ಒಕ್ಕಲಿಗರು ಈ ರಾಜ್ಯಕ್ಕೆ ಅನ್ನ ನೀಡುವ ಸಮುದಾಯವಾಗಿದ್ದು, ತಮ್ಮ ಅಭಿವೃದ್ಧಿಯೊಂದಿಗೆ ತಳಸಮುದಾಯದ ಹಿತವನ್ನು ಬಯಸುವ ಜನಾಂಗವಾಗಿದೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಒಕ್ಕಲಿಗರು ಈ ರಾಜ್ಯಕ್ಕೆ ಅನ್ನ ನೀಡುವ ಸಮುದಾಯವಾಗಿದ್ದು, ತಮ್ಮ ಅಭಿವೃದ್ಧಿಯೊಂದಿಗೆ ತಳಸಮುದಾಯದ ಹಿತವನ್ನು ಬಯಸುವ ಜನಾಂಗವಾಗಿದೆ. ರಾಜ್ಯದಲ್ಲಿ ಒಕ್ಕಲಿಗ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದಾಗ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಸಂಸ್ಥಾನದ ನಂಜಾವಧೂತ ಸ್ವಾಮೀಜಿ ತಿಳಿಸಿದರು.ಪಟ್ಟಣದ ಹೊರವಲಯದಲ್ಲಿ ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳಲಿರುವ ಒಕ್ಕಲಿಗರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ಒಕ್ಕಲಿಗ ನಾಯಕರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗಲೆಲ್ಲ ಈ ರಾಜ್ಯದ ಎಲ್ಲ ವರ್ಗಗಳ ಜನರಿಗೆ ವಿಶೇಷವಾಗಿ ರೈತರಿಗೆ ಅಭಿವೃದ್ಧಿ ಕ್ರಾಂತಿಯನ್ನೇ ಮಾಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಿದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ರು.೨೬ ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು. ರು.೨೮ ಸಾವಿರ ಕೋಟಿ ಭದ್ರ ಮೇಲ್ದಂಡೆ ಯೋಜನೆಗೆ ಬುನಾದಿಯನ್ನು ಹಾಕಿದರು ಎಂದರು.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯಕ್ಕೆ ಶಾಶ್ವತವಾದ ಆದಾಯ ತರುವಂತ ಯೋಜನೆಗಳನ್ನು ಮಾಡಿದ್ದಾರೆ. ಈಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಒಟ್ಟಾರೆ ಒಕ್ಕಲಿಗ ನಾಯಕರು ಅಧಿಕಾರದಲ್ಲಿದ್ದಾಗ ತಮ್ಮ ಜಾತಿಯ ಸ್ವಹಿತಕಷ್ಣ ಮಾಡದೇ ಎಲ್ಲ ವರ್ಗಗಳ ಜನರ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಒಕ್ಕಲಿಗರ ಉಪಪಂಗಡಗಳ ಆಚರಣೆಗಳಲ್ಲಿ ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ ಸಮುದಾಯದವರು ಎಂಬ ಭಾವನೆ ಮೂಡಬೇಕು. ಹಿಂದೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಿ ಪರಸ್ಪರ ಕೊಟ್ಟು-ತೆಗೆದುಕೊಳ್ಳುವ ಮನೋಭಾವ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ. ಈ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಬೇಕು ಎಂದರು.
ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ನಮ್ಮವರನ್ನು ನಮ್ಮವರೇ ಕಾಲೆಳೆಯುವ ಪ್ರವೃತ್ತಿಯಿಂದಾಗಿ ದೊಡ್ಡ ಒಕ್ಕಲಿಗ ಸಮುದಾಯ ರಾಜಕೀಯವಾಗಿ ಹಿಂದುಳಿದಿದೆ. ಎಸ್.ಎಂ.ಕೃಷ್ಣ ಅವರನ್ನು ಹೊರತುಪಡಿಸಿದರೆ ಒಕ್ಕಲಿಗ ಸಮುದಾಯದ ನಾಯಕರಿಗೆ ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಒಕ್ಕಲಿಗರು ನಿರ್ಣಾಯಕ ಸಂಖ್ಯೆಯಲ್ಲಿದ್ದರೂ, ಟಿ.ಬಿ.ಜಯಚಂದ್ರ ಅವರ ನಂತರ ಸಮುದಾಯದವರಿಗೆ ಸಚಿವ ಸ್ಥಾನ ದೊರೆತಿಲ್ಲ. ಸಮುದಾಯದವರು ರಾಜಕೀಯವಾಗಿ ಜಾಗೃತರಾಗಬೇಕು ಎಂದರು. ಇದೆ ಸಂದರ್ಭದಲ್ಲಿ ಸಮುದಾಯದ ಮುಖಂಡ ಪಿ.ಎನ್.ಕೃಷ್ಣಮೂರ್ತಿ, ಹಾಗೂ ಎಂ.ಎನ್.ಜೆ.ಮಂಜುನಾಥ್ ಅವರು ಸಮುದಾಯ ಭವನ ನಿರ್ಮಾಣಕ್ಕೆ ತಲಾ ರು. ೫೦ ಲಕ್ಷ ನೀಡುವುದಾಗಿ ಘೋಷಣೆ ಮಾಡಿ ಮುಂಗಡವಾಗಿ ೧೦ ಲಕ್ಷ ನೀಡಿದರು.ಕೇಂದ್ರ ಒಕ್ಕಲಿಗ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಮುಖಂಡರಾದ ಆಡಿಟರ್ ನಾಗರಾಜು, ಜಿ.ಎಂ.ಕಾಮರಾಜು ವೇದಿಕೆಯಲ್ಲಿ ಸಂಘದ ಅಧ್ಯಕ್ಷ ರಂಗರಸಪ್ಪ, ಕಾರ್ಯದರ್ಶಿ ನರಸಿಂಹರಾಜು, ಜಯಮ್ಮ, ಟಿ.ಡಿ.ಪ್ರಸನ್ನಕುಮಾರ್, ವೀರಕ್ಯಾತರಾಯ, ಪ್ರಕಾಶ್, ರವಿಕುಮಾರ್, ಮಾವತ್ತೂರು ಮಂಜುನಾಥ್, ಲಕ್ಷ್ಮೀಶ್, ಸಾಕರಾಜು, ದೊಡ್ಡಯ್ಯ, ವೆಂಕಟಪ್ಪ, ನಾಗೇಶ್ ಕುಮಾರ್, ರಮೇಶ್, ಮಲ್ಲಿಕಾರ್ಜುನ, ರಂಗರಾಜು, ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.