ಪರಸ್ಪರ ಸಹಕಾರದಿಂದ ಸರ್ವರ ಅಭಿವೃದ್ಧಿ ಸಾಧ್ಯ: ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ

| Published : Nov 27 2024, 01:00 AM IST

ಪರಸ್ಪರ ಸಹಕಾರದಿಂದ ಸರ್ವರ ಅಭಿವೃದ್ಧಿ ಸಾಧ್ಯ: ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮಲ್ಲಿಯೇ ಒಗ್ಗಟ್ಟಿನಿಂದ ಸಹಕಾರ ದೊರೆತಾಗ, ಸರ್ವರೂ ಸಮನಾಗಿ ಆರ್ಥಿಕ, ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯ ಎಂಬುದನ್ನು ಸಹಕಾರ ತತ್ವ ತೋರಿಸಿಕೊಟ್ಟಿದೆ.

ಕನ್ನಡಪ್ರಭ ವಾರ್ತೆ ಅಮೀನಗಡ

ಸಹಕಾರ ತತ್ವದ ಯಶಸ್ಸಿಗೆ ಜಾತಿಮತ, ಪಕ್ಷ, ಪಂಗಡ, ಮೇಲು-ಕೀಳು, ಬಡವ-ಬಲ್ಲಿದ ಹೊರತುಪಡಿಸಿ ಶ್ರಮಿಸಿದಾಗ ಮಾತ್ರ ಸಹಕಾರ ರಂಗ ಬೆಳೆಯಲು ಸಾಧ್ಯ ಎಂದು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳಿದರು.

