ಚಳ್ಳಕೆರೆ ನಗರದ ನಗರದಲ್ಲಿರುವ ಚುಂಚನಗಿರಿ ಎಜುಕೇಷನ್ ಟ್ರಸ್ಟ್‌ನ ಕುವೆಂಪು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನ ದಿನಾಚರಣೆ ಹಾಗೂ ಕುವೆಂಪು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಬಿಇಒ ಕೆ.ಎಸ್.ಸುರೇಶ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಶೈಕ್ಷಣಿಕ ಪ್ರಗತಿಯತ್ತ ದಾಪುಗಾಲಿಡಲು ಎಲ್ಲರ ಪರಿಶ್ರಮ ಅಗತ್ಯ. ವಿದ್ಯೆಯನ್ನು ವಿನಯದಿಂದಲೇ ಸಂಪಾದಿಸಬೇಕು. ವಿನಯದಿಂದ ಮಾತ್ರ ವಿದ್ಯಕ್ಕೆ ವಿಶೇಷ ಮೌಲ್ಯಬರುತ್ತದೆ. ಸಮಾಜದ ಬದಲಾವಣೆಯಲ್ಲಿ ಶಿಕ್ಷಣ ಕ್ಷೇತ್ರದ ಪಾತ್ರವು ಅತ್ಯಂತ ಹಿರಿದು. ಗುಣಾತ್ಮಕ ಶಿಕ್ಷಣದಿಂದ ಮಾತ್ರ ಸಾಧನೆ ನಮ್ಮದಾಗಲಿದೆ, ಈ ನಿಟ್ಟಿನಲ್ಲಿ ಕುವೆಂಪು ಆಂಗ್ಲ ಮಾಧ್ಯಮಿಕ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮೂಲಕ ಜನರ ವಿಶ್ವಾಸಗಳಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದರು.ವಾಲ್ಮೀಕಿ ನಗರದಲ್ಲಿರುವ ಚುಂಚನಗಿರಿ ಎಜುಕೇಷನ್ ಟ್ರಸ್ಟ್‌ನ ಕುವೆಂಪು ಆಂಗ್ಲಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನ ದಿನಾಚರಣೆ ಹಾಗೂ ಕುವೆಂಪು ಸಾಂಸ್ಕೃತಿಕ ಸಂಭ್ರಮ-2025ನ್ನು ಕುವೆಂಪು ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಉತ್ತಮಕೊಡುಗೆ ನೀಡಿದ ಅನೇಕ ಖಾಸಗಿ ಶಾಲೆಗಳಲ್ಲಿ ಕುವೆಂಪು ಶಾಲೆಯ ಪಾತ್ರವೂ ಸಹ ಬಹಳಷ್ಟಿದೆ. ಇಲ್ಲಿನ ಆಡಳಿತ ಮಂಡಳಿ, ಬೋಧಕ ವರ್ಗ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಪೋಷಕರೊಂದಿಗೂ ಸಹ ಸಮಧುರ ಭಾವನೆಯನ್ನು ಹೊಂದಿದೆ ಎಂದರು.ನಿವೃತ್ತ ಪ್ರಾಂಶುಪಾಲ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಶಿಕ್ಷಣ ಕೇಂದ್ರದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ. ಈ ಕ್ಷೇತ್ರಕ್ಕೆ ನಾಡಿನ ಹಿರಿಯರು ಅನೇಕ ಕೊಡುಗೆ ನೀಡಿದ್ದಾರೆ. ಶಿಕ್ಷಣ ಕ್ಷೇತ್ರ ಇಂದು ಎಲ್ಲಾ ರಂಗದಲ್ಲೂ ತನ್ನಸಾಮರ್ಧ್ಯದ ಬಗ್ಗೆ ಮನದಟ್ಟು ಮಾಡಿದೆ. ಪ್ರಾಮಾಣಿಕ ಶಿಕ್ಷಣದಿಂದ ಮಾತ್ರ ಗುರಿಸಾಧನೆ ಸಾಧ್ಯವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಾ.ಸಿ.ಶಿವಲಿಂಗಪ್ಪ, ವಿಶ್ವಮಾನವ ದಿನಾಚರಣೆ ಹಾಗೂ ಕುವೆಂಪು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಸುವುದು ಹೆಮ್ಮೆಯ ವಿಷಯ. ನಾಡಿನ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ನೀಡಿದ ಕೊಡುಗೆ ಅಪಾರವಾಗಿದೆ. ಕುವೆಂಪು ಇಂದು ಎಲ್ಲರ ಮನದಲ್ಲಿ ಆಳಾವಾಗಿ ಬೇರೂರಿದ್ದಾರೆ. ಅವರಲ್ಲಿದ್ದ ಅಪಾರವಾದ ಜ್ಞಾನಶಕ್ತಿ ಕನ್ನಡಸಾಹಿತ್ಯ ಲೋಕಕ್ಕೆ ವರವಾಗಿ ಪರಿಣಮಿಸಿದೆ ಎಂದರು.ಇದೇ ಸಂದರ್ಭದಲ್ಲಿ ಶಾಲೆಯ ವಿವಿಧ ತರಗತಿಯ ಮಕ್ಕಳು ಹಲವಾರು ಮನೋರಂಜನ ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸಿ ಎಲ್ಲರಿಂದ ಪ್ರಶಂಸೆಗೆ ಒಳಗಾದರು.
ಆಡಳಿತ ಮಂಡಳಿ ಅಧ್ಯಕ್ಷ ಲತಾ ರವೀಂದ್ರಪ್ಪ, ನಿವೃತ್ತ ಮುಖ್ಯ ಎಂಜಿನಿಯರ್ ಎಂ.ರವೀಂದ್ರಪ್ಪ, ಹಿರಿಯ ವಕೀಲ ಪಿ.ಶಿವಶಂಕರ ಮೂರ್ತಿ, ನಗರಸಭೆ ಮಾಜಿ ಸದಸ್ಯೆ ಸುಮ ಭರಮಯ್ಯ, ಪಾಲಮ್ಮತಿಪ್ಪೇಸ್ವಾಮಿ, ಟ್ರಸ್ಟ್ ಕಾರ್ಯದರ್ಶಿ ಎನ್.ಎಂ.ಕೃಷ್ಣಮೂರ್ತಿ, ಎಲ್‌ವೆಂಕಟಪ್ಪ, ಕೆ.ರಂಜಿತ, ಜಿ.ಟಿ.ನಿರಂಜನ್‌ಮೂರ್ತಿ, ಎಚ್.ಆರ್.ತುಳಸಿಕುಮಾರ್, ಆಡಳಿತಾಧಿಕಾರಿ ಎನ್.ತಿಪ್ಪೇಸ್ವಾಮಿ, ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ, ಅನಿತಾ, ಶಿಕ್ಷಕರಾದ ವೆಂಕಟೇಶ್, ಚಂದ್ರಶೇಖರ್, ಓಂಕಾರಮ್ಮ, ಸಿಂಚನ ಮುಂತಾದವರು ಉಪಸ್ಥಿತರಿದ್ದರು.