ಕೋಲಾರ ಜಿಲ್ಲೆಯ ಅಭಿವೃದ್ಧಿ ನಮ್ಮ ಮೊದಲ ಆದ್ಯತೆ: ಸಂಸದ ಮಲ್ಲೇಶ್ ಬಾಬು

| Published : Jul 05 2024, 12:48 AM IST

ಕೋಲಾರ ಜಿಲ್ಲೆಯ ಅಭಿವೃದ್ಧಿ ನಮ್ಮ ಮೊದಲ ಆದ್ಯತೆ: ಸಂಸದ ಮಲ್ಲೇಶ್ ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಕೆಜಿಎಫ್ ವ್ಯಾಪ್ತಿಯ ಬಿಜಿಎಂಎಲ್ ಕಾರ್ಖಾನೆಗೆ ಸೇರಿದ ೧೨ ಸಾವಿರ ಎಕರೆ ಜಮೀನಿನಲ್ಲಿ ಕೈಗಾರಿಕೆಗಳ ಹಬ್ ನಿರ್ಮಿಸಲು ಮುಂದಾಗಿದೆ, ಇದರಿಂದ ವ್ಯಾಪಾರ ವಹಿವಾಟಿಗೆ ಅನುಕೂಲಕರವಾಗಲಿದೆ, ಈ ಯೋಜನೆಯು ೨೦೦೮ರಲ್ಲಿ ಆಗಿನ ಸಚಿವರಾದ ಆಲಂಗೂರು ಶ್ರೀನಿವಾಸ್ ಅವರ ಕನಸಾಗಿತ್ತು.ಇದು ಸುಮಾರು ೨೦ ಕೋಟಿ ರು. ಯೋಜನೆಯಾಗಿತ್ತು. ಆದರೆ ಆರ್ಥಿಕ ಸಮಸ್ಯೆಯಿಂದ ಕೈಗೆತ್ತಿಕೊಂಡಿರಲಿಲ್ಲ, ಈಗ ಇದಕ್ಕೆ ಪುನರ್ ಚಾಲನೆ ನೀಡಬೇಕಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರ ಅವಿಭಜಿತ ಜಿಲ್ಲೆಯಾದ ಚಿಕ್ಕಬಳ್ಳಾಪುರ ಸೇರಿ ಈ ಹಿಂದಿನ ಆಡಳಿತದಲ್ಲಿ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆಯಲ್ಲಿದ್ದ ನೂತನ ರೈಲ್ವೆ ಮಾರ್ಗಗಳ ಜೊತೆಗೆ ರಾಷ್ಟ್ರೀಯ ಹೆದ್ದಾರಿಯ ಹಲವು ಹೊಸದಾದ ಮಾರ್ಗಗಳ ಪ್ರಸ್ತಾವನೆಗೆ ಸಂಬಂಧಪಟ್ಟಂತೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ವಿ.ಸೋಮಣ್ಣರೊಂದಿಗೆ ಚರ್ಚಿಸುವುದಾಗಿ ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.

ನಗರದ ಹಳೆಯ ಜಿಲ್ಲಾಧಿಕಾರಿ ಆವರಣದಲ್ಲಿ ಸಂಸದ ಕಚೇರಿಯಲ್ಲಿ ಶಾಸ್ತ್ರೋಸ್ತ್ರವಾಗಿ ಪೂಜೆ ಸಲ್ಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಕುಪ್ಪಂ, ಬಂಗಾರಪೇಟೆ, ಶ್ರೀನಿವಾಸಪುರ, ಶಿಡ್ಲಘಟ್ಟ ಮಾರ್ಗವಾಗಿ ಬಾಗೇಪಲ್ಲಿಗೆ, ಹೊಸಕೋಟೆ ಮಾರ್ಗವಾಗಿ ಬಾಗೇಪಲ್ಲಿ, ಕೋಲಾರ ಹೊಸೂರು ಎನ್.ಎಚ್ ಮಾರ್ಗ ಪ್ರಸ್ತಾವನೆಯಲ್ಲಿದೆ. ಈ ಕುರಿತು ಸಚಿವರೊಂದಿಗೆ ಚರ್ಚಿಸಿ ಬಜೆಟ್‌ಗೆ ಸೇರ್ಪಡೆ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕೋಲಾರ ವೈಟ್ ಫೀಲ್ಡ್ ಮಾರ್ಗಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ.೫೦ರಷ್ಟು ಭೂಮಿ ಸ್ವಾಧೀನಕ್ಕೆ ಪಡೆಯಬೇಕೆಂಬುವುದಾಗಿ ಅಥವಾ ಪೂರ್ಣ ಭೂಮಿಯ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಿದರೆ ಉಳಿದ ಶೇ.೧೦೦ರಷ್ಟು ವೆಚ್ಚ ಬೋರ್ಡ್ ಭರಿಸುವುದಾಗಿ ಹೇಳಲಾಗಿತ್ತು, ಈ ಯೋಜನೆಯ ಪ್ರಸ್ತಾವನೆಯು ನೆನಗುದಿಗೆ ಬಿದ್ದಿರುವುದಕ್ಕೆ ಮರುಜೀವ ಕೊಡಬೇಕಾಗಿದೆ ಎಂದರು.

