ಶಿಕ್ಷಣ, ಸಂಘಟನೆಯ ಮೂಲಕ ಅಭಿವೃದ್ಧಿ ಸಾಧ್ಯ: ಪಿಎಸ್‌ಐ ಗಡ್ಡೆಪ್ಪ

| Published : Feb 22 2024, 01:52 AM IST

ಸಾರಾಂಶ

ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿವರೆಗೂ ಮೀಸಲಾತಿ ಇರುತ್ತದೆ.

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ನಮ್ಮ ದೇಶದಲ್ಲಿ ಸಂವಿಧಾನ ನಂಬದವರಿಗೂ ಅದರ ಅವಶ್ಯಕತೆಯಿದೆ ಎಂದು ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಹೇಳಿದರು.

ಇಲ್ಲಿಯ ನಗರಸಭೆಯ ಗುಡ್ಡದ ಸ್ಮಾರಕ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್‌ ವಿಶ್ವದ ನಾಯಕರಾಗಿದ್ದು, ಯಾವುದೇ ಒಂದು ನಿರ್ದಿಷ್ಟ ಜಾತಿಗೆ ಮಾತ್ರವಲ್ಲದೇ ಎಲ್ಲರಿಗೂ ಮೀಸಲಾತಿ ಅವಕಾಶ ನೀಡಿದ್ದಾರೆ. ಶಿಕ್ಷಣ ಹಾಗೂ ಸಂಘಟನೆಯ ಮೂಲಕ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿವರೆಗೂ ಮೀಸಲಾತಿ ಇರುತ್ತದೆ ಎಂದರು.

ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ವಾಕ್ ಸ್ವಾತಂತ್ರ‍್ಯ ದುರ್ಬಳಕೆ ತಡೆಗಟ್ಟಲು ಸಂವಿಧಾನ ಜಾಗೃತಿ ಹಮ್ಮಿಕೊಳ್ಳಲಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಅನೇಕ ತಾರತಮ್ಯ ಕೂಡಿರುವ ಸಮಾಜದಲ್ಲಿ ಅನುಕೂಲವಾಗುವ ಸಂವಿಧಾನ ರಚಿಸುವ ಜವಾಬ್ದಾರಿಯನ್ನು ಅಂಬೇಡ್ಕರ್ ಹೊತ್ತರು. ನಮ್ಮ ಸಂವಿಧಾನದಲ್ಲಿ ದೇಶದ ಸಮಗ್ರ ಚಿತ್ರಣವಿದೆ. ಇಂದಿನ ದಿನಗಳಲ್ಲಿ ಮುಂದಿನ ಪೀಳಿಗೆಗೆ ಸಂವಿಧಾನ ಮಹತ್ವವನ್ನು ತಿಳಿಸಬೇಕಾಗಿದೆ ಎಂದರು.

ನಗರಸಭೆ ಸದಸ್ಯ ಪ್ರಕಾಶ ಪೂಜಾರ ಮಾತನಾಡಿ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಅಂಬೇಡ್ಕರ್‌ ಬರೆದ ಸಂವಿಧಾನ ನಾವಿಂದು ಓದಲೆಬೇಕಾಗಿದೆ ಎಂದರು.

ತಹಸೀಲ್ದಾರ್ ಗುರುಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಅಂಬೇಡ್ಕರ್ ಜೀವನ ಚರಿತ್ರೆ ಕುರಿತು ಸಚಿನ್ ಮೆಣಸಿನಹಾಳ ಹಾಡು ಹೇಳಿದರು.

ಸಂವಿಧಾನ ಕುರಿತು ಪ್ರಾಧ್ಯಾಪಕ ವಿಶ್ವನಾಥ ಕಟ್ಟೀಮನಿ ಉಪನ್ಯಾಸ ನೀಡಿದರು.

ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಗಂಗಮ್ಮ ಹಾವನೂರ, ಜಯಶ್ರೀ ಪಿಸೆ, ಮಂಜುಳಾ ಹತ್ತಿ, ಶಶಿಧರ ಬಸ್ಯೆನಾಯ್ಕರ, ರಮೇಶ ಕರಡೆಣ್ಣನವರ, ದಲಿತ ಮುಖಂಡರಾದ ಚಂದ್ರಪ್ಪ ಬೇಡರ, ನೀಲಕಂಠಪ್ಪ ಕುಸಗೂರ, ಮಂಜುನಾಥ ಓಲೇಕಾರ, ಹನುಮಂತಪ್ಪ ಕಬ್ಬಾರ, ಕೆ. ಉಮೇಶ, ಮೈಲಪ್ಪ ದಾಸಪ್ಪನವರ, ಮಲ್ಲೇಶಪ್ಪ ಮದ್ಲೇರ, ಬೇಬಕ್ಕ ಮೆಣಸಿನಹಾಳ, ಗಣೇಶ, ಬಿಇಒ ಎಂ.ಎಚ್. ಪಾಟೀಲ, ನಗರಸಭೆ ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ, ಸಮಾಜ ಕಲ್ಯಾಣ ಅಧಿಕಾರಿ ಗಿರೀಶ, ಬಿಸಿಎಂ ಅಧಿಕಾರಿ ವಿ.ಎಸ್. ಹಿರೇಮಠ, ಸಿಡಿಪಿಒ ಪಾರ್ವತಿ ಹುಂಡೇಕಾರ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮತ್ತಿತರರಿದ್ದರು.

ಇದಕ್ಕೂ ಪೂರ್ವದಲ್ಲಿ ನಗರದ ಹುಣಸಿಕಟ್ಟಿ ರಸ್ತೆ ಪಂಪಾನಗರ ಕ್ರಾಸ್ ಕಮಾನ್ ಬಳಿಯಿಂದ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರ ವಾಹನವನ್ನು ಮೆರವಣಿಗೆ ಮೂಲಕ ಸಮಾರಂಭದ ಸ್ಥಳಕ್ಕೆ ಕರೆತರಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ದಲಿತ ಮುಖಂಡರು, ನಗರಸಭಾ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.