ಗುಣಮಟ್ಟದ ಶಿಕ್ಷಣದಿಂದ ದೇಶದ ಅಭಿವೃದ್ಧಿ

| Published : Sep 17 2024, 12:53 AM IST

ಗುಣಮಟ್ಟದ ಶಿಕ್ಷಣದಿಂದ ದೇಶದ ಅಭಿವೃದ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಬಿಸಿಯೂಟ, ಮೊಟ್ಟೆ, ಹಾಲು, ಜನಗಣತಿ, ಚುನಾವಣಾ ಕಾರ್ಯಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಿ ಬೋಧನೆಗೆ ಮಾತ್ರ ಸೀಮಿತಗೊಳಿಸಬೇಕು. ಅಂದಾಗ ಮಾತ್ರ ಬಡವರಿಗೂ ಗುಣಮಟ್ಟದ ಶಿಕ್ಷಣ ಲಭಿಸಲು ಸಾಧ್ಯ.

ಹುಬ್ಬಳ್ಳಿ:

ಗುಣಮಟ್ಟದ ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸರ್ಕಾರಿ ಶಾಲೆಗಳನ್ನು ಆಧ್ಯತೆಯ ಮೇಲೆ ಅಭಿವೃದ್ಧಿಪಡಿಸುವ ಮೂಲಕ ಶೈಕ್ಷಣಿಕ ವಾತಾವರಣ ನಿರ್ಮಿಸಿ ಬಡವರ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತೆ ಮಾಡಬೇಕು ಎಂದು ಧಾರವಾಡದ ಸಿಸ್ಲೆಪ್‌ ನಿರ್ದೇಶಕ ಡಾ. ಬಿಕೆಎಸ್‌ ವರ್ದನ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಎಚ್‌.ಎಂ. ಕುಂದರಗಿ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯಗಳ ಮಕ್ಕಳೇ ಹೆಚ್ಚಾಗಿ ಓದುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತಾದರೆ ಅಲ್ಲಿನ ಮಕ್ಕಳೆಲ್ಲ ಉತ್ತಮ ಶಿಕ್ಷಣ ಪಡೆದು ಉದ್ಯೋಗವಂತರು, ಉದ್ಯಮಪತಿಗಳೂ ಆಗುತ್ತಾರೆ. ಆಗ ಭಾರತ ಒಂದು ಸಮೃದ್ಧ, ಸದೃಢ ರಾಷ್ಟ್ರವಾಗುತ್ತದೆ ಎಂದರು.

ಹಲವು ಸಂದರ್ಭಗಳಲ್ಲಿ ಸರ್ಕಾರದಿಂದಲೇ ಈ ಸೌಲಭ್ಯಗಳು ಸಿಗುವುದು ಕಷ್ಟ. ಆಗ ಸಮಾಜವೇ ಆಯಾ ಶಾಲೆಗಳಿಗೆ ನೆರವಿಗೆ ಮುಂದಾಗಬೇಕು. ನಾರಾಯಣ ಪಾಂಡುರಂಗಿ ಅವರಂತ ಸೇವಾನಿಷ್ಟರು ತಾವು ಕಲಿತ ಶಾಲೆಗೆ ಬೆನ್ನೆಲುವಾಗಿ ನಿಂತಿದ್ದರಿಂದ ಹಳೇಹುಬ್ಬಳ್ಳಿಯ ನಂ-1 ಶಾಲೆ ಸರ್ವ ರೀತಿಯಿಂದ ಅಭಿವೃದ್ಧಿ ಹೊಂದಿ ಪ್ರಧಾನ ಶಿಕ್ಷಕ ಕುಂದರಗಿ ಅವರಿಗೆ ರಾಜ್ಯಪ್ರಶಸ್ತಿ ಲಭಿಸುವಂತಾಯಿತು. ಇಂಥ ಮುಂದಾಳುಗಳ ಅಗತ್ಯ ಈ ನಾಡಿಗಿದೆ ಎಂದು ಡಾ. ವರ್ದನ್‌ ಹೇಳಿದರು.

