ಜೋಗದಲ್ಲಿ ₹185 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

| Published : Nov 29 2024, 01:02 AM IST

ಸಾರಾಂಶ

ವಿಶ್ವವಿಖ್ಯಾತ ಜೋಗ ಜಲಾಪತವನ್ನು ಅದ್ಭುತವಾದ ಪ್ರವಾಸಿತಾಣವಾಗಿಸುವ ನಿಟ್ಟಿನಲ್ಲಿ 185 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ವಿಶ್ವವಿಖ್ಯಾತ ಜೋಗ ಜಲಾಪತವನ್ನು ಅದ್ಭುತವಾದ ಪ್ರವಾಸಿತಾಣವಾಗಿಸುವ ನಿಟ್ಟಿನಲ್ಲಿ 185 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.ತಾಲೂಕಿನ ಜೋಗ ಜಲಪಾತ ಆವರಣದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ, ಪ್ರಾಧಿಕಾರದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಘೋಷಣೆ ಮಾಡಲಾಗಿತ್ತು. ನಮ್ಮ ಸರ್ಕಾರ ಬಂದ ಮೇಲೆ ಹಣ ಬಿಡುಗಡೆ ಮಾಡಿ ಕೆಲಸಗಳನ್ನು ಸಮರೋಪಾದಿಯಲ್ಲಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು.ನಿರಂತರವಾಗಿ ಪ್ರವಾಸಿಗರು ಜೋಗ ಜಲಪಾತಕ್ಕೆ ಭೇಟಿ ನೀಡಬೇಕು. ಪ್ರವಾಸಿಗರನ್ನು ಆಕರ್ಷಿಸಲು ರೈನ್ ಡ್ಯಾನ್ಸ್, ಉದ್ಯಾನವನ, ಈಜುಕೊಳ ಇನ್ನಿತರ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುತ್ತದೆ. ಶಿರೂರು ಕೆರೆ ಮೇಲ್ಭಾಗದಲ್ಲಿ 20 ಎಕರೆ ಪ್ರದೇಶವಿದ್ದು, ಅಲ್ಲಿ ಪ್ರವಾಸಿಗರಿಗಾಗಿ ಅಗತ್ಯ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ ಎಂದು ಹೇಳಿದರು. ಈಗಾಗಲೆ ₹95 ಕೋಟಿ ಬಿಡುಗಡೆಯಾಗಿದ್ದು ಕಾಮಗಾರಿ ನಡೆಯುತ್ತಿದೆ. ಉಳಿದ 99.54 ಕೋಟಿ ಹಣ ಸದ್ಯ ಬಿಡುಗಡೆಯಾಗಲಿದ್ದು, ಅದಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಜೋಗ ಪ್ರವೇಶ ಮಾಡುವ ರಸ್ತೆಯನ್ನು ದ್ವಿಪಥ ರಸ್ತೆಯಾಗಿಸುವುದು, ತ್ರಿಸ್ಟಾರ್ ಹೋಟೆಲ್, ಜಿಪ್ ಲೈನ್, ತಲಕಳಲೆ ಡ್ಯಾಂನಲ್ಲಿ ಬೋಟಿಂಗ್ ಹೀಗೆ ಹಲವು ಯೋಜನೆ ಇದೆ. ಪ್ರವಾಸಿತಾಣವಾಗಿಸುವ ಜತೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಸಹ ಗಮನ ಹರಿಸಲಾಗುತ್ತದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಹೇಮಂತ್ ಕುಮಾರ್, ಕಾರ್ಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಾಜು, ಪ್ರಮುಖರಾದ ಕಲಸೆ ಚಂದ್ರಪ್ಪ, ಮಂಜುನಾಥ್ ಇನ್ನಿತರರು ಹಾಜರಿದ್ದರು.