ಬೆಂಗಳೂರು ಐಟಿ ಹಬ್‌ ಮಾದರಿಯಲ್ಲಿ ಮಂಗಳೂರಲ್ಲಿ ‘ಸಿಲಿಕಾನ್‌ ಬೀಚ್‌’ ಅಭಿವೃದ್ಧಿ

| Published : Aug 10 2025, 01:35 AM IST

ಬೆಂಗಳೂರು ಐಟಿ ಹಬ್‌ ಮಾದರಿಯಲ್ಲಿ ಮಂಗಳೂರಲ್ಲಿ ‘ಸಿಲಿಕಾನ್‌ ಬೀಚ್‌’ ಅಭಿವೃದ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರ ‘ಬ್ಯಾಕ್‌ ಟು ಊರು’ ಪರಿಕಲ್ಪನೆಯಡಿ ದೇಶ, ಹೊರ ದೇಶಗಳಲ್ಲಿರುವ ಮಂಗಳೂರಿಗರನ್ನು ಮರಳಿ ಇಲ್ಲಿಗೆ ಆಹ್ವಾನಿಸಿ ಸಾಫ್ಟ್‌ವೇರ್‌ ಉದ್ದಿಮೆಯನ್ನು ಸ್ಥಾಪಿಸುವಂತೆ ಪ್ರೇರೇಪಿಸಲು ಈ ವೇದಿಕೆ ಕಲ್ಪಿಸಲಾಗಿದೆ. ಈ ಹಿಂದೆ ‘ಬೊಳ್ಪು’ ಎಂಬ ಕಾರ್ಯಕ್ರಮ ಸಂಘಟಿಸಿ ಪರವೂರಿನಲ್ಲಿರುವ ಊರಿನವರಿಗೆ ಊರಿನಲ್ಲೇ ಉದ್ದಿಮೆ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿತ್ತು, ಇದೀಗ ‘ಸಿಲಿಕಾನ್‌ ಬೀಚ್‌’ ವೇದಿಕೆಯಡಿ ಸಾಫ್ಟ್‌ವೇರ್‌ ಕಂಪನಿಗಳ ಸ್ಥಾಪನೆಗೆ ಮುಕ್ತ ಅವಕಾಶ ನೀಡಲಾಗಿದೆ.

ಸಂಸದ ಕ್ಯಾ.ಬ್ರಿಜೇಶ್ ಚೌಟರ ‘ಬ್ಯಾಕ್‌ ಟು ಊರು’ ಪರಿಕಲ್ಪನೆಯಡಿ ಸಾಫ್ಟ್‌ವೇರ್‌ ಸ್ಥಾಪನೆಗೆ ಆಹ್ವಾನಕನ್ನಡಪ್ರಭ ವಾರ್ತೆ ಮಂಗಳೂರುಬೆಂಗಳೂರು ಐಟಿ ಹಬ್‌ ಮಾದರಿಯಲ್ಲಿ ಮಂಗಳೂರನ್ನು ಭಾರತದ ‘ಸಿಲಿಕಾನ್‌ ಬೀಚ್‌’ ಆಗಿ ಪರಿವರ್ತಿಸಿ ವಿವಿಧ ಸಾಫ್ಟ್‌ವೇರ್‌ ಕಂಪನಿಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲು ಸಿಲಿಕಾನ್‌ ಬೀಚ್‌ ಕಾರ್ಯಕ್ರಮ(ಎಸ್‌ಬಿಪಿ) ಆರಂಭಿಸಲಾಗಿದೆ.

ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರ ‘ಬ್ಯಾಕ್‌ ಟು ಊರು’ ಪರಿಕಲ್ಪನೆಯಡಿ ದೇಶ, ಹೊರ ದೇಶಗಳಲ್ಲಿರುವ ಮಂಗಳೂರಿಗರನ್ನು ಮರಳಿ ಇಲ್ಲಿಗೆ ಆಹ್ವಾನಿಸಿ ಸಾಫ್ಟ್‌ವೇರ್‌ ಉದ್ದಿಮೆಯನ್ನು ಸ್ಥಾಪಿಸುವಂತೆ ಪ್ರೇರೇಪಿಸಲು ಈ ವೇದಿಕೆ ಕಲ್ಪಿಸಲಾಗಿದೆ. ಈ ಹಿಂದೆ ‘ಬೊಳ್ಪು’ ಎಂಬ ಕಾರ್ಯಕ್ರಮ ಸಂಘಟಿಸಿ ಪರವೂರಿನಲ್ಲಿರುವ ಊರಿನವರಿಗೆ ಊರಿನಲ್ಲೇ ಉದ್ದಿಮೆ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿತ್ತು, ಇದೀಗ ‘ಸಿಲಿಕಾನ್‌ ಬೀಚ್‌’ ವೇದಿಕೆಯಡಿ ಸಾಫ್ಟ್‌ವೇರ್‌ ಕಂಪನಿಗಳ ಸ್ಥಾಪನೆಗೆ ಮುಕ್ತ ಅವಕಾಶ ನೀಡಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಮಂಗಳೂರಲ್ಲಿ 40ಕ್ಕೂ ಅಧಿಕ ಹೊಸ ಸಾಫ್ಟ್‌ವೇರ್‌ ಕಂಪನಿಗಳು ಕಾರ್ಯಾಚರಿಸುತ್ತಿದ್ದು, 8 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿವೆ. ಮುಂದಿನ 10 ವರ್ಷಗಳಲ್ಲಿ ಕರಾವಳಿಯಲ್ಲಿ 4 ಸಾವಿರ ಸ್ಟಾರ್ಟಪ್‌ಗಳನ್ನು ಸ್ಥಾಪಿಸಿ 2 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಲ್ಲದೆ, 20 ಬಿಲಿಯನ್‌ ಡಾಲರ್‌ ಹೂಡಿಕೆಯ ಗುರಿ ಹೊಂದಲಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದರು.

ಮಂಗಳೂರಿನ ಯೆಯ್ಯಾಡಿಯಲ್ಲಿ ಶನಿವಾರ ‘ಸಿಲಿಕಾನ್‌ ಬೀಚ್‌’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿಲಿಕಾನ್‌ ಬೀಚ್‌ ಪ್ರೋಗ್ರಾಂನಡಿ ಹೊಸತಾಗಿ ಹಾಗೂ ಅನುಭವಿ ಉದ್ಯೋಗಿಗಳಿಗೂ ಉದ್ಯೋಗಕ್ಕೆ ಅವಕಾಶ ಇದೆ. ಕರಾವಳಿಯಿಂದ ಹೊರಗೆ ಉದ್ಯೋಗದಲ್ಲಿ ಇರುವ ಶೇ.95ರಷ್ಟು ಮಂದಿಗೆ ಮರಳಿ ಊರಿನಲ್ಲಿ ಉದ್ಯೋಗ ಸ್ಥಾಪಿಸಬೇಕು ಎಂಬ ಹಂಬಲ ಇದೆ. ರಾಜಧಾನಿ ಬೆಂಗಳೂರಿನಿಂದ ಹೊರಗೆ ಉದ್ಯೋಗ ಸ್ಥಾಪನೆ ಹಾಗೂ ಉದ್ಯೋಗ ಸೃಷ್ಟಿಗೆ ಸರ್ಕಾರವೇ ಆದ್ಯತೆ ನೀಡುತ್ತಿದೆ. ಮಂಗಳೂರಿನಲ್ಲಿ ಸಾಫ್ಟ್‌ವೇರ್‌ ಕಂಪನಿಗಳ ಹೂಡಿಕೆಗೆ ಮುಕ್ತ ಆಹ್ವಾನ ನೀಡುವಂತೆ ಸಚಿವರಾದ ಪ್ರಿಯಾಂಕ್‌ ಖರ್ಗೆ ಹಾಗೂ ಎ.ಬಿ.ಪಾಟೀಲ್‌ಗೆ ಮನವಿ ಮಾಡಲಾಗಿದೆ ಎಂದರು.

ಜಾಗತಿಕ ಸಮೀಕ್ಷೆಯೊಂದರ ಪ್ರಕಾರ ಸುರಕ್ಷತೆಯಲ್ಲಿ ಮಂಗಳೂರು ಮೊದಲ ಸ್ಥಾನದಲ್ಲಿದೆ. ಹೀಗಾಗಿ ಮಂಗಳೂರಲ್ಲಿ ಹೂಡಿಕೆ ಮಾಡುವುದರಲ್ಲಿ ಯಾವುದೇ ಹಿಂಜರಿಕೆಯ ಅಗತ್ಯ ಇಲ್ಲ. ಕೆಲವು ಸ್ಥಾಪಿತ ಹಿತಾಸಕ್ತಿಗಳು ಮಂಗಳೂರು ಬಗ್ಗೆ ಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ಅದಕ್ಕೆ ಯಾರೂ ಕಿವಿಗೊಡದೆ, ಊಹಾಪೋಹಗಳಿಗೂ ಮನ್ನಣೆ ನೀಡದೆ ಸಾಫ್ಟ್‌ವೇರ್‌ ಉದ್ದಿಮೆಗಳನ್ನು ಸ್ಥಾಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಆಹ್ವಾನ ನೀಡಿದರು.