ಹಿರಿಯ ಶಿಕ್ಷಕ ಮುಖಂಡ ಷಣ್ಮುಖ ಗುರಿಕಾರ ಅವರು, ಶಿಕ್ಷಕರ ಸಂಘಟನೆ ಮತ್ತು ಹೋರಾಟದಿಂದಾಗಿ ಉತ್ತರ ಕರ್ನಾಟಕದ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿಗಳು ದಕ್ಕುವಂತೆ ಮಾಡಿದ್ದೇವೆ. ಆದರೆ, ರಾಷ್ಟ್ರಪ್ರಶಸ್ತಿಗೆ ಆನ್‌ಲೈನ್‌ ಮೂಲಕ ನಾಮಿನೇಷನ್‌ ವ್ಯವಸ್ಥೆ ಇರುವುದರಿಂದ ಮುಂಬರುವ ದಿನಗಳಲ್ಲಿ ಕರ್ನಾಟಕಕ್ಕೆ ರಾಷ್ಟ್ರಪ್ರಶಸ್ತಿ ದುಸ್ತರವಾಗಲಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಶಿಕ್ಷಕ ಸಂಘಟನೆಗಳ ಗುಂಪುಗಾರಿಕೆಯಿಂದಾಗಿ ಅರ್ಹ ಮತ್ತು ಪ್ರಾಮಾಣಿಕ ಸಾಧಕ ಶಿಕ್ಷಕರು ಪ್ರಶಸ್ತಿಗಳಿಂದ ವಂಚಿತರಾಗುತ್ತಿದ್ದಾರೆ. ಇದು ಸಮಾಜದಲ್ಲಿ ಬೇರೆಯದೇ ಸಂದೇಶ ರವಾನಿಸುತ್ತಿದೆ. ಸಾಧನೆಗೆ ಮುಂದಾಗುವ ಶಿಕ್ಷಕರನ್ನು ಹಿಂದೇಟು ಹಾಕುವಂತೆ ಮಾಡುತ್ತಿದೆ. ಇನ್ನಾದರೂ ಈ ಗುಂಪುಗಾರಿಕೆ ಹೋಗಬೇಕು. ಸರ್ಕಾರ ಬಿಸಿಯೂಟ, ಮೊಟ್ಟೆ, ಹಾಲು, ಜನಗಣತಿ, ಚುನಾವಣಾ ಕಾರ್ಯಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಿ ಬೋಧನೆಗೆ ಮಾತ್ರ ಸೀಮಿತಗೊಳಿಸಬೇಕು. ಅಂದಾಗ ಮಾತ್ರ ಬಡವರಿಗೂ ಗುಣಮಟ್ಟದ ಶಿಕ್ಷಣ ಲಭಿಸಲು ಸಾಧ್ಯ ಎಂದರು.

ಸನ್ಮಾನ ಸ್ವೀಕರಿಸಿದ ಎಚ್‌.ಎಂ. ಕುಂದರಗಿ ಅನುಭವ ಹಂಚಿಕೊಂಡರು. ಜಯಶ್ರೀ ವರೂರ, ವಿ.ಎಫ್‌.ಚುಳಕಿ, ಎಂ.ಎಸ್‌.ಶಿವಳ್ಳಿಮಠ, ನಾರಾಯಣ ಪಾಂಡುರಂಗಿ, ನಾರಾಯಣ ಭಜಂತ್ರಿ, ರಾಜೇಂದ್ರ ಬಿದರಿ ಮುಂತಾದವರು ಮಾತನಾಡಿ ಕುಂದರಗಿ ಅವರ ಸಾಧನೆ ಬಣ್ಣಿಸಿದರು.

ವಿಶ್ರಾಂತ ಬಿಇಒ ಬಸವರಾಜ ಶಿವಪುರ, ಸಹದೇವ ಮಾಳಗಿ, ಪ್ರೇಮನಾಥ ಚಿಕ್ಕತುಂಬಳ, ಸುಭಾಷ್‌ ಕಾನಡೆ, ತೋಟಪ್ಪ ನಿಡಗುಂದಿ, ಯಲ್ಲಪ್ಪ ಬಣವಿ, ಯಲ್ಲಪ್ಪ ಶೆರೆವಾಡ, ಮಂಜುನಾಥ ಜಂಗಳಿ, ಮೋತಿಲಾಲ ರಾಠೋಡ ಮತ್ತಿತರರು ವೇದಿಕೆಯಲ್ಲಿದ್ದರು.

ಬಳಿಕ ಕುಂದರಗಿ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.