ಮಂಡ್ಯ ಕೃಷಿ ವಿಶ್ವವಿದ್ಯಾನಿಲಯವನ್ನು ಹೈಟೆಕ್ ಕೃಷಿ ಸಂಶೋಧನೆ ಮತ್ತು ನಾವೀನ್ಯತಾ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕರ್ನಾಟಕದ ಹವಾಮಾನಕ್ಕೆ ಹೊಂದುವ ರೋಗನಿರೋಧಕ ಅಕ್ಕಿ ತಳಿಗಳ ಅಭಿವೃದ್ಧಿಗೆ ಫಿಲಿಪೈನ್ಸ್ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ ಜೊತೆ ಸಹಕಾರ ಹೊಂದಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಕೃಷಿ ವಿಶ್ವವಿದ್ಯಾನಿಲಯವನ್ನು ಹೈಟೆಕ್ ಕೃಷಿ ಸಂಶೋಧನೆ ಮತ್ತು ನಾವೀನ್ಯತಾ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕರ್ನಾಟಕದ ಹವಾಮಾನಕ್ಕೆ ಹೊಂದುವ ರೋಗನಿರೋಧಕ ಅಕ್ಕಿ ತಳಿಗಳ ಅಭಿವೃದ್ಧಿಗೆ ಫಿಲಿಪೈನ್ಸ್ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ ಜೊತೆ ಸಹಕಾರ ಹೊಂದಲಾಗಿದೆ. ಇದು ಸಣ್ಣ ಮತ್ತು ಮಧ್ಯಮ ಹಿಡುವಳಿ ರೈತರ ಉತ್ಪಾದಕತೆ ಹಾಗೂ ಆದಾಯ ವೃದ್ಧಿಗೆ ಸಹಕಾರಿಯಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಂದೇಶ ಭಾಷಣದಲ್ಲಿ ಮಾತನಾಡಿ, ವಿಶ್ವ ವಿದ್ಯಾಲಯವನ್ನು ಆರಂಭಿಸಿದ ಆರು ತಿಂಗಳೊಳಗೆ ಯುಜಿಸಿ ಮಾನ್ಯತೆ ದೊರೆತಿದ್ದು, ಇದು ಹೊಸ ಕೃಷಿ ವಿಶ್ವವಿದ್ಯಾಲಯದ ಅಪರೂಪದ ಸಾಧನೆಯಾಗಿದೆ ಎಂದರು.
ಶ್ರೀರಂಗಪಟ್ಟಣ ತಾಲೂಕಿನ ವ್ಯಾಪ್ತಿಯ ಸಿ.ಡಿ.ಎಸ್.ನಾಲೆಯಡಿ ಬರುವ ಪಿಕಪ್ ನಾಲೆಗಳು ಮತ್ತು ತೂಬಿನ ನಾಲೆಗಳ ಅಭಿವೃದ್ಧಿ ಕಾಮಗಾರಿಯನ್ನು ೫೦ ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮಂಡ್ಯ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಿವಿಧ ರಸ್ತೆಗಳ ಅಭಿವೃದ್ಧಿ, ನಾಲೆಗಳ ಅಭಿವೃದ್ಧಿ, ಪಿಕಪ್ ನಾಲೆಗಳ ಅಭಿವೃದ್ಧಿ ಮತ್ತು ರಕ್ಷಣಾತ್ಮಕ ಗೋಡೆಗಳ ನಿರ್ಮಾಣದಂತಹ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟು ೯೨ ಕೋಟಿ ರು. ವೆಚ್ಚದಲ್ಲಿ ನಡೆಸಲಾಗುತ್ತಿದೆ ಎಂದರು.ಮಳವಳ್ಳಿ ತಾಲೂಕು ವ್ಯಾಪ್ತಿಯಲ್ಲಿ ವಿಶ್ವೇಶ್ವರಯ್ಯ ನಾಲಾ ಜಾಲದಡಿ ಬರುವ ಹೆಬ್ಬಕವಾಡಿ ಶಾಖಾ ಕಾಲುವೆಗಳ ಹಾಗೂ ಪಿಕಪ್ ನಾಲೆಗಳ ಸಮಗ್ರ ಆಧುನೀಕರಣ ಕಾಮಗಾರಿಯನ್ನು ೨೯೨ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಂದಾಯ ಇಲಾಖೆಯಿಂದ ದರಕಾಸು ಪೋಡಿ, ಭೂ ಸುರಕ್ಷಾ ಯೋಜನೆ, ಈ ಪೌತಿ ಖಾತೆ, ಲ್ಯಾಂಡ್ ಬೀಟ್ ಮುಂತಾದ ವಿನೂತನ ಯೋಜನೆಗಳಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ ಎಂದರು.
ಅಕ್ಟೋಬರ್ ೨೦೧೭ರ ಪೂರ್ವದಲ್ಲಿ ಗ್ರಾಪಂನಿಂದ ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಹತೆ ಇಲ್ಲದ ಕಾರಣಕ್ಕೆ ಅನುಮೋದನೆಯಾಗಿಲ್ಲದ ೫೯೦ ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಅನುಮೋದನೆ ಆದೇಶ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಬಿಲ್ ಕಲೆಕ್ಟರ್ ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳಿಗೂ ಮಾರ್ಚ್-೨೦೨೬ರ ಅಂತ್ಯದೊಳಗಾಗಿ ಅನುಮೋದನೆ ನೀಡಲು ಕ್ರಮವಹಿಸಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಸರ್ಕಾರಿ ದಾಖಲೆಗಳನ್ನು ಸಂರಕ್ಷಣೆ ಮಾಡಲು ವ್ಯವಸ್ಥಿತವಾದ ರೆಕಾರ್ಡ್ ರೂಂ ಅನ್ನು ಪ್ರಾರಂಭಿಸಲಾಗಿದ್ದು, ಇದರಿಂದ ಸಮರ್ಪಕ ಇ-ಸ್ವತ್ತು ನಿರ್ವಹಣೆ ಮಾಡಲು ಮತ್ತು ಸಾರ್ವಜನಿಕರಿಗೆ ನಿಗಧಿತ ಅವಧಿಯಲ್ಲಿ ಅಗತ್ಯ ಮಾಹಿತಿಯನ್ನು ನೀಡಲು ಸಹಕಾರಿಯಾಗಲಿದೆ ಎಂದರು.ಸ್ವಂತ ಸಂಪನ್ಮೂಲ ಸಂಗ್ರಹದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳು ಉತ್ತಮ ಸಾಧನೆ ಮಾಡಿವೆ. ಪ್ರಸಕ್ತ ಸಾಲಿನ ಬೇಡಿಕೆಗೆ ಅನುಗುಣವಾಗಿ ಶೇಕಡ ೮೦ ರಷ್ಟು ಪ್ರಗತಿ ಸಾಧಿಸಿ ಜಿಲ್ಲೆಯು ರಾಜ್ಯದಲ್ಲಿಯೇ ಐದನೇ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ಸೂಚಿಸಿದರು.