ಸಮೀಪದ ಸೂಳೇಬಾವಿ ಗ್ರಾಮದ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಹಕಾರ ರತ್ನ ಪ್ರಶಸ್ತಿ ವಿಜೇತರಿಗೆ ಗೌರವ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಸ್ಪರ ಸಹಕಾರವೇ ಸರ್ವರ ಅಭಿವೃದ್ಧಿಗೆ ಕಾರಣ. ಇಂದು ಸಹಕಾರ ತತ್ವದಡಿಯಲ್ಲಿ ಅನೇಕ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ನಮ್ಮಲ್ಲಿಯೇ ಒಗ್ಗಟ್ಟಿನಿಂದ ಸಹಕಾರ ದೊರೆತಾಗ, ಸರ್ವರೂ ಸಮನಾಗಿ ಆರ್ಥಿಕ, ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯ ಎಂಬುದನ್ನು ಸಹಕಾರ ತತ್ವ ತೋರಿಸಿಕೊಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿದ್ದು ಕೊಂಡೇ ಸಹಕಾರಿ ತತ್ವ ಅಳವಡಿಸಿಕೊಂಡು ಉತ್ತಮ ಸಾಧನೆ ಮಾಡಿದ ಪರಿಣಾಮ ಈ ಬಾರಿ ನಮ್ಮ ಜಿಲ್ಲೆಯ ಮೂವರು ಸಹಕಾರಿ ಧುರೀಣರಿಗೆ ರಾಜ್ಯ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ನಮಗೂ ನಮ್ಮ ಜಿಲ್ಲೆಗೂ ಹೆಮ್ಮೆಯ ವಿಷಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಕಾರಿ ಧುರೀಣ, ರಾಜ್ಯ ದೇವಾಂಗ ಸಮಾಜದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಸಹಕಾರಿ ತತ್ವವನ್ನು ಶತಮಾನಗಳ ಹಿಂದೆಯೇ ಸೂಳೇಬಾವಿ ಅಂದಿನ ಹಿರಿಯರು ಅಳವಡಿಸಿಕೊಂಡ ಪರಿಣಾಮ, ಸೂಳೇಬಾವಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ, ಶಾಖಾಂಭರೀ ನೇಕಾರ ಸಹಕಾರ ಸಂಘಗಳು ಯಶಸ್ವಿಯಾಗಿ ಶತಮಾನ ದಾಟಿವೆ. ಗ್ರಾಮದ ಇತರೆ ಸಂಘಗಳೂ ಯಶಸ್ವಿಯಾಗಿ ಸಹಕಾರಿ ತತ್ವ ಅಳವಡಿಸಿಕೊಂಡು, ಗ್ರಾಮದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುವವರಿಗೆ ಪ್ರೋತ್ಸಾಹ, ಸ್ವಾವಲಂಬನೆ ಜೀವನಕ್ಕೆ ಆರ್ಥಿಕ ಸಹಕಾರ ನೀಡುವ ಮೂಲಕ ಪ್ರಗತಿ ಪಥದಲ್ಲಿವೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಸಹಕಾರಿ ರಂಗದಲ್ಲಿ ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದ ಕಾರಣಕ್ಕೆ ಇಂದು ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಯಶಸ್ಸು ಸಾಧಿಸಲು ಸಾಧ್ಯವಾಯಿತು. ನಿಮ್ಮೆಲ್ಲರ ಸಹಕಾರದ ಪರಿಣಾಮ ನಮಗೆ ಪ್ರಶಸ್ತಿ ಸಂದಿದೆ ಎಂದರು. ಕೆಎಂಎಫ್ ವಿಜಯಪುರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ,ಹಾಲಿ ಸದಸ್ಯ ಸಂಗಣ್ಣ ಹಂಡಿ ಮಾತನಾಡಿ, ರೈತಾಪಿವರ್ಗದವರಾದ ನಮಗೆ ಕೆಎಂಎಫ್‌ನಲ್ಲಿ ಅಧ್ಯಕ್ಷ ಪದವಿ ಒಂದು ಸ್ಥಾನ ಸಿಕ್ಕಿತು ನನ್ನ ಅವಧಿಯಲ್ಲಿ ನಷ್ಟದಲ್ಲಿದ್ದ ಕೆಎಂಫ್‌ ಅನ್ನು ಮೂರು ವರ್ಷಗಳಲ್ಲಿ ಲಾಭದತ್ತ ನಡೆಸಿದ ಸಂತೃಪ್ತಿ ನನಗಿದೆ. ಇದಕ್ಕೆ ಸಹಕಾರಿಗಳ ಸಹಕಾರವೇ ಕಾರಣ ಎಂದರು. ರಾಜ್ಯ ಸಹಕಾರಿ ಮಾರಾಟ ಮಹಾಮಂಡಳದ ನಿರ್ಧೇಶಕ ಸುಭಾಷ ಮೇಳಿ ಮಾತನಾಡಿ, ಸಹಕಾರಿ ರಂಗದಲ್ಲಿದ್ದ ಕಾರಣ ಅನೇಕರಿಗೆ ಸಹಕಾರ ನೀಡುವ ಭಾಗ್ಯ ಲಭಿಸಿತು. ಸೂಳೇಬಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನನ್ನ ಅನುದಾನದಲ್ಲಿ ₹2 ಲಕ್ಷ ನೀಡುತ್ತಿದ್ದು, ಅವರು ಅಲ್ಲಿನ ಪೀಠೋಪಕರಣ ಅಥವಾ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳ ಬಹುದು ಎಂದರು.

ಕೆ.ಎಸ್.ರಾಮದುರ್ಗ ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ವಿವಿಧ 15 ಸಹಕಾರಿ ಸಂಘಗಳು ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿದವು. ವೇದಿಕೆಯಲ್ಲಿ ಕಮತಗಿ ಪಟ್ಟಣ ಪಂಚಾಯತಿ ಅಧ್ಯಕ್ಷ ರಮೇಶ ಜಮಖಂಡಿ ಇದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಗ್ರಾಮದ ಹಿರಿಯರು ಭಾಗವಹಿಸಿದ್ದರು. ಕೃಷ್ಣ ಬಾಪ್ರಿ ಸ್ವಾಗತಿಸಿ,ನಿರೂಪಿಸಿದರು, ಹೇಮಂತ ಧುತ್ತರಗಿ ವಂದಿಸಿದರು.