ಸಾರಾಂಶ
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಂದರ್ಭದಿಂದ ಇಂದಿನವರೆಗೂ ಜನರ ಸೇವೆಗಾಗಿ ಜೀವನ ಮೀಸಲಿಟ್ಟಿದ್ದೇನೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಂದರ್ಭದಿಂದ ಇಂದಿನವರೆಗೂ ಜನರ ಸೇವೆಗಾಗಿ ಜೀವನ ಮೀಸಲಿಟ್ಟಿದ್ದೇನೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್‌ನಲ್ಲಿ ಆದಿಚುಂಚನಗಿರಿ ಆಸ್ಪತ್ರೆ, ಚೌದ್ರಿ ಆಸ್ಪತ್ರೆ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ ಹಾಗೂ ಶಾಸಕ ಎಂ.ಟಿ. ಕೃಷ್ಣಪ್ಪ ಅಭಿಮಾನಿ ಬಳಗ ಸಂಯುಕ್ತಾಶ್ರಯದಲ್ಲಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಳೆದ ಮೂರು ಬಾರಿ ನನ್ನನ್ನು ಶಾಸಕರನ್ನಾಗಿ ಮಾಡಿದ ಈ ಕ್ಷೇತ್ರದ ಜನರ ಋಣ ತೀರಿಸುವುದು ಸಾಧ್ಯವೇ ಇಲ್ಲ. ಈ ದರಿದ್ರ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂಬುದೇ ದೊಡ್ಡ ಚಿಂತೆ. ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. 14 ತಿಂಗಳಾದರೂ ಯಾವ ಊರಿಗೂ ಒಂದು ರಸ್ತೆ, ಚರಂಡಿ ಮಾಡಿಸಲೂ ಆಗಿಲ್ಲ. ಹಾಗಾಗಿ ಜನರಿಗೆ ಉತ್ತರ ಕೊಡಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೆ ಕ್ಯಾಬಿನೆಟ್ ದರ್ಜೆ, ವಿ.ಸೋಮಣ್ಣರನ್ನು ಕೇಂದ್ರ ಸಚಿವರನ್ನಾಗಿ ಮಾಡಿರುವ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದರು. ಶಿಬಿರದಲ್ಲಿ ಕ್ಯಾನ್ಸರ್, ಮಧುಮೇಹ, ಹೃದ್ರೋಗ, ಮೂತ್ರಪಿಂಡ, ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರು, ದಂತ ವೈದ್ಯ, ಕಿವಿ, ಮೂಗು, ಗಂಟಲು, ಕಣ್ಣು, ಚರ್ಮರೋಗ, ಮಾನಸಿಕ ರೋಗಗಳ ತಪಾಸಣೆ ಮಾಡಲಾಯಿತು. ವೈದ್ಯರು ಹಾಗೂ ಸರ್ಜನ್‌ಗಳು ಪಾಲ್ಗೊಂಡಿದ್ದರು.
ಶಾಸಕ ಎಂ.ಟಿ.ಕೃಷ್ಣಪ್ಪ ತಮ್ಮ ೭೪ ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಪತ್ನಿ ಸರಳ, ಪುತ್ರರಾದ ರಾಜೀವ್, ವೆಂಕಟೇಶ್, ಪುತ್ರಿ ಆಶಾ, ಅಳಿಯ ಡಾ. ಚೌದ್ರಿನಾಗೇಶ್, ಮಾಜಿ ಶಾಸಕರಾದ ಸೊಗಡು ಶಿವಣ್ಣ, ಎಚ್.ಬಿ.ನಂಜೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಜೆಡಿಎಸ್ ಪಕ್ಷದ ವಕ್ತಾರ ವೆಂಕಟಪುರದ ಯೋಗೀಶ್, ಹೆಡಿಗೆಹಳ್ಳಿ ವಿಶ್ವನಾಥ್, ದೊಡ್ಡಾಘಟ್ಟ ಚಂದ್ರೇಶ್, ವಕೀಲ ಧನಪಾಲ್, ಬೂವನಹಳ್ಳಿ ದೇವರಾಜು, ಮಂಗಿಗುಪ್ಪೆ ಬಸವರಾಜು, ಹಾವಾಳ ರಾಮೇಗೌಡ, ವಿಜೇಂದ್ರಕುಮಾರ್, ಪುನಿತ್ ಇದ್ದರು.