ರೋಣ ಮತಕ್ಷೇತ್ರದಲ್ಲಿ ಅಂದಾಜು ₹೨೦೦ ಕೋಟಿ ವೆಚ್ಚದಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯಾಗಿದ್ದು, ಪಟ್ಟಣದಲ್ಲಿ ನ್ಯಾಯಾಲಯ, ಅಗ್ನಿಶಾಮಕ ಠಾಣೆ, ಮೌಲಾನಾ ಆಜಾದ್ ಶಾಲೆ, ಕ್ರೀಡಾಂಗಣ ಹಾಗೂ ಪ್ರಜಾಸೌಧ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರವೇ ಪೂರ್ಣಗೊಳಿಸುತ್ತೇವೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ಗಜೇಂದ್ರಗಡ: ತಾಲೂಕಿನ ಜನತೆಯ ಬಹುವರ್ಷದ ಬೇಡಿಕೆಯಾಗಿದ್ದ ಪ್ರಜಾಸೌಧ ನಿರ್ಮಾಣದ ಭೂಮಿಪೂಜೆ ನೆರವೇರಿಸುವ ಮೂಲಕ ಜನತೆಯ ಆಶಯಕ್ಕೆ ಪೂರಕವಾಗಿ ಆಡಳಿತ ನಡೆಸುತ್ತಿದ್ದೇವೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ಸಮೀಪದ ಕಾಲಕಾಲೇಶ್ವರ ರಸ್ತೆಯಲ್ಲಿನ ಪಂಪ್‌ಹೌಸ್ ಬಳಿ ಮಂಗಳವಾರ ಅಂದಾಜು ₹೮.೬೦ ಕೋಟಿ ವೆಚ್ಚದ ಪ್ರಜಾಸೌಧ ಕಟ್ಟಡದ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ವಿಧಾನಸಭಾ ಚುನಾವಣೆ ವೇಳೆ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಸಹಿಸಿಕೊಳ್ಳದ ವಿಪಕ್ಷಗಳು ಪಂಚ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯಗಳೆಂದು ಜರಿದಿದ್ದರು. ಸರ್ವರಿಗೂ ಸಮನಾಗಿ ಸಂಪತ್ತನ್ನು ಹಂಚುವುದರ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ರೋಣ ಮತಕ್ಷೇತ್ರದಲ್ಲಿ ಅಂದಾಜು ₹೨೦೦ ಕೋಟಿ ವೆಚ್ಚದಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯಾಗಿದ್ದು, ಪಟ್ಟಣದಲ್ಲಿ ನ್ಯಾಯಾಲಯ, ಅಗ್ನಿಶಾಮಕ ಠಾಣೆ, ಮೌಲಾನಾ ಆಜಾದ್ ಶಾಲೆ, ಕ್ರೀಡಾಂಗಣ ಹಾಗೂ ಪ್ರಜಾಸೌಧ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರವೇ ಪೂರ್ಣಗೊಳಿಸುತ್ತೇವೆ ಎಂದರು.ಪ್ರಾಸ್ತಾವಿಕವಾಗಿ ಶಿವರಾಜ ಘೋರ್ಪಡೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ಪಂಚ ಗ್ಯಾರಂಟಿಗಳ ಮೂಲಕ ಜನರ ನೆರವಿಗೆ ಧಾವಿಸಿದೆ. ಶಾಸಕ ಜಿ.ಎಸ್. ಪಾಟೀಲ ಅವರು ಕ್ಷೇತ್ರದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿದ್ದಾರೆ ಎಂದರು.ಮುಖಂಡರಾದ ಎಚ್.ಎಸ್. ಸೋಂಪುರ ಹಾಗೂ ರಾಜು ಸಾಂಗ್ಲೀಕರ ಮಾತನಾಡಿ, ಗೃಹಲಕ್ಷ್ಮೀ ಯೋಜನೆ ಹಣ ೨ ತಿಂಗಳು ತಡವಾಗಿದ್ದಕ್ಕೆ ಬೊಬ್ಬೆ ಹಾಕುತ್ತಿರುವ ವಿಪಕ್ಷಗಳು ಕಾಂಗ್ರೆಸ್ ಸರ್ಕಾರ ಜನಪರ ಕಾರ್ಯಕ್ರಮಗಳ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಬಡವರಿಗೆ ಲಂಚ ಇಲ್ಲದೆ ಸಂಪತ್ತನ್ನು ಹಂಚುವ ಯೋಜನೆಯೇ ಪಂಚ ಗ್ಯಾರಂಟಿ ಯೋಜನೆಗಳಾಗಿವೆ. ಗಜೇಂದ್ರಗಡ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕ ಜಿ.ಎಸ್. ಪಾಟೀಲ ಅವರು ಶ್ರಮಿಸುತ್ತಿದ್ದಾರೆ ಎಂದರು.ಮುಖಂಡ ಸಿದ್ದಣ್ಣ ಬಂಡಿ ಮಾತನಾಡಿ, ವಿಪಕ್ಷಗಳು ಅದನ್ನು ಮಾಡಿದ್ದೇವೆ, ಇದನ್ನು ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಶಾಸಕ ಜಿ.ಎಸ್. ಪಾಟೀಲ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಅಂದಾಜು ₹೯ ಕೋಟಿ ವೆಚ್ಚದಲ್ಲಿ ನ್ಯಾಯಾಲಯ, ಅಂದಾಜು ₹೮ ಕೋಟಿ ವೆಚ್ಚದಲ್ಲಿ ಪ್ರಜಾಸೌಧ, ಕಾಲಕಾಲೇಶ್ವರದಲ್ಲಿ ರೋಪ್- ವೇ ಸೇರಿ ಇತರ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು. ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ತಾಪಂ ಇಒ ಸುಭಾಸ ಕಂದಕೂರ, ಪುರಸಭೆ ಮಾಜಿ ಅಧ್ಯಕ್ಷ ಸುಭಾಸ ಮ್ಯಾಗೇರಿ, ಮುಖಂಡರಾದ ವೀರಣ್ಣ ಶೆಟ್ಟರ, ರಫೀಕ್ ತೋರಗಲ್, ಮುರ್ತುಜಾ ಡಾಲಾಯತ್, ಬಿ.ಎಸ್. ಶೀಲವಂತರ, ಎ.ಡಿ. ಕೋಲಕಾರ, ಶರಣು ಪೂಜಾರ, ಅರಿಹಂತ ಬಾಗಮಾರ, ಶಿವು ಚವ್ಹಾಣ, ಸಿದ್ದಣ್ಣ ಚೋಳಿನ, ಭೀಮಣ್ಣ ತಳವಾರ, ಶರಣಪ್ಪ ಚಳಗೇರಿ, ಸಿದ್ದು ಗೊಂಗಡಶೆಟ್ಟಿಮಠ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸೇರಿ ಇತರರು ಇದ್ದರು.