ಕೋಲಾರ, ವಡಗೂರು, ಮುಳಬಾಗಿಲು, ನಂಗಲಿ, ಮದನಪಲ್ಲಿ ರೈಲು ಮಾರ್ಗವು ಪ್ರಸ್ತಾವನೆಯಲ್ಲಿದೆ, ಇದರ ಜೊತೆಗೆ ಶ್ರೀನಿವಾಸಪುರ ಮೂಲಕ ಮದನಪಲ್ಲಿ ಮಾರ್ಗವೂ ಸೇರಿ ಎರಡು ಯೋಜನೆಗಳಿದ್ದು, ಇವುಗಳಲ್ಲಿ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ, ರೈಲ್ವೆ ಕೋಚ್ ಕಾರ್ಖಾನೆ ಈ ಹಿಂದೆ ಪ್ರಸ್ತಾವನೆಯಲ್ಲಿದ್ದು, ಬದಲಾಗಿ ವರ್ಕಶಾಪ್ ಮಾಡಲು ನಿರ್ಧರಿಸಲಾಗಿತ್ತು, ಇದಕ್ಕೆ ಸಂಬಂಧಪಟ್ಟ ಭೂಮಿಯನ್ನು ರಾಜ್ಯ ಸರ್ಕಾರವು ಇನ್ನೂ ನೀಡದಿರುವುದರಿಂದ ವಿಳಂಬವಾಗಿದೆ, ಈ ಕುರಿತು ಸಚಿವ ಸೋಮಣ್ಣರೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದರು.

ಜಿಲ್ಲೆಯ ಪ್ರಸಿದ್ಧ ಬೆಳೆಯಾದ ಟೊಮೆಟೋ ಮತ್ತು ಮಾವು ಎರಡು ಬೆಳೆಗಳ ಉತ್ಪಾದನೆಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಮುಳಬಾಗಿಲು ಮತ್ತು ಕೋಲಾರದಲ್ಲಿ ಬಂಕ್ ಯೂನಿಟ್ ನಿರ್ಮಿಸಲು ಚಿಂತಿಸಲಾಗಿದೆ, ಈ ಸಂಬಂಧ ಸರ್ಕಾರದೊಂದಿಗೆ ಪ್ರಸ್ತಾವನೆ ನಡೆಸಲಾಗುವುದು ಎಂದು ಹೇಳಿದರು.

ಕೆಜಿಎಫ್ ವ್ಯಾಪ್ತಿಯ ಬಿಜಿಎಂಎಲ್ ಕಾರ್ಖಾನೆಗೆ ಸೇರಿದ ೧೨ ಸಾವಿರ ಎಕರೆ ಜಮೀನಿನಲ್ಲಿ ಕೈಗಾರಿಕೆಗಳ ಹಬ್ ನಿರ್ಮಿಸಲು ಮುಂದಾಗಿದೆ, ಇದರಿಂದ ವ್ಯಾಪಾರ ವಹಿವಾಟಿಗೆ ಅನುಕೂಲಕರವಾಗಲಿದೆ, ಈ ಯೋಜನೆಯು ೨೦೦೮ರಲ್ಲಿ ಆಗಿನ ಸಚಿವರಾದ ಆಲಂಗೂರು ಶ್ರೀನಿವಾಸ್ ಅವರ ಕನಸಾಗಿತ್ತು.ಇದು ಸುಮಾರು ೨೦ ಕೋಟಿ ರು. ಯೋಜನೆಯಾಗಿತ್ತು. ಆದರೆ ಆರ್ಥಿಕ ಸಮಸ್ಯೆಯಿಂದ ಕೈಗೆತ್ತಿಕೊಂಡಿರಲಿಲ್ಲ, ಈಗ ಇದಕ್ಕೆ ಪುನರ್ ಚಾಲನೆ ನೀಡಬೇಕಾಗಿದೆ ಎಂದರು.

ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಶ್ರೀನಿವಾಸಪುರ ಹೊರವಲಯದಲ್ಲಿ ೨ ಸಾವಿರ ಎಕರೆ ಮತ್ತು ೩ ಸಾವಿರ ಎಕರೆ ಜಮೀನಿನನ್ನು ಕೆಐಎಡಿಬಿ ವತಿಯಿಂದ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಲು ಚಿಂತಿಸಲಾಗಿದೆ. ನಮ್ಮ ಪಕ್ಷದ ಸಂಸದರಾದ ಕುಮಾರಸ್ವಾಮಿ ಬೃಹತ್ ಕೈಗಾರಿಕೆ ಸಚಿವರಾಗಿರುವುದರಿಂದ ನಮಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕೋಲಾರ ಜಿಲ್ಲೆಗೆ ಸಂಬಂಧಿಸಿ ಇಬ್ಬರು ಶಾಸಕರು, ಓರ್ವ ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಸೇರಿ ೪ ಮಂದಿಯ ನಿಯೋಗವು ಸರ್ಕಾರದೊಂದಿಗೆ ಚರ್ಚಿಸಿ ಅಭಿವೃದ್ಧಿ ಯೋಜನೆಗಳನ್ನು ತರುತ್ತೇವೆ, ಅಧಿಕಾರಿಗಳು ನಮ್ಮ ನಡುವಳಿಕೆಗಳಿಗೆ ತಕ್ಕಂತೆ ಸ್ಪಂದಿಸುತ್ತಾರೆ. ಯಾವುದೇ ಕೆಲಸಗಳು ಕಾನೂನು ಪ್ರಕಾರ ಇದ್ದಲ್ಲಿ ಅನುಷ್ಠಾನಕ್ಕೆ ತರಲು ಒತ್ತಡ ತರಬಹುದಾಗಿದೆ ಎಂದು ಪ್ರತಿಕ್ರಿಯಿಸಿದರು.

ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಜೆಡಿಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಣಕನಹಳ್ಳಿ ನಟರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ವಡಗೂರು ರಾಮು, ತಾಲೂಕು ಅಧ್ಯಕ್ಷ ಬಾಬು ಮೌನಿ, ಕೆಡಿಪಿ ಸದಸ್ಯ ಅರಹಳ್ಳಿ ಅಶ್ವತ್ಥ್ ಗೌಡ ಇದ್ದರು.

ಅವಿಭಜಿತ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಕ್ರಮ:

ಕೋಲಾರ- ಚಿಕ್ಕಬಳ್ಳಾಪುರ ಅವಿಭಜಿತ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಕೃಷ್ಣಾ ನದಿ ನೀರು ಆಂಧ್ರ ಪ್ರದೇಶಕ್ಕೆ ನೀಡಿರುವ ಸಂರ್ಪಕವು ನಮ್ಮ ಜಿಲ್ಲೆಯ ಗಡಿಭಾಗ ಹಾದು ಹೋಗಿರುವುದರಿಂದ ಅನುಕೂಲಕರವಾಗಿದೆ, ಈ ಕುರಿತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರೊಂದಿಗೆ ಚರ್ಚಿಸಿ ಕುಪ್ಪಂ ಜಿಲ್ಲೆಯ ಮಾರ್ಗದಿಂದ ಜಿಲ್ಲೆಗೆ ನೀರು ತರಲು ಚಿಂತಿಸಲಾಗಿದೆ, ಈ ಕುರಿತು ಟಿಡಿಪಿ ಅವರೊಂದಿಗೆ ಪ್ರಸ್ತಾವನೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಜನತೆಯು ಸೇವೆ ಸಲ್ಲಿಸಲು ಆಶೀರ್ವಾದಿಸಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎನ್.ಡಿ.ಎ.ಯಲ್ಲಿ ಜೆಡಿಎಸ್ ಪಕ್ಷವೂ ಒಂದು ಭಾಗವಾಗಿದೆ, ಕುಮಾರಸ್ವಾಮಿ ನಮ್ಮ ರಾಜ್ಯದಿಂದ ಕೇಂದ್ರ ಸಚಿವರಾಗಿದ್ದಾರೆ. ಮೋದಿಯವರ ೫ ವರ್ಷಗಳ ಆಡಳಿತದಲ್ಲಿ ಉತ್ತಮ ಸೇವೆ ಸಲ್ಲಿಸಲಾಗುವುದು ಎಂದು ಹೇಳಿದರು.