ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮಡಿವಾಳ ಸಮಾಜವು ಎಲ್ಲಾ ಸಮಾಜಕ್ಕಿಂತ ಚಿಕ್ಕ ಜನಾಂಗವಾಗಿದೆ. ಸಮಾಜದ ಬಾಂಧವರು ಒಗ್ಗೂಡಿ ಸರ್ಕಾರದ ಯೋಜನೆಗಳ ಸವಲತ್ತು ಪಡೆದುಕೊಂಡು ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಚಿತ್ರದುರ್ಗದ ಮಹಾಸಂಸ್ಥಾನ ಮಠದ ಶ್ರೀ ಬಸವ ಮಾಚಿದೇವ ಮಹಾ ಸ್ವಾಮೀಜಿಯವರು ನುಡಿದರು.ನಗರದ ಬಸವನಹಳ್ಳಿ ಸಮೀಪದ ಜಿಲ್ಲಾ ಮಡಿವಾಳ ಸಂಘದ ಭವನದಲ್ಲಿ ಭಾನುವಾರ ಏರ್ಪಡಿಸಿದ್ಧ ‘ಮನೆ ಮನೆಗೆ ಮಾಚಿದೇವ’ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸಮುದಾಯದವರು ಸಂಘಟಿತರಾದರೆ ಮಾತ್ರ ಸಮಾಜವು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮುನ್ನೆಲೆಗೆ ಬರಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು ಎಂದರು.ಮಡಿವಾಳ ಸಮಾಜದ ಮುಂದಿನ ಪೀಳಿಗೆ ಉಳಿಸಿ ಬೆಳೆಸಲು ಇಂದಿನಿಂದಲೇ ಜನಾಂಗದ ಮುಖಂಡರು ಪ್ರಜ್ಞಾವಂತರಾಗಬೇಕು. ಮಡಿವಾಳ ಸಮುದಾಯದವರಿಗೆ ಅರಿವನ್ನು ಮೂಡಿಸುವುದು ಜಿಲ್ಲಾ ಮುಖಂಡರುಗಳ ಕರ್ತವ್ಯ. ಹಾಗೇ ಆದಾಗ ಮಾತ್ರ ಮಡಿವಾಳರ ಜೀವನ ಸುಧಾರಿಸಲು ಸಾಧ್ಯ ಎಂದು ತಿಳಿಸಿದರು.
ರಾಜಕೀಯವಾಗಿ ಜನಾಂಗದ ಯಾವುದೇ ಮುಖಂಡರು ಜನಪ್ರತಿನಿಧಿಗಳಾಗಿಲ್ಲ. ಆ ನಿಟ್ಟಿನಲ್ಲಿ ಜಿಲ್ಲಾವಾರು ಮುಖಂಡರು ಒಟ್ಟಾಗಿ ಕೈಜೋಡಿಸಬೇಕು. ಪ್ರತಿ ಜಿಲ್ಲೆಗಳಲ್ಲಿ ಸರ್ಕಾರದ ಸೌಲಭ್ಯ ಹಾಗೂ ದಾನಿಗಳ ಸಹಕಾರದಲ್ಲಿ ಒಂದೊಂದು ಭವನವನ್ನು ನಿರ್ಮಿಸಿಕೊಂಡಲ್ಲಿ ಆರ್ಥಿಕ ಏಳಿಗೆ ಹೊಂದುವ ಜೊತೆಗೆ ಸಮಾಜವೂ ಅಭಿವೃದ್ಧಿ ಹೊಂದಲಿದೆ ಎಂದರು.ಚಿಕ್ಕಮಗಳೂರಿನ ಭವ್ಯವಾದ ಸಮುದಾಯ ಭವನದ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಕಟ್ಟಡದ ಅಭಿವೃದ್ಧಿಗೆ ಮಠದಿಂದ ಮುಖ್ಯಮಂತ್ರಿಗಳಿಗೆ ಇನ್ನಷ್ಟು ಅನುದಾನಕ್ಕೆ ಕೋರಿ ಪತ್ರವನ್ನೂ ಬರೆಯಲಾಗಿದೆ ಎಂದ ಶ್ರೀಗಳು, ಮುಂದಿನ ಶ್ರಾವಣ ಮಾಸದ ಆರಂಭದೊಳಗೆ ಕಟ್ಟಡವನ್ನು ಸಂಪೂರ್ಣಗೊಳಿಸಿ ಉದ್ಘಾಟಿಸಲು ಜನಾಂಗವು ಮುಂದಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಮಡಿವಾಳ ಸಮಾಜದವರು ನೆಲೆಸಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಸಮಾಜದ ಏಳಿಗೆಗೆ ಸರ್ವರು ಒಗಟ್ಟಿನಿಂದ ಕೈಜೋಡಿಸಿದಾಗ ಮಾತ್ರ ಭವನದ ಕಟ್ಟಡವನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲು ಸಾಧ್ಯವಾಗಲಿದೆ ಎಂದರು.ಈಗಾಗಲೇ ಸರ್ಕಾರದಿಂದ ಅನುದಾನವು ಹಂತ ಹಂತವಾಗಿ ಬಿಡುಗಡೆಗೊಂಡು ಶೇ.85 ರಷ್ಟು ಕಟ್ಟಡ ಪೂರ್ಣಗೊಂಡಿದೆ. ಇನ್ನಷ್ಟು ಸಣ್ಣಪುಟ್ಟ ಕೆಲಸಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಜನಾಂಗದ ಮುಖಂಡರು ಕಟ್ಟಡಕ್ಕೆ ಅವಶ್ಯವಿರುವ ವಸ್ತುಗಳನ್ನು ಖರೀದಿಸಿಕೊಟ್ಟಲ್ಲಿ ಸಹಾಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿಯವರಿಗೆ ಭಕ್ತಾದಿಗಳು ಪಾದ ಪೂಜೆ ನೆರವೇರಿಸಿದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಪ್ರಸನ್ನ ದೇವನೂರು, ಕಾರ್ಯದರ್ಶಿ ರಾಮಚಂದ್ರ, ಸಮಾಜದ ಮುಖಂಡರಗಳಾದ ಷಡಕ್ಷರಿ, ಜಗದೀಶ್, ಸತೀಶ್, ಗುರುಮೂರ್ತಿ, ನವೀನ್‌ಕುಮಾರ್ ಉಪಸ್ಥಿತರಿದ್ದರು.