ಸಾರಾಂಶ
ಕುಷ್ಟಗಿ:
ಕಾರ್ಮಿಕರು ತಮ್ಮ ಮಕ್ಕಳನ್ನು ಜತೆಗೆ ಕೆಲಸಕ್ಕೆ ಕರೆದುಕೊಂಡು ಹೋಗದೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಹೇಳಿದರು.ಪಟ್ಟಣದ ನ್ಯಾಯಾಲಯದ ಸಭಾಭವನದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಬಹುಮುಖ್ಯವಾಗಿದ್ದು ಎಲ್ಲ ಕಾರ್ಮಿಕರು ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದುಕೊಂಡು ಜೀವನಮಟ್ಟ ಸುಧಾರಿಸಿಕೊಳ್ಳಬೇಕು ಎಂದರು.ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ ಸಿಂಗ್ ಮಾತನಾಡಿ, ಯಾವುದೇ ಕಾರಣಕ್ಕೂ ಬೋಗಸ್ ಕಾರ್ಡ್ ಮಾಡಿಸಿಕೊಳ್ಳಬಾರದು. ಅಂತಹ ಕಾರ್ಡ್‌ಗಳು ಕಂಡು ಬಂದಲ್ಲಿ ಇಲಾಖೆಯ ಗಮನಕ್ಕೆ ತರಬೇಕು. ಕಟ್ಟಡ ಕಾರ್ಮಿಕರು ಹಾಗೂ ಇತರೆ ವಲಯದ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಕಡ್ಡಾಯವಾಗಿ ಸದಸ್ಯತ್ವ ಪಡೆಯಬೇಕು. ಅಂದಾಗ ಮಾತ್ರ ಸರ್ಕಾರದಿಂದ ದೊರೆಯುವ ಸವಲತ್ತು ಪಡೆಯಲು ಅನುಕೂಲವಾಗುತ್ತದೆ ಎಂದರು.
ಸದಸ್ಯತ್ವ ಹೊಂದಿದ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ, ಟೂಲ್ ಕಿಟ್ ಸೌಲಭ್ಯ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೇ ವೆಚ್ಚ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಮದುವೆ ಸಹಾಯಧನ ಸೇರಿದಂತೆ ಅನೇಕ ವಿವಿಧ ಸೌಲಭ್ಯಗಳಿದ್ದು ಕಾರ್ಮಿಕ ಇಲಾಖೆಯ ಕಾರ್ಯಾಲಯಕ್ಕೆ ತೆರಳುವ ಮೂಲಕ ಅಥವಾ ಆನ್‌ಲೈನ್ ಸೆಂಟರ್‌ನಲ್ಲಿ ಮಾಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವುದು ಸೂಕ್ತ ಎಂದು ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ದೇಶದಲ್ಲಿ ಪ್ರತಿಯೊಂದು ಕಟ್ಟಡ ನಿರ್ಮಾನವಾಗಬೇಕಾದರೆ ಕಟ್ಟಡ ಕಾರ್ಮಿಕರ ಶ್ರಮ ಬಹಳಷ್ಟು ಮುಖ್ಯವಾಗಿದೆ. ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಶಿಕ್ಷಣವಂತರನ್ನಾಗಿ ಮಾಡಬೇಕು. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸುವ ಮೂಲಕ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.ಬಾಂಡ್ ವಿತರಣೆ:
ಅರ್ಹ ಫಲಾನುಭವಿಗಳಿಗೆ ಸಹಾಯಧನದ ಬಾಂಡ್ ನೀಡಲಾಯಿತು. ಚೆನ್ನಮ್ಮ ಗೋತಗಿ ಹೆರಿಗೆ ಸಹಾಯಧನ ₹ 50000, ಲಕ್ಷ್ಮಣ ತರಲಕಟ್ಟಿ ಮದುವೆ ಸಹಾಯಧನ ₹ 60000, ಯಮನೂರ ದೊಡ್ಡಪ್ಪ ಹೊಸಮನಿ ಮದುವೆ ಸಹಾಯಧನ ₹ 60000, ಈರಮ್ಮ ಚೌಡಪ್ಪ ಬೋವಿ ಅಪಘಾತ ಧನಸಹಾಯ ₹5 ಲಕ್ಷದ ಬಾಂಡ್ ವಿತರಿಸಲಾಯಿತು. ಇದೇ ವೇಳೆ ಆರೋಗ್ಯ ತಪಾಸಣೆ ಕೈಗೊಂಡರು.ಈ ವೇಳೆ ಕಾರ್ಮಿಕ ಇಲಾಖೆ ನಿರೀಕ್ಷಕಿ ಡಿ. ನಿವೇದಿತಾ, ಪುರಸಭೆ ಆರೋಗ್ಯ ನಿರೀಕ್ಷಕ ಪ್ರಾಣೇಶ, ಸಹಾಯಕ ಸರ್ಕಾರಿ ಅಭಿಯೋಜಕ ಎಲ್. ರಾಯನಗೌಡ, ಅಪರ ಸರ್ಕಾರಿ ವಕೀಲರಾದ ಪರಸಪ್ಪ ಗುಜಮಾಗಡಿ ಸೇರಿದಂತೆ ಅನೇಕರು ಇದ್ದರು, ಕಾರ್ಯಕ್ರಮವನ್ನು ವಕೀಲರಾದ ಸಿ.ಎನ್. ಉಪ್ಪಿನ ನಿರೂಪಿಸಿ, ನಿರ್ವಹಿಸಿದರು.