ಸಹಕಾರ ಸಂಘಗಳು ರಾಜಕೀಯದಿಂದ ದೂರವಿದ್ದರೆ ಅಭಿವೃದ್ಧಿ ಸಾಧ್ಯ: ಶ್ರೀನಿವಾಸಗೌಡ

| Published : Sep 20 2024, 01:46 AM IST

ಸಾರಾಂಶ

ಸಂಘವು ಆರ್ಥಿಕವಾಗಿ ಸದೃಢವಾಗಿದೆ, ಮುಂದಿನ ದಿನಗಳಲ್ಲಿ ಸ್ವಂತ ಶಕ್ತಿಯಿಂದ ರೈತರಿಗೆ, ಮಹಿಳೆಯರಿಗೆ ಬೇಕಾದ ಸಾಲ ವಿತರಣೆ ಮಾಡಲಾಗುತ್ತದೆ. ಯಾವುದೇ ಬ್ಯಾಂಕಿನ ಮೇಲೆ ಅವಲಂಬನೆಯಾಗುವ ಪರಿಸ್ಥಿತಿಯಿಲ್ಲ. ಸಂಘದಿಂದ ಈಗಲೂ ಕೇಂದ್ರ ಬ್ಯಾಂಕಿನಲ್ಲಿ ೫ ಕೋಟಿ ರು. ಠೇವಣಿ ಇಡಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಸಹಕಾರ ಸಂಘಗಳು ರಾಜಕೀಯ ಹಸ್ತಕ್ಷೇಪದಿಂದ ದೂರ ಇದ್ದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ, ರಾಜಕೀಯ ಬದಿಗಿಟ್ಟು ಆಡಳಿತ ಮಂಡಳಿ ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡಾಗ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯ ಎಂದು ಇಫ್ಕೋ ಸಂಸ್ಥೆ ನಿರ್ದೇಶಕ ಹಾಗೂ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಹೇಳಿದರು.

ತಾಲೂಕಿನ ಕಡಗಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಿಂದ ೨೦೨೩-೨೪ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಬೆಳ್ಳಿ ಕಿರೀಟ ತೊಡಿಸಿ ಸಂಘದ ಆಡಳಿತ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಹಕಾರ ಸಂಘಗಳಿಂದ ರೈತರ, ಮಹಿಳೆಯರ ಸಬಲೀಕರಣ ಆಗುತ್ತದೆ ಎಂಬುದಕ್ಕೆ ಕೋಲಾರ ಜಿಲ್ಲೆಯು ನಿದರ್ಶನವಾಗಿದೆ. ಆಡಳಿತ ಮಂಡಳಿ ಅವಧಿ ಮುಗಿದ ನಂತರ ಡಿಸಿಸಿ ಬ್ಯಾಂಕಿನಿಂದ ಸಾಲ ವಿತರಣೆ ಆಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಸರ್ಕಾರ ಕೂಡಲೇ ಚುನಾವಣೆ ನಡೆಸಿ ರೈತರ, ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಕೆ.ವಿ.ದಯಾನಂದ್ ಮಾತನಾಡಿ, ತಂದೆ, ತಾಯಿ ಜಗಳದಲ್ಲಿ ಕೂಸು ಬಡವಾಯಿತು ಎಂಬತಾಗಿದೆ ಕೋಲಾರ- ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಪರಿಸ್ಥಿತಿ, ಆಡಳಿತ ಮಂಡಳಿಯ ಅವಧಿ ಮುಗಿದ ನಂತರ ಸರ್ಕಾರವು ಸಕಾಲಕ್ಕೆ ಚುನಾವಣೆ ನಡೆಸದಿರುವುದರಿಂದ ರೈತರು, ಮಹಿಳೆಯರು ಸಾಲ ಸೌಲಭ್ಯಗಳಿಂದ ವಂಚನೆಗೆ ಒಗಾಗುವಂತಾಗಿದೆ ಎಂದು ಕಿಡಿಕಾರಿದರು.

