ಸಾರಾಂಶ
ಗೋಕರ್ಣ; ಕಾಶಿ ವಿಶ್ವನಾಥ ದೇವಾಲಯ, ಉಜ್ಜಯನಿಯ ಮಹಾಕಾಲ ದೇಗುಲದಂತೆ ಗೋಕರ್ಣ ಮಹಾಬಲೇಶ್ವರ ದೇಗುಲದ ಸಮಗ್ರ ಅಭಿವೃದ್ಧಿಗೆ ಕಾರಿಡಾರ್ ನಿರ್ಮಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸರ್ಕಾರದ ಸಾಂಸ್ಕೃತಿಕ, ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ಗೋಕರ್ಣದ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ರಾಜ್ಯ ಸರ್ಕಾರ ಸಮಗ್ರ ಪ್ರಸ್ತಾವನೆ ಸಲ್ಲಿಸಬೇಕು. ಪ್ರಸ್ತುತ ಹಲವು ಅಗತ್ಯತೆಯ ಬಗ್ಗೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಈ ಕುರಿತು ಸಹ ಸೂಕ್ತ ಕ್ರಮಕ್ಕೆ ಸೂಚಿಸುತ್ತೇನೆ ಎಂದರು.ಗೋಕರ್ಣ ಪುಣ್ಯ ಕ್ಷೇತ್ರದ ಜೊತೆ ಪ್ರವಾಸಿ ತಾಣವೂ ಆಗಿದ್ದು, ಇಲ್ಲಿ ಪ್ರವಾಸಿಗರಿಗೆ, ಭಕ್ತರಿಗೆ ಸಮರ್ಪಕವಾದ ಮೂಲಭೂತ ಸೌಕರ್ಯ ಸಿಗುತ್ತಿಲ್ಲ. ಗೋಕರ್ಣಕ್ಕೆ ಸರಿಯಾದ ಒಳಚರಂಡಿ ವ್ಯವಸ್ಥೆಯೂ ಇಲ್ಲ ಎಂಬ ಕುರಿತು ಸಚಿವರ ಗಮನ ಸೆಳೆದಾಗ ಈ ಕುರಿತು ಉತ್ತರಿಸಿದರು.
ಆತ್ಮಲಿಂಗಕ್ಕೆ ಪೂಜೆಗೋಕರ್ಣದ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರಕ್ಕೆ ಸಚಿವ ಶೇಖಾವತ್ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು.
ಮಂದಿರದ ಅರ್ಚಕ ಅಮೃತೇಶ್ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು. ಬಳಿಕ ಮಂದಿರದಿಂದ ಪ್ರಸಾದ ನೀಡಿ ಗೌರವಿಸಲಾಯಿತು.ಈ ವೇಳೆ ಮಂದಿರದ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿಯಾದ ಕುಮಟಾ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ಸದಸ್ಯರಾದ ಮಹೇಶ್ ಹಿರೆಗಂಗೆ, ಪರಮೇಶ್ವರ ರಮಣಿ ಪ್ರಸಾದ್, ಮಂದಿರದ ವ್ಯವಸ್ಥಾಪಕ ಸುಬ್ರಹ್ಮಣ್ಯ ಹೆಗಡೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ್ ಶೆಟ್ಟಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ತಾಲೂಕು ಅಧ್ಯಕ್ಷ ಜೆ.ಐ. ಹೆಗಡೆ, ಪಕ್ಷದ ಸ್ಥಳೀಯ ಪ್ರಮುಖರಾದ ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಮಂಜುನಾಥ ಜನ್ನು, ಮಹೇಶ್ ಶೆಟ್ಟಿ, ಶಂಕರ ಗೌಡ, ಭಾರತೀ ದೇವತೆ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಮಂದಿರದ ವ್ಯವಸ್ಥಾಪಕರು, ಸಿಬ್ಬಂದಿ ಸ್ಮರಣಿಕೆ ನೀಡಿ ಸಚಿವರನ್ನು ಗೌರವಿಸಿದರು. ಇವೆರಡೂ ದೇವಾಲಯಗಳ ಭೇಟಿ ಬಳಿಕ ತಾಮ್ರಗೌರಿ ಮಂದಿರಕ್ಕೆ ತೆರಳಿ ದೇವಿ ದರ್ಶನ ಪಡೆದರು.