ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಮರೀಚಿಕೆ: ಹೇಮಲತಾ ನಾಯಕ

| Published : Mar 24 2024, 01:33 AM IST

ಸಾರಾಂಶ

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಭ್ರಮ ನಿರಸನದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ.

ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ಆರೋಪ । ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ ಮರಳು ಮಾಫಿಯಾ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಭ್ರಮ ನಿರಸನದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಎಂಎಲ್‌ಸಿ ಹೇಮಲತಾ ನಾಯಕ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ಗ್ಯಾರಂಟಿ ಯೋಜನೆ ನಿರಾಸೆ ಮೂಡಿಸಿವೆ. ಯಾವ ಗ್ಯಾರಂಟಿಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಬಸ್‌ ದೊರೆಯುತ್ತಿಲ್ಲ. ಎಲ್ಲರಿಗೂ ವಿದ್ಯುತ್ ಉಚಿತ ಕೊಡುತ್ತೇವೆ ಎಂದು ಹೇಳಿ ಎಲ್ಲರ ಮನೆಗಳಿಗೆ ವಿದ್ಯುತ್ ಬಿಲ್ ಕೊಡಲಾಗುತ್ತಿದೆ. ಇವರ ಯೋಜನೆಗಳು ವಿಫಲವಾಗಿವೆ ಎಂದರು.

ಜಿಲ್ಲೆಯ ಕೇಸಲಾಪುರ ಸೇರಿದಂತೆ ನದಿ ಪ್ರದೇಶದಲ್ಲಿ ಮಿತಿ ಮೀರಿ ಮರಳು ಮಾಫಿಯಾ ನಡೆಯುತ್ತಿದೆ. ರೈತರ ಜಮೀನಿನಲ್ಲಿ ಮರಳು ಇಲ್ಲದಂತೆ ಮಾಡಲಾಗುತ್ತಿದೆ. ಪೊಲೀಸರಿಗೆ ಮರಳು ದಂಧೆ ಕುರಿತು ರೈತರು ಮಾಹಿತಿ ಕೊಟ್ಟರೆ ಅವರನ್ನೇ ಕಷ್ಟಕ್ಕೆ ಸಿಲುಕಿಸುವ ಕೆಲಸ ನಡೆದಿದೆ. ಈ ಕುರಿತು ನಾವು ಪ್ರತಿಭಟನೆ ನಡೆಸಿ ಸರ್ಕಾರದ, ಅಧಿಕಾರಿಗಳ ಗಮನ ಸೆಳೆದಿದ್ದೇವೆ ಎಂದರು.

ಜಿಲ್ಲೆಯಲ್ಲಿ ಕೈಗಾರಿಕೆಗಳಿಂದ ಪರಿಸರ ಮಾಲಿನ್ಯ ಕುರಿತು ಸದನದಲ್ಲಿ ನಾನೇ ಪ್ರಶ್ನೆ ಕೇಳಿದ್ದೇನೆ. ಕೈಗಾರಿಕೆ ಧೂಳಿನಿಂದ ಸುತ್ತಲಿನ ರೈತರ ಬೆಳೆ ಹಾಳಾಗಿ ಹೋಗುತ್ತಿದೆ. ನೀರು ಕಲುಷಿತವಾಗುತ್ತಿದೆ. ಅತಿಯಾದ ಧೂಳು ಸುತ್ತಲಿನ ಜನರ ಆರೋಗ್ಯ ಹಾಳು ಮಾಡುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗೆ ಈ ಬಗ್ಗೆ ಪ್ರಶ್ನೆ ಮಾಡಿದರೆ ಬೇಜವಾಬ್ದಾರಿಯ ಹೇಳಿಕೆ ನೀಡುತ್ತಿದ್ದಾರೆ. ಇದು ನಿಜಕ್ಕೂ ದುರಂತ. ಅಭಿವೃದ್ಧಿಗಾಗಿ ನಮಗೆ ಕೈಗಾರಿಕೆಗಳು ಬೇಕು. ಆದರೆ ಕೈಗಾರಿಕೆಗಳು ಸರಿಯಾದ ನಿಯಮ ಪಾಲನೆ ಮಾಡುವುದು ಅಗತ್ಯವಾಗಿದೆ. ನಾವೇನಾದರೂ ಧೂಳಿನ ಬಗ್ಗೆ, ಮರಳು ಮಾಫಿಯಾದ ಬಗ್ಗೆ ಸ್ಥಳಕ್ಕೆ ತೆರಳಿದರೆ ನಮ್ಮ ಮೇಲೆಯೇ ಟಿಪ್ಪರ್ ಗುದ್ದಿಸುತ್ತಾರೆ, ಎಚ್ಚರವಾಗಿರಿ ಎಂದು ಸ್ಥಳೀಯರು ನಮಗೆ ಜಾಗೃತಿ ಹೇಳುತ್ತಿದ್ದಾರೆ. ಇಂತಹ ವಾತಾವರಣ ಜಿಲ್ಲೆಯಲ್ಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಮಾತನಾಡಿ, ಮಾ. ೨೫ರಂದು ಸಂಸದ ಸಂಗಣ್ಣ ಕರಡಿ ಅವರನ್ನು ರಾಜ್ಯ ನಾಯಕರು ಬೆಂಗಳೂರಿಗೆ ಮಾತುಕತೆಗೆ ಆಹ್ವಾನ ಮಾಡಿದ್ದು, ಅಲ್ಲಿ ಎಲ್ಲವೂ ಬಗೆಹರಿಯಲಿದೆ. ರಾಜ್ಯ ನಾಯಕರು ಸಂಸದರೊಂದಿಗೆ ಮಾತನಾಡಲಿದ್ದಾರೆ. ಕರಡಿ ಅವರು ನಮ್ಮ ಜತೆ ಪ್ರಚಾರಕ್ಕೆ ಬರಲಿದ್ದಾರೆ ಎಂದರು.