ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಂಜುಂಡಪ್ಪ ಸಮಿತಿಯು ನೀಡಿರುವ ಶಿಫಾರಸ್ಸುಗಳು ಹಾಗೂ ಆ ವರದಿಯಲ್ಲೇನಿದೆ, ಜೊತೆಗೆ ಮುಂದೆ ಯಾವ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಪ್ರಸ್ತುತ ಗೋವಿಂದ ರಾವ್ ಸಮಿತಿಯ ವರದಿಗಳು, ಪರಿಕಲ್ಪನೆ, ಒಳನೋಟಗಳು ಮತ್ತು ಹಾಸನ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಇರುವ ಸವಾಲುಗಳ ಕುರಿತಾಗಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸದಸ್ಯರಾದ ಸೂರ್ಯನಾರಾಯಣ ಎಂ.ಎಚ್ ಅವರು ಸವಿವರವಾಗಿ ವಿವರಿಸಿದರು.ಹಾಸನ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ನಂಜುಂಡಪ್ಪ ಸಮಿತಿಯರವರು ಎರಡು ತಪ್ಪುಗಳನ್ನು ಮಾಡಿದ್ದಾರೆ. ಅಭಿವೃದ್ಧಿ ಅಂದರೆ ಏನು ಎಂಬ ವ್ಯಾಖ್ಯಾನವನ್ನೇ ನೀಡಿಲ್ಲ, ಅಭಿವೃದ್ಧಿಯ ಮಾಪನವಾಗಿ ಕೇವಲ ಸಾಕ್ಷರತಾ ಪ್ರಮಾಣವನ್ನಷ್ಟೇ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ನಂಜುಂಡಪ್ಪ ಸಮಿತಿ ವರದಿಯು ಅತ್ಯಂತ ಹಿಂದುಳಿದವರು ೩೯, ಹೆಚ್ಚು ಹಿಂದುಳಿದವರು ೪೦, ಹಿಂದುಳಿದವರು ೩೫ ಎಂದು ಸಮಗ್ರ ಅಭಿವೃದ್ಧಿ ಸೂಚ್ಯಂಕದ ಆಧಾರದ ಮೇಲೆ ತಾಲೂಕುಗಳು ಅಥವಾ ಜಿಲ್ಲೆಗಳ ವರ್ಗೀಕರಣ ಮಾಡಿದೆ ಎಂದರು.ಗೋವಿಂದ ರಾವ್ ಸಮಿತಿಯು ಡಾ.ಡಿ.ಎಮ್ ನಂಜುಂಡಪ್ಪ ಸಮಿತಿಯು ವರದಿ ಸಲ್ಲಿಸಿದ ನಂತರದಲ್ಲಿ ಅಂತರಜಿಲ್ಲಾ ಮಾನವ ಪ್ರವೃತ್ತಿಗಳು ಹಾಗೂ ಜಿಲ್ಲೆಯ ಜೀವನ ಮಟ್ಟಗಳ ಸುಧಾರಣೆ ಹಾಗೂ ಮಾನವ ಅಭಿವೃದ್ಧಿಯ ವ್ಯತ್ಯಾಸಗಳ ಕುರಿತು ವಿಶ್ಲೇಷಣೆ ನಡೆಸಿ ವರದಿಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಗೋವಿಂದ ರಾವ್ ಸಮಿತಿಯಲ್ಲಿ ಅಭಿವೃದ್ಧಿ ಸೂಚಕಗಳಾಗಿ ಆರ್ಥಿಕವಾಗಿ ಒಟ್ಟು ದೇಶೀಯ ಉತ್ಪನ್ನ, ತಲಾ ಆದಾಯ, ಆರ್ಥಿಕ ರಚನೆ, ಸಾಮಾಜಿಕವಾಗಿ ಜೀವಿತಾವಧಿ, ಶಿಶು ಮರಣ ಪ್ರಮಾಣ ಮತ್ತು ಸಾಕ್ಷರತಾ ಪ್ರಮಾಣ, ಪರಿಸರ ಸಂಬಂಧಿತವಾದ ನೈಸರ್ಗಿಕ ಸಂಪನ್ಮೂಲ, ಸವಕಳಿ ಸೂಚಕಗಳನ್ನು ಪರಿಗಣಿಸಲಾಗಿದೆ ಎಂದು ಹೇಳಿದರು.೨೦೧೧- ೧೨ ಹಾಗೂ ೨೦೧೯- ೨೦ ರಲ್ಲಿ ರಾಜ್ಯದಲ್ಲಿ ಏನೆಲ್ಲಾ ಅಭಿವೃದ್ಧಿಯಾಗಿದೆ ಎಂಬುದನ್ನು ತಿಳಿಸಿದ ಅವರು, ಹಾಸನ ಅಭಿವೃದ್ಧಿಗೆ ನೀರು ಮತ್ತು ರಾಸಯನಿಕ ಒಳಹರಿವಿನ ಅತಿಯಾದ ಬಳಕೆಯಿಂದ ಮಣ್ಣಿನ ಅವನತಿಯಾಗಿ ಇಳುವರಿ ನಿಂತಿದೆ, ರಾಸಾಯನಿಕ ಮತ್ತು ಸಾವಯವ ಒಳಹರಿವಿನ ಸಮತೋಲಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ, ಕೃಷಿ ಮೂಲಸೌಕರ್ಯಗಳಾದ ಶೇಖರಣಾ ಸೌಲಭ್ಯಗಳು, ಭೂ ಅಭಿವೃದ್ಧಿ, ಮಣ್ಣಿನ ಸಂರಕ್ಷಣೆ ಮತ್ತು ನೀರಿನ ಅಭಿವೃದ್ಧಿ, ಸಾಮಾಜಿಕ ಮೂಲಸೌಕರ್ಯಗಳಾದ ಆರೋಗ್ಯ ಮತ್ತು ಶಿಕ್ಷಣ ಹಾಸನ ಅಭಿವೃದ್ಧಿಗೆ ಸವಾಲಾಗಿವೆ ಎಂದರು.
ಜಿಲ್ಲಾಧಿಕಾರಿ ಸತ್ಯಭಾಮ ಮಾತನಾಡಿ, ಆರೋಗ್ಯ, ನೀರು, ಲಿಂಗಾನುಪಾತವು ಜಿಲ್ಲೆಯಲ್ಲಿ ಉತ್ತಮವಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸುಧಾರಣೆ ಆಗಬೇಕು, ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣದಲ್ಲಿಯೇ ಮಕ್ಕಳಿಗೆ ಅಕ್ಷರ ಕಲಿಸುವುದರ ಜೊತೆಗೆ ಹೇಗೆ ಸ್ವಚ್ಛವಾಗಿರಬೇಕೆಂಬುದರ ಕುರಿತು ಕಲಿಸಿಕೊಡಬೇಕು, ನಿಗದಿತ ಪ್ರಮಾಣದ ಆಹಾರವನ್ನು ನೀಡಬೇಕು ಮತ್ತು ಸಂಸ್ಕಾರಯುತ ಮೌಲ್ಯಗಳನ್ನು ಕಲಿಸಿಕೊಡಬೇಕು ಎಂದರು.ರೈತರು ಬೆಳೆಯುವ ಬೆಳೆಗಳನ್ನು ಶೇಖರಣೆ ಮಾಡಿಟ್ಟು, ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಅನುಕೂಲವಾಗುವಂತೆ ಶೈತ್ಯಗಾರಗಳ ಅವಶ್ಯಕತೆಯಿದೆ ಎಂದು ತಿಳಿಸಿದರು.
ಭೂಮಿಯ ಫಲವತ್ತತೆ ಕಾಪಾಡಲು ರೈತರು ಮಿಶ್ರಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದ ಅವರು, ಜಿಲ್ಲೆಯಲ್ಲಿ ಸ್ಥಳೀಯವಾಗಿ ದೊರಕುವ ಕಚ್ಚಾ ವಸ್ತುಗಳಿಂದ ಸಿದ್ಧವಸ್ತುಗಳನ್ನು ತಯಾರಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕು. ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿ ಪ್ರತಿಯೊಂದು ತಾಲೂಕುಗಳ ಪೈಕಿ ನೀವು ಸಮೀಕ್ಷೆ ಮಾಡಿ ವರದಿ ಮಾಡಿದರೆ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯತ್ ಸಿಇಒ ಪೂರ್ಣಿಮಾ ಬಿ.ಆರ್ , ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲ, ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸಂಶೋಧನಾ ಸಹಾಯಕರಾದ ಭರತ್ ಕಾಂತ್ ಆರ್.ಎಸ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.