ನು ಸಮರ್ಪಕವಾಗಿ ಬಳಸಿಕೊಂಡು ಈ ಭಾಗದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಬೇಕಾಗಿದೆ ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಹೇಳಿದರು.ಇಲ್ಲಿನ ಕೆಪಿಎಸ್‌ನ ಸಿದ್ದೇಶ್ವರ ರಂಗ ಮಂದಿರದ ಮೈದಾನದಲ್ಲಿ ಮಂಗಳವಾರ ನಡೆದ ಹೈದ್ರಾಬಾದ್ ಕರ್ನಾಟಕ ವಿಮೋಚನೆಯ ೭೭ನೇ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇಡೀ ದೇಶ ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯವಾದರೂ, ಈ ಭಾಗ ಮಾತ್ರ ನಿಜಾಮರ ಆಳ್ವಿಕೆಯಲ್ಲಿತ್ತು. ಸಾವಿರಾರು ಹೋರಾಟಗಾರರ ಹೋರಾಟದ ಫಲವಾಗಿ ನಾವು ಸ್ವತಂತ್ರರಾದೆವು. ಇದಕ್ಕೆ ಸ್ಥಳೀಯರು ಸೇರಿದಂತೆ ರಾಷ್ಟ್ರೀಯ ನಾಯಕರ ಕೊಡುಗೆ ಅಪಾರವಾಗಿದ್ದು, ಅವರ ತ್ಯಾಗ, ಬಲಿದಾನವನ್ನು ನಾವು ಸದಾ ಸ್ಮರಿಸಬೇಕು ಎಂದರು.ನಿಜಾಮರು ಭಾರತ ಉಪಖಂಡದ ಅತಿದೊಡ್ಡ ಪ್ರದೇಶವನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದರು. ಆದರೆ ಅವರಿಗೆ ಯಾವುದೇ ಅಭಿವೃದ್ಧಿಯ ದೃಷ್ಠಿಕೋನ ಇರಲಿಲ್ಲ. ನಮ್ಮದೇ ಕನ್ನಡದ ಪ್ರದೇಶವಾಗಿರುವ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟ ಹಳೇ ಮೈಸೂರು ಭಾಗ ಅಭಿವೃದ್ಧಿ ಹೊಂದಿದಂತೆ ನಮ್ಮ ಭಾಗ ಅಭಿವೃದ್ಧಿ ಹೊಂದಲಿಲ್ಲ. ಈಗ ಈ ಭಾಗದ ಜನತೆ ಜಾಗೃತರಾಗಬೇಕು. ಶಿಕ್ಷಣಕ್ಕೆ ಒತ್ತು ನೀಡಬೇಕು. ಆಗಲೇ ನಮಗೆ ಸಿಕ್ಕಿರುವ ವಿಶೇಷ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟದ ಇತಿಹಾಸದ ಬಗ್ಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾಲೇಜು ವಿಭಾಗದ ಅರ್ಥಶಾಸ್ತ್ರ ಉಪನ್ಯಾಸಕ ಎಚ್. ಶಿವಕುಮಾರ್ ವಿಶೇಷ ಉಪನ್ಯಾಸ ನೀಡಿದರು.ಇದಕ್ಕೂ ಮುನ್ನ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದ ಬಳಿಕ ಪೊಲೀಸ್, ಗೃಹರಕ್ಷಕ ದಳ, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್‌ಗಳಿಂಧ ಧ್ವಜ ವಂದನೆ ಸ್ವೀಕರಿಸಿದರು. ನಂತರ ವಿವಿಧ ಶಾಲಾ ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು.
ನಗರಸಭೆಯಿಂದ ಸ್ವಚ್ಛತಾ ಆಂದೋಲನದ ಹಿನ್ನೆಲೆ ಎಲ್ಲರೂ ಸ್ವಚ್ಛತೆಯನ್ನು ಕಾಪಾಡಲು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಈ ಸಂದರ್ಭ ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸದಸ್ಯರಾದ ಸಂಗನಗೌಡ, ದೊಡ್ಡಬಸವರಾಜ ಬೂದಿ, ರಾಮಣ್ಣ, ಸೋಮಶೇಖರಪ್ಪ ನಾಯಕ್, ಹನುಮಂತರೆಡ್ಡಿ, ನಾಗರಾಜ್ ಈಡಿಗೇರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಅರಳಿ, ನಿಂಗಪ್ಪ ಗಿಣಿವಾರ್, ಬಸವರಾಜ ಗುಂಡೂರು, ಮರಿಯಪ್ಪ ಸಾಲೋಣಿ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್, ಪಿಎಸ್‌ಐ ಕಾಮಣ್ಣ ನಾಯಕ ಸೇರಿದಂತೆ ಇತರರಿದ್ದರು.
ಖಜನಾ ಅಧಿಕಾರಿ ಹನುಮಂತಪ್ಪ ನಾಯಕ, ಮಂಜುನಾಥ ಚಿಕ್ಕೇನಕೊಪ್ಪ, ತಿಮ್ಮಣ್ಣ ನಾಯಕ, ಗಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು.