ಸಾರಾಂಶ
ಬ್ಯಾಡಗಿ: ಉತ್ತಮ ರಸ್ತೆಗಳು ರಾಜ್ಯದ ಗೌರವ ಹೆಚ್ಚಿಸಲಿದ್ದು, ಅದರಲ್ಲೂ ಸಂಪರ್ಕ ರಸ್ತೆಗಳು ಕೃಷಿ, ಕೈಗಾರಿಕೆ, ವಾಣಿಜ್ಯ ಆರ್ಥಿಕ ಅಭಿವೃದ್ಧಿ ಬೆಳವಣಿಗೆಗೆ ಸಹಕಾರಿ. ತಾಲೂಕಿನ ಪ್ರತಿಯೊಂದು ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ವಿಶೇಷ ಆಸಕ್ತಿ ವಹಿಸುವುದಾಗಿ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
₹6 ಕೋಟಿ ವೆಚ್ಚದಲ್ಲಿ ಬ್ಯಾಡಗಿ-ತಿಳವಳ್ಳಿ ರಸ್ತೆಯನ್ನು ಅಂಗರಗಟ್ಟಿ ಗ್ರಾಮದಿಂದ ಕುಮ್ಮೂರ ಕ್ರಾಸ್ ವರೆಗೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ರಸ್ತೆಗಳು ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದ್ದು, ಸಾಮಾಜಿಕ ಪ್ರಯೋಜನಗಳಿಗೆ ಬಹಳ ನಿರ್ಣಾಯಕವಾಗಿವೆ, ರಾಜ್ಯದ ಅಭಿವೃದ್ಧಿ ಹೊಂದುವುದು ಸೇರಿದಂತೆ ಉದ್ಯೋಗ, ಸಾಮಾಜಿಕ, ಆರೋಗ್ಯ ಶಿಕ್ಷಣ ಸೇವೆ ಸೇರಿದಂತೆ ಬಡತನ ವಿರುದ್ಧ ಹೋರಾಡಲು ನಿರ್ಣಾಯಕವಾಗಿವೆ ಎಂದರು.
ಅಭಿವೃದ್ಧಿ ಮಾಡಿ ತೋರಿಸುತ್ತೇವೆಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗಿದೆ. ನಮ್ಮ ಆರ್ಥಿಕ ಇತಿಮಿತಿಯಲ್ಲಿ ಅಭಿವೃದ್ಧಿ ಮಾಡದೇ ಬಿಡುವುದಿಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ರಸ್ತೆಗಳ ಅಭಿವೃದ್ಧಿ ಆಗದೇ ಇರಬಹುದು. ಆದರೆ. ಅವಶ್ಯವಿರುವಲ್ಲಿ ಆದ್ಯತೆ ಮೇರೆಗೆ ಮಾಡಲು ಈಗಲೂ ಬದ್ಧನಾಗಿದ್ದೇನೆ ಎಂದರು.
ಅನುದಾನ ಬೇಕಾಗಿದೆಬ್ಯಾಡಗಿ ಮತಕ್ಷೇತ್ರ ಮಲೆನಾಡು ವ್ಯಾಪ್ತಿಗೆ ಸೇರುತ್ತದೆ. ಹೀಗಾಗಿ ತಾಲೂಕಿನ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಇದಕ್ಕಾಗಿ ಹೆಚ್ಚಿನ ಅನುದಾನದ ಅವಶ್ಯವಿದೆ. ಶೀಘ್ರ ಬಿಡುಗಡೆಗೆ ಮನವಿ ಮಾಡುತ್ತಿದ್ದೇನೆ. ಕೊಟ್ಟಂತಹ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿ ನಡಸಲಿದ್ದೇವೆ. ಸರ್ಕಾರದ ಆಶಯವೂ ಕೂಡ ಅದೇ ಆಗಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿದ್ದೇನೆ ಎಂದರು.
ಬ್ಯಾಡಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಮಹೇಶಗೌಡ ಪಾಟೀಲ, ಸುಭಾಸಗೌಡ, ಲಿಂಗರಾಜ ಕುಮ್ಮೂರ, ಮಂಜನಗೌಡ ಲಿಂಗನಗೌಡ್ರ, ಅಯ್ಯೂಬ್‌ಖಾನ ಮಲ್ಲೂರ, ಮಾರುತಿ ಅಚ್ಚಿಗೇರಿ, ಜಗದೀಶ ಪೂಜಾರ, ಮುನಾಫ್ ಎಲಿಗಾರ, ಸುರೇಶ ಪೂಜಾರ, ಸುಭಾಸ್ ಕಾಳಪ್ಪನವರ ಗುತ್ತಿಗೆದಾರ ಸಿ.ಡಿ. ಹಾವೇರಿ ಸೇರಿದಂತೆ ಇನ್ನಿತರರಿದ್ದರು.