ಸಾರಾಂಶ
ಜಮ್ಮನಹಳ್ಳಿ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆಕನ್ನಡಪ್ರಭವಾರ್ತೆ ಸಕಲೇಶಪುರ
ಸರಳ, ಸಜ್ಜನಿಕೆ ಹಾಗೂ ಪ್ರಮಾಣಿಕ ವ್ಯಕ್ತಿಗಳಿಂದ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ರೈತರಿಂದ ರೈತರಿಗಾಗಿ ಸಹಕಾರ ಸಂಘಗಳು ಆರಂಭವಾದವು. ರಾಷ್ಟ್ರೀಯ ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ದುಸ್ಥರವಾದ ಕಾರಣ ಸಹಕಾರ ಸಂಘಗಳ ಉದಯಕ್ಕೆ ಕಾರಣವಾಗಿದೆ. ಸಾಲ ಪಡೆದು ಮರುಪಾವತಿಯನ್ನು ಸರಿಯಾದ ಸಮಯಕ್ಕೆ ನಡೆಸಿದ್ದೇ ಆದಲ್ಲಿ ಸಹಕಾರ ಸಂಘಗಳು ಅಭಿವೃದ್ಧಿ ಸಾದ್ಯವಾಗಲಿದೆ. ಒಂದು ಸಹಕಾರ ಸಂಘ ಅಭಿವೃದ್ಧಿ ಪಥದಲ್ಲಿ ಸಾಗಿದರೆ ಸಾವಿರಾರು ರೈತರಿಗೆ ಸಹಾಯವಾಗಲಿದೆ. ಸಂಘದ ಆಡಳಿತದಲ್ಲಿ ರಾಜಕೀಯ ಬೆರೆಯುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಮಾತನಾಡಿ, ಎಲ್ಲಿ ಪ್ರಮಾಣಿಕತೆ, ಪಾರದರ್ಶಕತೆ ಹಾಗೂ ಸೇವಾ ಮನೋಭಾವ ಹೊಂದಿರುವ ಕಡೆ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಷೇರುದಾರರ ಪ್ರಾಮಾಣಿಕತೆ ಸಂಘದ ಬೆಳವಣಿಯನ್ನು ಆಶ್ರಯಿಸಿದೆ. ಜಮ್ಮನಹಳ್ಳಿ ಸಹಕಾರ ಸಂಘ ಜಿಲ್ಲೆಯಲ್ಲೆ ಮಾದರಿ ಸಹಕಾರಿ ಸಂಘವಾಗಿದೆ. ಬಾಳ್ಳುಪೇಟೆ ಗ್ರಾಮದಲ್ಲಿ ಹಾಸನ ಜಿಲ್ಲಾ ಸಹಕಾರ ಬ್ಯಾಂಕ್‌ನ ಶಾಖೆ ತೆರೆಯಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ಈ ಭಾಗದ ಜನರ ಹಣದ ವಹಿವಾಟಿಗೆ ಅನುಕೂಲ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲೆ ಎರಡನೇ ಸ್ಥಾನದಲ್ಲಿರುವ ಜಮ್ಮನಹಳ್ಳಿ ಪ್ರಾಥಮಿಕ ಸಹಕಾರ ಸಂಘ ಹಲವು ಸಮಸ್ಯೆಗಳ ನಡುವೆ ಬೆಳೆದು ನಿಂತಿದೆ. ಇದಕ್ಕೆಲ್ಲ ಪ್ರಾಮಾಣಿಕ ಆಡಳಿತ ಮಂಡಳಿ ಕಾರಣವಾಗಿದೆ. ಉತ್ತರ ಕರ್ನಾಟಕದಲ್ಲಿನ ಸಹಕಾರ ಸಂಘದ ಮಾದರಿಯನ್ನು ಇಲ್ಲಿಯೂ ಅನುಸರಿಸುವುದು ಉತ್ತಮ ಎಂದು ಸಲಹೆ ನೀಡಿದರು.ಬಾಳ್ಳುಪೇಟೆ ಗ್ರಾಪಂ ಅಧ್ಯಕ್ಷೆ ಗೌರಮ್ಮ. ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಸಮಾಜಸೇವಕ ಬಾಳ್ಳುಮಲ್ಲಿಕಾರ್ಜುನ್, ಬ್ಯಾಂಕ್ ನಿರ್ದೇಶಕ ಉದಯ್‌ಶಂಕರ್, ಸಂಘದ ಸಿಇಒ ಮಂಜುನಾಥ್ ಇದ್ದರು. ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಸಿಮೆಂಟ್ ಮಂಜು. ಈ ವೇಳೆ ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಜಿಲ್ಲಾ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಮುಂತಾದವರಿದ್ದರು.