ಸಾರಾಂಶ
ಸಂಪಾಜೆ ಮತ್ತು ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 110. 66 ಲಕ್ಷ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿರಾಜಪೇಟೆ ಶಾಸಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಂಪಾಜೆ ಮತ್ತು ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 110.66 ಲಕ್ಷ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಂಗಳವಾರ ಚಾಲನೆ ನೀಡಿದರು.ಸಂಪಾಜೆ ಬಳಿಯ ದುಗ್ಗಳ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ದುಗ್ಗಳ ಕುಟುಂಬದವರು ಸೇರಿದಂತೆ ಸುಮಾರು 18 ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು, ವಿಕಲಚೇತನರು, ವೃದ್ದರು ಹಾಗೂ ಹಲವರಿಗೆ ಉಪಯುಕ್ತವಾಗುತ್ತದೆ ಎಂದು ಶಾಸಕ ಪೊನ್ನಣ್ಣ ಹೇಳಿದರು.
ಬಳಿಕ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಡ್ಕ ಹೈಟೆಕ್ ಶೌಚಾಲಯ ಕಟ್ಟಡ ನಿರ್ಮಾಣ, ಚೆಂಬು ಊರುಬೈಲು ಬಳಿ ಮಳೆಯಿಂದ ಹಾನಿಯಾದ ಸೇತುವೆಯ ಮರು ನಿರ್ಮಾಣ, ಪನೆಡ್ಕ ದೇವಸ್ಥಾನದ ಬಳಿಯಿಂದ ಬೈನೆಗುಂಡಿ ರಸ್ತೆ ಅಭಿವೃದ್ಧಿ ಕಾಮಗಾರಿ, ಬಾಲಂಬಿ ಚೆಟ್ಟೆಕಲ್ಲು ಜೋಡಿಯಿಂದ ಸಾರ್ವಜನಿಕ ರಸ್ತೆ ಅಭಿವೃದ್ಧಿ. ಎಂ. ಚೆಂಬು ಬಳಿಯ ರೆಂಕಿಲ್ ಮೊಟ್ಟೆ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ಇಲ್ಲಿನ ಗ್ರಾಮಸ್ಥರಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸಬೇಕು ಎಂದರು.
ಈಗಾಗಲೇ 12 ಕೋಟಿ ರು. ವೆಚ್ಚದಲ್ಲಿ ಭಾಗಮಂಡಲ- ಕರಿಕೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ವಿಶೇಷ ಅನುದಾನದಲ್ಲಿ ಜಿಲ್ಲೆಯ ಎಲ್ಲ ರಸ್ತೆಗಳನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ 17 ಕೋಟಿ ರು. ವೆಚ್ಚದಲ್ಲಿ ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.ಈಗಾಗಾಲೇ ಬಾಳೆಲೆ, ಹುದಿಕೇರಿ, ಸಿದ್ದಾಪುರ, ಮೂರ್ನಾಡು ಗ್ರಾಮದಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಭಾಗಮಂಡಲ, ಕಾಟಕೇರಿ, ಸಂಪಾಜೆ, ಕೂಡಿಗೆ ಇಲ್ಲಿಯೂ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾಪ ಇದೆ ಎಂದು ಪೊನ್ನಣ್ಣ ತಿಳಿಸಿದರು.
ಜಿಲ್ಲೆಯಲ್ಲಿ 1.20 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಒಂದಲ್ಲಾ ಒಂದು ರೀತಿಯಲ್ಲಿ ತಲುಪುತ್ತಿವೆ. ಪ್ರತಿ ಬಡ ಕುಟುಂಬವೂ ಆರ್ಥಿಕವಾಗಿ ಸದೃಢ ಆಗಬೇಕು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ ಎಂದರು. ಅಭಿವೃದ್ದಿಗೆ ಎಲ್ಲರೂ ಕೈಜೋಡಿಸಬೇಕು ಆ ನಿಟ್ಟಿನಲ್ಲಿ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಲಾಗುವುದು ಎಂದರು.ಬಳಿಕ ಸಾರ್ವಜನಿಕರಿಂದ ಅಹವಾಲು ಆಲಿಸಿದರು. ಸಾರ್ವಜನಿಕರು ಅರಣ್ಯ ಹಾಗೂ ವಿದ್ಯುತ್ ಪೂರೈಕೆ ಸಂಬಂಧಿಸಿದಂತೆ ಹೆಚ್ಚಿನ ದೂರು ಸಲ್ಲಿಸಿದರು.
ಚೆಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ತೀರ್ಥರಾಮ, ಎಸ್‌ಡಿಎಂಸಿ ಅಧ್ಯಕ್ಷ ನವೀನ್ ಕುಮಾರ್, ಪ್ರಮುಖರಾದ ಶಶಿಕಲಾ, ಗಿರೀಶ್ ಹೊಸೂರು, ಲೋಕೇಶ್ ಊರುಬೈಲು, ಸೂರಜ್ ಹೊಸೂರು, ಮನು, ರಾಜೇಶ್ವರಿ, ಇಸ್ಮಾಯಿಲ್, ತಾಲೂಕು ಪಂಚಾಯಿತಿ ಸಿಇಒ ಶೇಖರ್, ಬಿಆರ್‌ಸಿ ಗುರುರಾಜ್, ಎಂಜಿನಿಯರ್‌ಗಳಾದ ರಘು, ಕುಮಾರಸ್ವಾಮಿ, ಅಶೋಕ್, ಪಿಡಿಒ ಬಿದ್ದಪ್ಪ ಇತರರು ಇದ್ದರು.