ಸಾರಾಂಶ
ಹಾವೇರಿ: ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಕೈಗಾರಿಕೆ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಜಿಲ್ಲೆಯ ಕೋಳೂರ ಬಳಿ 400 ಎಕರೆ ಜಮೀನು ಅಭಿವೃದ್ಧಿ ಪಡಿಸಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಇನ್‌ವೆಸ್ಟ್ ಕರ್ನಾಟಕ ಮಾದರಿಯಲ್ಲಿ ಮುಂಬರುವ ದಿನಗಳಲ್ಲಿ ಹಾವೇರಿ ಇನ್‌ವೆಸ್ಟ್ ಕಾರ್ಯಕ್ರಮ ಮಾಡಲಾಗುವುದು ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.
ನಗರದ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸವಾಗಬೇಕಾಗಿದೆ. ಟೆಕ್ಸ್‌ಟೈಲ್ ನಿರ್ಮಾಣಕ್ಕೆ ಹನುಮನಮಟ್ಟಿ ಬಳಿ 18 ಎಕರೆ ಜಮೀನು ಖರೀದಿ ಮಾಡಲಾಗಿದೆ. ಈ ಸ್ಥಳದಲ್ಲಿ ಗಾರ್ಮೆಂಟ್ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕೌಶಲ್ಯ ತರಬೇತಿನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ವಿವಿಧ ವೃತ್ತಿ ಕೌಶಲ್ಯ ತರಬೇತಿಗಳನ್ನು ಸಹ ನೀಡಲಾಗುತ್ತಿದೆ. ಹಾನಗಲ್ ಜಿಟಿಟಿಸಿ ಕೇಂದ್ರದಲ್ಲಿ ತರಬೇತಿ ಪಡದರೆ ದೇಶ -ವಿದೇಶಗಳಲ್ಲಿ ಉತ್ತಮ ಉದ್ಯೋಗ ದೊರೆಯುತ್ತವೆ. ನಿರುದ್ಯೋಗಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳದೇ ಸಿಗುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು.
ಗುತ್ತಲ-ಹಾಗೂ ತಿಮ್ಮಾಪೂರ ಹತ್ತಿರದ ಗಾರ್ಮೆಂಟ್ಸ್‌ನಲ್ಲಿ 100 ಜನರು ಕೆಲಸ ಮಾಡುತ್ತಿದ್ದಾರೆ. ಇನ್ನೂ 100 ಜನರ ಅವಶ್ಯಕತೆ ಇದೆ. ಎಂಟು ತಾಸು ಕೆಲಸಕ್ಕೆ ₹10 ಸಾವಿರ ಸಂಬಳ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಅನೇಕ ಗಾರ್ಮೆಂಟ್ಸ್‌ಗಳು ಆರಂಭವಾಗಿವೆ, ನಿರುದ್ಯೋಗಿಗಳು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಒಳ್ಳೆಯ ಸಂಬಳ ನೀಡಿ
ಇಂದು ಉದ್ಯೋಗ ಮೇಳದಲ್ಲಿ 48 ಉದ್ಯೋಗಾತ ಕಂಪನಿಗಳು ಹಾಗೂ 1079 ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದು, ಇಲ್ಲಿ ಭಾಗವಹಿಸಿದ ಉದ್ಯೋಗದಾತ ಕಂಪನಿಗಳು ನಿರುದ್ಯೋಗಗಳಿಗೆ ಕೆಲಸ ನೀಡುವ ಜೊತೆಗೆ ಒಳ್ಳೆಯ ಸಂಬಳ ನೀಡುವ ಮೂಲಕ ಅವರ ಜೀವನಕ್ಕೆ ದಾರಿ ಮಾಡಿಕೊಡಬೇಕು ಎಂದು ಹೇಳಿದರು.ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 22,600 ಅಭ್ಯರ್ಥಿಗಳು ಯುವನಿಧಿ ಫಲಾನುಭವಿಗಳಿದ್ದು, ಇಂದು ಉದ್ಯೋಗ ಮೇಳಕ್ಕೆ ಸಾವಿರ ಸಂಖ್ಯೆಯಲ್ಲಿ ಮಾತ್ರ ನಿರುದ್ಯೋಗಿಗಳು ನೋಂದಣಿ ಮಾಡಿಸಿದ್ದು ವಿಷಾಧಕರ ಸಂಗತಿಯಾಗಿದೆ. ಸರ್ಕಾರದ ಸಹಾಯಧನ ತೆಗೆದುಕೊಂಡು ಮನೆಯಲ್ಲಿ ಕುಳಿತುಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ. ನಮ್ಮ ಊರಿನಲ್ಲೆ ಕೆಲಸ ಸಿಗಬೇಕು ಎಂಬ ಮನೋಭಾವ ಬದಲಾಗಬೇಕು. ಎಲ್ಲೇ ಕೆಲಸ ಸಿಕ್ಕರೂ ಮಾಡುತ್ತೇನೆ ಎಂಬ ಛಲವಿರಬೇಕು. . ಪ್ರತಿ ಆರು ತಿಂಗಳಿಗೊಮ್ಮೆ ಉದ್ಯೋಗ ಮೇಳ ಆಯೋಜನೆ ಮಾಡಬೇಕು. ಮುಂದಿನ ದಿನಗಳಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಯುವನಿಧಿ ಸೌಲಭ್ಯ ಪಡೆಯುವ ಫಲಾನುಭವಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ, ಸರ್ಕಾರ ಮತ್ತು ಸಾರ್ವಜನಿಕರನ್ನು ಉದ್ಯೋಗ ಸಮಸ್ಯೆ ಕಾಡುತ್ತಿದೆ. ಭಾರತದಲ್ಲಿ ಓದದ ನಿರುದ್ಯೋಗಿಗಳಿಗಿಂತ ಓದಿದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸರ್ಕಾರಿ ಕೆಲಸದ ವ್ಯಾಮೋಹ ಬಿಟ್ಟು ಸ್ವಯಂ ಉದ್ಯೋಗ ಆರಂಭಿಸುವ ಮೂಲಕ ಇತರರಿಗೂ ಉದ್ಯೋಗ ನೀಡಲು ಮುಂದಾಗಬೇಕು ಎಂದರು.ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಾಜೇಂದ್ರ ಕದಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಅಂಗವಿಕಲರಿಗೆ ಮಾತ್ರ ಉದ್ಯೋಗ ನೀಡುವ ವೈಸ್ ಆ್ಯಫ್ ನೀಡಿ ಅವರಿಂದ ಓರ್ವ ವಿಕಲಚೇತನನಿಗೆ ಹಾಗೂ ಇತರೆ ಕಂಪನಿಗಳಿಂದ ಸಾಂಕೇತಿಕವಾಗಿ ನಾಲ್ಕು ಜನರಿಗೆ ಕೆಲಸದ ನೇಮಕಾತಿ ಆದೇಶ ವಿತರಣೆ ಮಾಡಲಾಯಿತು.49 ಕಂಪನಿಗಳು
ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಸ್ಥಳೀಯ ಕೈಗಾರಿಕೆಗಳು ಬೆಂಗಳೂರು, ಧಾರವಾಡ, ಕೋಲಾರ, ತುಮಕೂರು, ಶಿರಶಿ ಹಾಗೂ ಇತರೆ ಜಿಲ್ಲೆಗಳಿಂದ 49 ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು. 1025 ಯುವಕರು ಹಾಗೂ 551 ಯುವತಿಯರು ಸೇರಿ ಒಟ್ಟು 1576 ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು.ನೇಮಕಾತಿ ಆದೇಶ
ಉದ್ಯೋಗ ಮೇಳದಲ್ಲಿ ಭಾಗವಹಿಸಿದ ವಿವಿಧ ಕಂಪನಿಗಳಿಗೆ ಸಂದರ್ಶನ ನೀಡಿದ 1576 ಅಭ್ಯರ್ಥಿಗಳ ಪೈಕಿ 15 ಅಭ್ಯರ್ಥಿಗಳಿಗೆ ಕೆಲಸ ಆದೇಶ ಪತ್ರ ನೀಡಲಾಯಿತು. 723 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಮಾಡಲಾಗಿದೆ. 15 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಆದೇಶ ಪತ್ರ ನೀಡಲಾಯಿತು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎ. ಮೈದೂರ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಶ್ರೀಧರ ದೊಡ್ಡಮನಿ ಇತರರು ಉಪಸ್ಥಿತರಿದ್ದರು.
ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿ ಬಿ.ಎಂ. ಬೇವಿನಮರದ ಕಾರ್ಯಕ್ರಮ ನಿರೂಪಿಸಿದರು. ವಿನಾಯಕ ವಂದಿಸಿದರು.