ಜಿಲ್ಲೆಯ ಗ್ರಾಮೀಣ ಮಹಿಳೆಯರಿಗೆ ಕೃಷಿ ಮತ್ತು ಜಿಲ್ಲೆಯ ಸ್ವ-ಸಹಾಯ ಸಂಘಗಳು ಕೃಷಿ ಮೇಳ ಹಾಗೂ ಜೆಎಸ್‌ಎಸ್ ಜಯಂತೋತ್ಸವ ಮತ್ತು ಸುತ್ತೂರು ಕೃಷಿ ಜಾತ್ರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸುಮಾರು ೩೫ ಲಕ್ಷ ರು. ಆರ್ಥಿಕ ವಹಿವಾಟು ನಡೆಸಿದ್ದಾರೆ. ಇದರಿಂದಾಗಿ ಜಿಲ್ಲೆಯ ಸ್ವ-ಸಹಾಯ ಸಂಘದ ಮಹಿಳೆಯರನ್ನು ಉದ್ಯಮಿಗಳಾಗಿ ರೂಪಿಸುವಲ್ಲಿ ಧೃಢವಾದ ಹೆಜ್ಜೆ ಇಡಲಾಗುತ್ತಿದೆ. ಎನ್‌ಆರ್‌ಎಲ್‌ಎಂ ಯೋಜನೆಯಡಿ ತರಬೇತಿ ಪಡೆದ ಮಹಿಳೆಯರು ಚನ್ನಪಟ್ಟಣ ಬೊಂಬೆಗಳು ಹಾಗೂ ಕೈಯಿಗಳಿಂದ ತಯಾರಿಸಿದ ಪ್ಯಾನ್ಸಿ ವಸ್ತು ಮಳಿಗೆಗಳು ವಿವಿಧ ಮೇಳಗಳಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ತೆಗೆದುಕೊಂಡಿರುವುದು ನಮ್ಮ ಜಿಲ್ಲೆಯ ಮಹಿಳೆಯರ ಪ್ರತಿಭೆಗೆ ದೊರೆತ ಗೌರವವಾಗಿದೆ ಎಂದರು.ಕಾರ್ಯಕ್ರಮದಲ್ಲಿ ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ನಗರಸಭೆ ಆಯುಕ್ತೆ ಯ.ಪಿ.ಪಂಪಾಶ್ರೀ ಇತರರಿದ್ದರು.ಪಥಸಂಚಲನ ವಿಜೇತರು
ಇಲಾಖಾ ತಂಡದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ- ಪ್ರಥಮ, ಅಗ್ನಿಶಾಮಕ ದಳ-ದ್ವಿತೀಯ, ನಾಗರೀಕ ಮಹಿಳಾ ಪಡೆ-ತೃತೀಯ.ಎನ್‌ಸಿಸಿ ವಿಭಾಗದಲ್ಲಿ ಮಂಡ್ಯ ವಿಶ್ವವಿದ್ಯಾನಿಲಯ-ಪ್ರಥಮ, ಕಾಳೇಗೌಡ ಪ್ರೌಢಶಾಲೆ-ದ್ವಿತೀಯ, ಪಿಇಎಸ್ ಕಾಲೇಜು-ತೃತೀಯ.
ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ಸೆಂಟ್ ಜೋಸೆಫ್ ಬಾಲಕಿಯರ ಪ್ರೌಢಶಾಲೆ- ಪ್ರಥಮ, ಲಕ್ಷ್ಮೀಜನಾರ್ದನ ಬಾಲಕಿಯರ ಪ್ರೌಢಶಾಲೆ- ದ್ವಿತೀಯ, ರೋಟರಿ ಬಾಲಕಿಯರ ಪ್ರೌಢಶಾಲೆ - ತೃತೀಯ.ಪ್ರೌಢಶಾಲಾ ವಿಭಾಗದಲ್ಲಿ ಕಾರ್ಮೆಲ್ ಪ್ರೌಢಶಾಲೆ ಬಾಲಕಿಯರ ತಂಡ- ಪ್ರಥಮ, ಆದರ್ಶ ಪ್ರೌಢಶಾಲೆ ಬಾಲಕಿಯರ ತಂಡ-ದ್ವಿತೀಯ, ಕೆಪಿಎಸ್ ಅರ್ಕೇಶ್ವರ ಪ್ರೌಢಶಾಲೆ-ತೃತೀಯ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅಭಿನವಭಾರತಿ ಹಿರಿಯ ಪ್ರಾಥಮಿಕ ಶಾಲೆ ಬಾಲಕರ ತಂಡ-ಪ್ರಥಮ, ಕಾರ್ಮೆಲ್ ಕಾನ್ವೆಂಟ್ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ-ದ್ವಿತೀಯ, ಸೆಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ-ತೃತೀಯ.