ರಟ್ಟೀಹಳ್ಳಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನೂರಾರು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು.

ರಟ್ಟೀಹಳ್ಳಿ: ಸಂವಿಧಾನದ ಆಶಯಗಳನ್ನು ಅರಿತು ನಡೆದರೆ ದೇಶ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದುವುದು ಎಂದು ತಹಸೀಲ್ದಾರ್‌ ಶ್ವೇತಾ ಅಮರಾವತಿ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ತಾಲೂಕು ಆಡಳಿತ, ತಾಪಂ, ಪಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸಾರ್ವಭೌಮತೆ ಎತ್ತಿಹಿಡಿಯುವ ಹಾಗೂ ಸರ್ವ ಜನಾಂಗದ ಸಮಾನತೆ ಸಾರುವ ಸಂವಿಧಾನವನ್ನು ಅಂಗೀಕರಿಸಿದ ದಿನ ಇದು. ಜನರಿಂದ ಜನರಿಗಾಗಿ ಹಾಗೂ ಅವರ ಸರ್ವತೋಮುಖ ಅಭಿವೃದ್ಧಿಗಾಗಿ ರಚಿಸಲ್ಪಟ್ಟ ಸಂವಿಧಾನ ಸರ್ವ ಜನಾಂಗದ ಹಕ್ಕುಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.

ಪ್ರಿಯದರ್ಶಿನಿ ಕಾಲೇಜ್ ಉಪನ್ಯಾಸಕ ವೈ.ವೈ. ಮರಳಿಹಳ್ಳಿ ಮಾತನಾಡಿ, ಸಾಮಾಜಿಕ ನ್ಯಾಯ, ಆರ್ಥಿಕ ಮತ್ತು ರಾಜಕೀಯವಾಗಿ ಚಿಂತನೆ, ಅಭಿವ್ಯಕ್ತಿ ನಂಬಿಕೆ, ಶ್ರದ್ಧೆಯನ್ನು ಒಳಗೊಂಡ ಸಂವಿಧಾನವು ದೇಶದ ಕಟ್ಟಕಡೆಯ ಪ್ರಜೆಯ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬ ಭಾರತೀಯನೂ ಸಂವಿಧಾನದ ಆಶಯದ ಬಗ್ಗೆ ಅರಿತು ನಡೆದರೆ ಸಮಾಜ ಸನ್ಮಾರ್ಗದತ್ತ ನಡೆಯುವುದರಲ್ಲಿ ಎರಡು ಮಾತಿಲ್ಲ ಎಂದರು.

ಡಾ. ಬಿ.ಆರ್. ಅಂಬೇಡ್ಕರ್‌ ಹಾಗೂ ಸಂವಿಧಾನ ಪೀಠಿಕೆಯ ಭಾವಚಿತ್ರ ಮೆರವಣಿಗೆ ಸರ್ಕಾರಿ ಮಾದರಿ ಶಾಲೆಯಿಂದ ಪ್ರಾರಂಭವಾಗಿ ಶಿವಾಜಿ ಸರ್ಕಲ್, ಭಗತ್‍ಸಿಂಗ ಸರ್ಕಲ್ ಮೂಲಕ ಡಾ. ಅಂಬೇಡ್ಕರ್‌ ಭವನದ ವರೆಗೆ ಸಾಗಿತು. ನೂರಾರು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು.

ಪಪಂ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಬಸವರಾಜ ಆಡಿನವರ, ಬಸವರಾಜ ಕಟ್ಟಿಮನಿ, ವೀರನಗೌಡ ಪ್ಯಾಟಿಗೌಡ್ರ, ಪಿ.ಡಿ. ಬಸನಗೌಡ್ರ, ರವಿ ಹದಡೇರ, ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ಹನುಮಂತಪ್ಪ ಗಾಜೇರ, ಸಿದ್ದಪ್ಪ ಹರಿಜನ, ರಾಮಣ್ಣ ಗುಡ್ಡದಮಾದಾಪುರ, ಮಂಜು ತಳವಾರ, ರಮೇಶ ಕೊರವರ, ಪ್ರಕಾಶ ಕೊರವರ ಇದ್ದರು.