ಸಾರಾಂಶ
ಪ್ರವಾಸಿ ಕೇಂದ್ರ ತಾಲೂಕಿನ ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಗಿರಿಧಾಮದಲ್ಲಿ ಹಸಿರು ಉದ್ಯಾನವನ, ವಿವಿಧ ಬಗೆಯ ಹೂಗಿಡಗಳು, ಹಸಿರು ಹುಲ್ಲು ಹಾಸಿನ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ತೋಟಗಾರಿಕೆ ವಿಶೇಷಾಧಿಕಾರಿ ಕುಬೇರಾಚಾರ್ ಮಾಹಿತಿ ನೀಡಿದ್ದಾರೆ
ಕನ್ನಡಪ್ರಭ ವಾರ್ತೆ, ತರೀಕೆರೆ
ಪ್ರವಾಸಿ ಕೇಂದ್ರ ತಾಲೂಕಿನ ಕೆಮ್ಮಣಗುಂಡಿ ಗಿರಿಧಾಮಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಗಿರಿಧಾಮದಲ್ಲಿ ಹಸಿರು ಉದ್ಯಾನವನ, ವಿವಿಧ ಬಗೆಯ ಹೂಗಿಡಗಳು, ಹಸಿರು ಹುಲ್ಲು ಹಾಸಿನ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ತೋಟಗಾರಿಕೆ ವಿಶೇಷಾಧಿಕಾರಿ ಕುಬೇರಾಚಾರ್ ಮಾಹಿತಿ ನೀಡಿದ್ದಾರೆ.ಬಿರು ಬೇಸಿಗೆ ಸಮಯದಲ್ಲಿ ಅತ್ಯಂತ ತಂಪಿನ ಪ್ರದೇಶ ಮತ್ತು ಆಹ್ಲಾದಕರ ವಾತಾವರಣಕ್ಕೆ ಖ್ಯಾತಿ ಪಡೆದಿರುವ ಬಡವರ ಊಟಿ ಎಂದೇ ಹೆಸರಾದ ತರೀಕೆರೆ ತಾಲೂಕಿನ ಕೆಮ್ಮಣಗುಂಡಿ ಪ್ರವಾಸಿ ಗಿರಿಧಾಮದಲ್ಲಿ ಈ ಬಾರಿ ಪ್ರವಾಸಿಗರ ಸಂಖ್ಯೆ ಸ್ವಲ್ಪ ಇಳಿಮುಖವಾಗಿದೆ ಎಂದರು.
ಪ್ರತಿವರ್ಷ ಸಂಕ್ರಾಂತಿ, ರಥಸಪ್ತಮಿ ಮುಗಿದ ನಂತರ ಫೆಬ್ರವರಿ-ಮಾರ್ಜ್ ತಿಂಗಳಲ್ಲಿ ತಲೆದೋರುವ ಬೇಸಿಗೆ ಧಗೆಯಲ್ಲಿ ತಂಪಾದ ಗಿರಿಧಾಮ ಪ್ರದೇಶದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು ಇರಬೇಕಿತ್ತು, ಆದರೆ ಈ ಬಾರಿ ಫೆಬ್ರವರಿ ತಿಂಗಳ ಕೊನೆ ವಾರದ ವೇಳೆಗೆ ಪ್ರವಾಸಿಗರ ಸಂಖ್ಯೆ ಅಷ್ಟೇನು ಹೆಚ್ಚಾಗಿ ಇರಲಿಲ್ಲ, ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳ ವಾರ್ಷಿಕ ಪರೀಕ್ಷೆಗಳ ಸಮಯ ಹಾಗೂ ಪರೀಕ್ಷೆಗೆ ಪೂರ್ವ ಸಿದ್ದತೆಗಳ ಕಾರಣ, ಹಾಗೂ ಕಳೆದ ವರ್ಷ ನಿರೀಕ್ಷಿತ ಮಳೆ ಬಾರದೆ ಗಿರಿಧಾಮದಲ್ಲಿ ಉಂಟಾಗಿರುವ ಒಣ ಹವೆ ಇತ್ಯಾದಿಗಳಿಂದ ಸಾಮಾನ್ಯವಾಗಿ ಗಿರಿಧಾಮಗಳ ಕಡೆಗೆ ಬಂದು ಹೋಗುತ್ತಿದ್ದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಕಲ್ಲತ್ತಿಗಿರಿಯಲ್ಲಿ ಮತ್ತು ಹೆಬ್ಬೆ ಜಲಪಾತದಲ್ಲಿ ನೀರಿನ ಹರಿವು ಇಳಿಮುಖವಾಗಿರುವುದು ಮತ್ತೊಂದು ಮಹತ್ವದ ಕಾರಣ ಎಂದು ತಿಳಿಸಿದ್ದಾರೆ.ಸೂರ್ಯೋದಯ, ಸೂರ್ಯಾಸ್ತಮಾನ ಆಕರ್ಷಣೀಯ:
ಈ ಬಾರಿ ನಿರೀಕ್ಷಿತ ಮಳೆ ಹೆಚ್ಚಿನ ಪ್ರಮಾಣದಲ್ಲಿ ಬಂದು ಗಿರಿಧಾಮದಲ್ಲಿ ಹರಿಯುವ ಸಣ್ಣಪುಟ್ಟ ಜಲಪಾತಗಳು ಎಂದಿನಂತೆ ತುಂಬಿ ಹರಿದರೆ ಆಗ ಖಂಡಿತವಾಗಿ ಪ್ರವಾಸಿಗರ ಸಂಖ್ಯೆ ತನ್ನಂತೆ ತಾನೆ ಹೆಚ್ಚಾಗುತ್ತದೆ. ಕೆಮ್ಮಣ್ಣುಗುಂಡಿ ಗಿರಿಧಾಮದಲ್ಲಿ ನೂತನವಾಗಿ ಶಿತೋಷ್ಣವಲಯದ ವಿವಿಧ ಬಗೆಯ ಅಲಂಕಾರಿಕ ಗಿಡ ಮತ್ತು ವಿವಿಧ ಬಗೆಯ ಹೂ ಗಿಡಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಮಳೆ ಬಂದರೆ ವಿವಿಧ ಹೂಗಿಡಗಳಲ್ಲಿ ಆಕರ್ಷಣೀಯವಾಗಿ ಹೂವುಗಳು ಮತ್ತು ಪ್ರಕೃತಿದತ್ತವಾದ ಹಸಿರಿನ ವಾತಾವರಣ ಮೂಡುತ್ತದೆ. ಗಿರಿಧಾಮದಲ್ಲಿ ಜೆಡ್ ಪಾಯಿಂಟಿನ ಬೆಳಗಿನ ಸೂರ್ಯೋದಯ ಹೊಂಗಿರಣ ಹಾಗೂ ಸಂಜೆಯ ಸೂರ್ಯಾಸ್ತಮಾನದ ಹೊಂಬಣ್ಣ ದೃಶ್ಯಸಹಜವಾಗಿಯೇ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷವಾಗಿ ಆಕರ್ಷಿಸುತ್ತದೆ ಎಂದರು.ಬೇಸಿಗೆ ಕಾಲವಾದ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಗಿರಿಧಾಮಕ್ಕೆ ಭೇಟಿ ನೀಡುತ್ತಾರೆ ಎಂದು ತಿಳಿಸಿದ್ದಾರೆ.
25ಕೆಟಿಆರ್.ಕೆ.4ಃ ಕೆಮ್ಮಣಗುಂಡಿ ಗಿರಿಧಾಮ25ಕೆಟಿಆರ್.ಕೆ.5ಃ ಗಿರಿಧಾಮದಲ್ಲಿ ಸೂರ್ಯಾಸ್ತಮಾನದ ಹೊಂಬಣ್ಣದ ದೃಶ್ಯ