ಸಾರಾಂಶ
ಐದು ಸಾವಿರ ಎಕರೆಗೆ ಕೆರೆಯ ನೀರು ಉಪಯೋಗವಾಗಲಿದೆ. ರೈತರಿಗೆ ಬೆಳೆ ಬೆಳೆಯಲು ಕೆರೆ ನೀರು ಉಪಯೋಗಿಸಬಹುದು. ಮುಂದಿನ ದಿನಗಳಲ್ಲಿ ರೈತರಿಗೆ ನೀರು ಸರಬರಾಜು ಆಗುತ್ತದೆ.
ಅಳ್ನಾವರ:
ತಾಲೂಕಿನ ಹುಲಿಕೇರಿಯ ಇಂದಿರಮ್ಮನ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ₹ 6 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ಕೆರೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ಮಾಡಿದ ಅವರು, ಕಾಮಗಾರಿಯ ವೇಳೆ ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಸಹಕರಿಸಬೇಕು. ಕಾಮಗಾರಿಯನ್ನು 9 ತಿಂಗಳ ಅವಧಿಯೊಳಗೆ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಐದು ಸಾವಿರ ಎಕರೆಗೆ ಕೆರೆಯ ನೀರು ಉಪಯೋಗವಾಗಲಿದೆ. ರೈತರಿಗೆ ಬೆಳೆ ಬೆಳೆಯಲು ಕೆರೆ ನೀರು ಉಪಯೋಗಿಸಬಹುದು. ಮುಂದಿನ ದಿನಗಳಲ್ಲಿ ರೈತರಿಗೆ ನೀರು ಸರಬರಾಜು ಆಗುತ್ತದೆ ಎಂದರು.ಈ ವೇಳೆ ತಹಸೀಲ್ದಾರ್ ಬಸವರಾಜ ಬೆಣ್ಣಿಶಿರೋರ, ತಾಲೂಕು ಮಟ್ಟದ ಅಧಿಕಾರಿಗಳು, ಹುಲಿಕೇರಿ ಗ್ರಾಮಸ್ಥರು ಭಾಗವಹಿಸಿದ್ದರು.
ನಾಲ್ಕು ವರ್ಷಗಳ ಹಿಂದೆ ಅತಿವೃಷ್ಟಿಯಿಂದ ಕೆರೆಯ ಸೇತುವೆಯ ಕಾಲುವೆ ಒಡೆದಿತ್ತು. ಎರಡು ವರ್ಷದ ಹಿಂದೇ ಈ ಕಾಲುವೆ ಸುಧಾರಣೆಗೆ ಟೆಂಡರ್ ಆಗಿತ್ತು. ಆದರೆ, ಗುತ್ತಿಗೆದಾರ ಕಾಮಗಾರಿ ಆರಂಭಿಸದೇ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿತ್ತು. ಈ ಕುರಿತು ಕನ್ನಡಪ್ರಭ ಹಾಗೂ ಸುವರ್ಣ ಸುದ್ದಿ ವಾಹಿನಿ ವಿಶೇಷ ವರದಿ ಸಹ ಮಾಡಿತ್ತು. ಇದೀಗ ಮರು ಟೆಂಡರ್ ಕರೆದು ಕಾಮಗಾರಿಗೆ ಮರು ಚಾಲನೆ ನೀಡಲಾಯಿತು.