ಎಸ್‌ಪಿಬಿ ಸಂಚಾಲಕ ರೋಹಿತ್‌ ಭಟ್‌ ಮಾತನಾಡಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಕಂಪನಿಗಳು ಸಿಲಿಕಾನ್‌ ಬೀಚ್‌ಗೆ ಸ್ಥಳಾಂತರಗೊಂಡರೆ ಅನುಭವಿ ವೃತ್ತಿಪರರನ್ನು ನೇಮಿಸಲು ಸಾಧ್ಯವಾಗುತ್ತದೆ. ಇಲ್ಲೇ ಉದ್ಯೋಗ ಸೃಷ್ಟಿಸುವ ಮೂಲಕ ಪ್ರತಿಭಾ ಪಲಾಯನ ತಡೆಯಲು ಸಹಕಾರಿಯಾಗಲಿದೆ. ಕರ್ನಾಟಕ ಡಿಜಿಟಲ್‌ ಎಕಾನಮಿ(ಕೆಡಿಇಎಂ), ಟೈಇ ಮಂಗಳೂರು ಬೆಂಬಲದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸಿಐಐ ಮಂಗಳೂರು ಅಧ್ಯಕ್ಷ ನಟರಾಜ್‌ ಹೆಗ್ಡೆ, ಯುನಿಫೈಸಿಎಕ್ಸ್‌ ಮುಖ್ಯ ಅಧಿಕಾರಿ ಶ್ಯಾಮಪ್ರಸಾದ್‌ ಹೆಬ್ಬಾರ್‌, ಕೆಸಿಸಿಐ ಗೌರವ ಕಾರ್ಯದರ್ಶಿ ಅಶ್ವಿನಿ ಪೈ ಮಾರೂರು, ಯುನಿಕೋರ್ಟ್‌ ಸಹ ಸಂಸ್ಥಾಪಕ ಪ್ರಶಾಂತ್‌ ಶೆಣೈ, ಚೇತನ್‌ ದೀಕ್ಷಿತ್‌, ಮುಖೇಶ್‌, ಆದಿತಿ ಮತ್ತಿತರರಿದ್ದರು.

-----------

ವೆಬ್‌ಸೈಟ್‌ನಲ್ಲಿ ನೋಂದಾಯಿಸಿ, ಉದ್ಯೋಗ ಆಯ್ಕೆ ಮಾಡಿ

ಇದಕ್ಕಾಗಿ ಪ್ರತ್ಯೇಕ ವೆಬ್‌ಸೈಟ್‌-(www.siliconbeachprogram.com/homecoming) ರೂಪಿಸಲಾಗಿದೆ. ಈ ವೆಬ್‌ಸೈಟ್‌ಗೆ ತೆರಳಿ ಬೇಕಾದ ಸಾಫ್ಟ್‌ವೇರ್‌ ಕಂಪನಿಗಳನ್ನು ಆಯ್ಕೆ ಮಾಡಿ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗಲಿದೆ. ಅವಶ್ಯಕ ವಿವರಗಳನ್ನು ಭರ್ತಿ ಮಾಡಿ ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು.

ಇಲ್ಲಿ ಕಂಪನಿ ಸ್ಥಾಪನೆಗೆ ಬೇಕಾದ ಮೂಲಸೌಕರ್ಯ ಸೇರಿದಂತೆ ವಿವಿಧ ಸವಲತ್ತುಗಳನ್ನು ಒದಗಿಸಿಕೊಡಲು ಸಿಲಿಕಾನ್‌ ಬೀಚ್‌ ಸಿದ್ಧವಿದೆ ಎಂದು 99 ಗೇಮ್ಸ್‌ ಅಂಡ್‌ ರೋಬೋಸಾಫ್ಟ್‌ ಸಂಸ್ಥಾಪಕರೂ ಆದ ರೋಹಿತ್‌ ಭಟ್‌ ಹೇಳಿದರು.

-----------------