ಒಂದು ಕಾಲದಲ್ಲಿ ಬ್ಯಾಂಕಿನಿಂದ ಲಾಭ ಪಡೆದುಕೊಂಡ ಕೆಲ ರಾಜಕೀಯ ನಾಯಕರು ಈಗ ಚುನಾವಣೆಗೆ ಅಡ್ಡಗಾಲು ಹಾಕುತ್ತಿದ್ದಾರೆ, ಸಾರ್ವಜನಿಕರ ಸಂಸ್ಥೆಯನ್ನು ಪ್ರತಿಷ್ಠೆಗೆ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ, ಇವರಿಗೆ ಮಹಿಳೆಯರ, ರೈತರ ಶಾಪತಟ್ಟುತ್ತದೆ ಎಂದರು.

ಸಂಘದ ವ್ಯಾಪ್ತಿಗೆ ೧೮ ಹಳ್ಳಿಗಳು ಒಳಪಡುತ್ತವೆ, ೩ ಸಾವಿರ ಷೇರುದಾರರಿದ್ದು, ಒಂದು ವರ್ಷದಲ್ಲಿ ೧೬ ಕೋಟಿ ರು.ಗೂ ಅಧಿಕ ವಹಿವಾಟು ನಡೆಸುವ ಮೂಲಕ ನಿವ್ವಳ ೨೬ ಲಕ್ಷ ರು. ಲಾಭಗಳಿಸಿದೆ. ಜತೆಗೆ ಕುರಗಲ್ ಮತ್ತು ಚನ್ನಸಂದ್ರದಲ್ಲಿ ಗೋದಾಮು ನಿರ್ಮಿಸಲಾಗಿದ್ದು, ಬ್ಯಾಂಕಿನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರು ಆರ್ಥಿಕ ನೆರವು ಕಲ್ಪಿಸಿದ್ದಾರೆ ಎಂದು ಸ್ಮರಿಸಿದರು.

ಸಂಘವು ಆರ್ಥಿಕವಾಗಿ ಸದೃಢವಾಗಿದೆ, ಮುಂದಿನ ದಿನಗಳಲ್ಲಿ ಸ್ವಂತ ಶಕ್ತಿಯಿಂದ ರೈತರಿಗೆ, ಮಹಿಳೆಯರಿಗೆ ಬೇಕಾದ ಸಾಲ ವಿತರಣೆ ಮಾಡಲಾಗುತ್ತದೆ. ಯಾವುದೇ ಬ್ಯಾಂಕಿನ ಮೇಲೆ ಅವಲಂಬನೆಯಾಗುವ ಪರಿಸ್ಥಿತಿಯಿಲ್ಲ. ಸಂಘದಿಂದ ಈಗಲೂ ಕೇಂದ್ರ ಬ್ಯಾಂಕಿನಲ್ಲಿ ೫ ಕೋಟಿ ರು. ಠೇವಣಿ ಇಡಲಾಗಿದೆ ಎಂದು ತಿಳಿಸಿದರು.

ಪರ್ಜೇನಹಳ್ಳಿ ರೈತ ಪಿಳ್ಳಪ್ಪ ಮಾತನಾಡಿ, ಸಂಘವು ಮತ್ತಷ್ಟು ಅಭಿವೃದ್ಧಿಯಾಗಿ ಹೆಚ್ಚಿನ ಜನಕ್ಕೆ ಸೌಲಭ್ಯ ನೀಡುವಂತಾಗಲಿ. ಇಲ್ಲಿ ನಾನೂ ಠೇವಣಿ ಇಟ್ಟಿದ್ದೇನೆ, ಉಳಿದವರು ಇಲ್ಲೇ ಠೇವಣಿ ಇಡಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಇಫ್ಕೋ ಕಂಪನಿಯ ನಿರ್ದೇಶಕ ಹಾಗೂ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಅವರಿಗೆ ಸೊಸೈಟಿಯಿಂದ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಡೇವಿಡ್, ನಿರ್ದೇಶಕರಾದ ರಾಜಣ್ಣ, ವೆಂಕಟೇಶ್, ಮುನಿರಾಜು, ರಾಮಾಂಜಿನೇಯ, ಅಂಬರೀಶ್, ಚೌಡರೆಡ್ಡಿ, ಮಂಜುನಾಥ್, ಸುಬ್ರಮಣಿ, ವಿಜಯಮ್ಮ, ಸಿಇಒ ಮುನೀಶ್ವರಪ್ಪ, ಸಿಬ್ಬಂದಿ ನಾಗೇಶ್, ಪ್ರಶಾಂತ್, ಜಯರಾಜ್, ಸಿಂಧೂ, ರಾಜಣ್ಣ ಇದ್ದರು.