ಸಾರಾಂಶ
ಗ್ರಾಹಕರು ಮತದಾನದ ದಿನ ತಪ್ಪದೇ ಮತಗಟ್ಟೆಗೆ ಹೋಗಿ ಮತದಾನ ಮಾಡಿ, ನಿಮ್ಮ ಮತ ಅಮೂಲ್ಯವಾದದ್ದು, ಅದನ್ನು ಹಣದ ಆಸೆಗೆ ಮಾರಿಕೊಳ್ಳಬೇಡಿ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಆರ್ಥಿಕ ಸಾಕ್ಷರತೆ ಸಲಹೆಗಾರ ಪಿ.ಎಸ್.ಚಿಮ್ಮಲಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಲ್ಹಾರ
ಗ್ರಾಹಕರು ಮತದಾನದ ದಿನ ತಪ್ಪದೇ ಮತಗಟ್ಟೆಗೆ ಹೋಗಿ ಮತದಾನ ಮಾಡಿ, ನಿಮ್ಮ ಮತ ಅಮೂಲ್ಯವಾದದ್ದು, ಅದನ್ನು ಹಣದ ಆಸೆಗೆ ಮಾರಿಕೊಳ್ಳಬೇಡಿ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಆರ್ಥಿಕ ಸಾಕ್ಷರತೆ ಸಲಹೆಗಾರ ಪಿ.ಎಸ್.ಚಿಮ್ಮಲಗಿ ಹೇಳಿದರು.ತಾಲೂಕಿನ ಮಟ್ಟಿಹಾಳ ಕ್ರಾಸ್‌ನಲ್ಲಿ ಗುರುವಾರ ಕೆನೆರಾ ಬ್ಯಾಂಕಿನ ಗ್ರಾಹಕರಿಗೆ ಮತದಾನ ಜಾಗೃತಿ ಸಭೆ ನಡೆಸಿ ಮಾತನಾಡಿದ ಅವರು, ಪ್ರಜೆಗಳೇ ಇಲ್ಲಿ ಪ್ರಭುಗಳು. ಇಲ್ಲಿರುವುದು ಪ್ರಜಾಪ್ರಭುತ್ವದ ಸರ್ಕಾರ. ಇಲ್ಲಿ ಎಲ್ಲರೂ ಆಳುವುದಕ್ಕೆ ಸಾಧ್ಯವಿಲ್ಲ. ಆದರೆ ಒಬ್ಬರನ್ನು ಆರಿಸಿ ಕಳಿಸಬೇಕಾಗಿದೆ. ನಿಮ್ಮ ಮತಕ್ಕೆ ದೊಡ್ಡ ಮೌಲ್ಯವಿದೆ. ಅಂತಹ ಅಮೂಲ್ಯವಾದ ಮತವನ್ನು ಚಲಾಯಿಸದೇ ಮನೆಯಲ್ಲಿ ಕುಳಿತರೆ ಯೋಗ್ಯವಲ್ಲದ ವ್ಯಕ್ತಿಗಳು ಚುನಾಯಿತರಾಗಿ ಬರುತ್ತಾರೆ. ಅವರಿಂದ ದೇಶದಲ್ಲಿರುವ ಬಡತನ ಸಮಸ್ಯೆ, ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂದರು.
ಮತದಾನದ ದಿನ ಹಣದ ಆಸೆಗೆ ಮತವನ್ನು ಮಾರಿಕೊಂಡರೆ ನಿಮ್ಮನ್ನು ನೀವು ಮಾರಿಕೊಂಡಂತೆ. ಮಾರಿಕೊಂಡ ಮತದಿಂದ ಯಾವ ಅಭಿವೃದ್ಧಿ ಕೆಲಸಗಳನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಚುನಾವಣೆಗಾಗಿ ಸರ್ಕಾರ ಸಾವಿರಾರು ಕೋಟಿಯಷ್ಟು ಹಣವನ್ನು ಖರ್ಚು ಮಾಡುತ್ತದೆ ಹೀಗಾಗಿ ತಪ್ಪದೇ ಎಲ್ಲರೂ ಮತದಾನ ಮಾಡಿ ಎಂದು ವಿನಂತಿಸಿದರು.ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಶಾಖಾ ಪ್ರಬಂಧಕ ಶಿವಾನಂದ ಕುಂಬಾರ ಹಾಗೂ ಕೆನೆರಾ ಬ್ಯಾಂಕಿನ ಗ್ರಾಹಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.