ಅಭಿವೃದ್ಧಿ ಕಾಮಗಾರಿ ನಡೆದಾಗ ಯಾರೂ ನಿರ್ಲಕ್ಷ್ಯ ಮಾಡಬಾರದು. ಸರ್ಕಾರ ಅಭಿವೃದ್ಧಿಗಾಗಿ ಬಳಸುವ ಹಣ ಸರ್ಕಾರದ್ದಲ್ಲ, ಅದು ಸಾರ್ವಜನಿಕರದ್ದು.

ಹಳಿಯಾಳ: ಸರ್ಕಾರ, ಅಧಿಕಾರಿಗಳು, ಗುತ್ತಿಗೆದಾರರು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನೂ ಅಭಿವೃದ್ಧಿಯ ಕಾವಲುಗಾರನಾಗಬೇಕು. ನಿಮ್ಮ ಕಾಳಜಿಯೇ ಉತ್ತಮ ಅಭಿವೃದ್ಧಿಗೆ ಮುನ್ನುಡಿ ಎಂದು ಹಿರಿಯ ಶಾಸಕ ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

ಶುಕ್ರವಾರ ತಾಲೂಕಿನ ಭಾಗವತಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅಭಿವೃದ್ಧಿ ಕಾಮಗಾರಿ ನಡೆದಾಗ ಯಾರೂ ನಿರ್ಲಕ್ಷ್ಯ ಮಾಡಬಾರದು. ಸರ್ಕಾರ ಅಭಿವೃದ್ಧಿಗಾಗಿ ಬಳಸುವ ಹಣ ಸರ್ಕಾರದ್ದಲ್ಲ, ಅದು ಸಾರ್ವಜನಿಕರದ್ದು. ನೀವು ನೀಡುವ ತೆರಿಗೆ ಹಣದಿಂದಲೇ ರಸ್ತೆ, ಚರಂಡಿ, ಕುಡಿಯುವ ನೀರು, ಶಾಲಾ ಕಟ್ಟಡ, ಆಸ್ಪತ್ರೆ, ಬಸ್ ನಿಲ್ದಾಣ ಸೇರಿದಂತೆ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನ ಕೆ.ಟಿ. ರಸ್ತೆಯಿಂದ ತಟ್ಟಿಗೇರಾ ಕೂಡು ರಸ್ತೆ ಸುಧಾರಣೆ(ಅಂದಾಜು ವೆಚ್ಚ ₹1 ಕೋಟಿ) ಹಾಗೂ ಭಾಗವತಿ ಗೌಳಿವಾಡಾದಿಂದ ತಟ್ಟಿಹಳ್ಳ ತರಬೇತಿ ಕೇಂದ್ರದ ಕ್ರಾಸ್‌ವರೆಗೆ ಅಂದಾಜು ₹1.75 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಸಮಾಜ ಕಲ್ಯಾಣ ಇಲಾಖೆಯಿಂದ ಬುಡಕಟ್ಟು ಸಿದ್ದಿ ಸಮುದಾಯದವರಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಯಿತು. ಕೊಲೇರಾಂಗ ಗ್ರಾಮದಲ್ಲಿ ₹20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡ ಹಾಗೂ ದಾಂಡೇಲಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್‌ನ ಸಿಎಸ್ಆರ್ ಯೋಜನೆಯಡಿ ಭಾಗವತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ತರಗತಿ ಕೊಠಡಿಯನ್ನು ಶಾಸಕರು ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ತಹಸೀಲ್ದಾರ್ ಫಿರೋಜ್ ಷಾ ಸೊಮನಕಟ್ಟಿ, ಲೋಕೋಪಯೋಗಿ ಎಇಇ ಎಸ್.ವಿ. ಅಥಣಿ, ಸಂಜೀವ ನಾಯ್ಕ, ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಪವಾರ, ಬಿಆರ್‌ಸಿ ಕೇಂದ್ರದ ಎಂ.ಎಸ್. ಚೌಗುಲಾ, ಬಿಆರ್‌ಪಿ ವಿಷ್ಣು ನಾಯ್ಕ, ಶಿಕ್ಷಣ ಇಲಾಖೆಯ ಚೌಗುಲಾ, ಭಾಗವತಿ ಮುಖಂಡರಾದ ಅರ್ಜುನ ಭೋವಿ, ರಾಮಚಂದ್ರ ಬುರ್ಲಿ ಹಾಗೂ ಇತರರು ಇದ್ದರು. ಭಾಗವತಿ ಶಾಲೆ ಮುಖ್ಯೋಧ್ಯಾಯರಾದ ಬಿ. ರಾಧಾ ಕಾರ್ಯಕ್ರಮ ನಿರ್ವಹಿಸಿದರು.