ಸಾರಾಂಶ
ಕಾರವಾರ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲವಾದ ಅವಕಾಶಗಳಿದ್ದು, ಪಶ್ಚಿಮ ಘಟ್ಟ, ಅರಣ್ಯ ಹಾಗೂ ನದಿ ಮತ್ತು ಸಮುದ್ರಗಳ ಸಮ್ಮಿಲನವಾಗಿರುವ ಜಿಲ್ಲೆಯಲ್ಲಿ ಸಿಆರ್‌ಜೆಡ್ ಹಾಗೂ ಅರಣ್ಯ ಇಲಾಖೆಯ ಕಾನೂನುಗಳ ಉಲ್ಲಂಘನೆ ಆಗದಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.
ಸೋಮವಾರ ಕಾರವಾರದ ಅಜ್ವಿ ಓಷನ್ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಬೀಚ್ ಟೂರಿಸಂ, ಟೆಂಪಲ್ ಟೂರಿಸಂ, ನದಿಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಅವಕಾಶಗಳಿವೆ. ಈ ಬಗ್ಗೆ ಈಗಾಗಲೇ ಇದಕ್ಕಾಗಿ ಎಲ್ಲ ಇಲಾಖೆಗಳ ನೆರವು ಪಡೆಯಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರದ ವತಿಯಿಂದ ಎಲ್ಲ ಜಿಲ್ಲೆಗಳಲ್ಲಿ ಪಂಚತಾರಾ ಹೋಟೆಲ್‌ಗಳನ್ನು ಸರ್ಕಾರದ ವತಿಯಿಂದ ಅಥವಾ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಚಿಂತನೆ ನಡೆದಿದ್ದು, ಜಿಲ್ಲೆಗೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಮಂಗಳೂರಿನಲ್ಲಿ ₹1500 ಕೋಟಿ ವೆಚ್ಚದಲ್ಲಿ ಪೋರ್ಟ್‌ನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಂಕೋಲಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವು ಮತ್ತಷ್ಟು ಬೆಳವಣಿಗೆಯಾಗಲಿದ್ದು, ಮಂಗಳೂರಿನಿಂದ ಕಾರವಾರದವರೆಗಿನ 13 ಐಲ್ಯಾಂಡ್‌ಗಳನ್ನು ಸರ್ಕಾರದಿಂದ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದರು.ಶಾಸಕ ಸತೀಶ್ ಕೆ. ಸೈಲ್ ಮಾತನಾಡಿ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಅನೇಕ ತೊಂದರೆಗಳಿವೆ. ತಿಳಮಾತಿ ಬೀಚ್ ಅಭಿವೃದ್ಧಿಯಾಗಿಲ್ಲ. ಕಾಳಿ ನದಿ ಸಂಗಮದಲ್ಲಿ ಅಭಿವೃದ್ಧಿಗೆ ಸಿಆರ್‌ಜಡ್ ತೊಡಕಾಗಿದೆ. ಜಿಲ್ಲೆಯಲ್ಲಿ ಹಲವಾರು ನದಿಗಳ ಸಂಗಮ ಪ್ರದೇಶ ಇದ್ದು, ಅವುಗಳ ಅಭಿವೃದ್ಧಿಯಾಗಬೇಕಿದೆ. ಕರಾವಳಿಯ ಐಲ್ಯಾಂಡ್‌ಗಳು ಅಭಿವೃದ್ಧಿಯಾದಾಗ ಮಾತ್ರ ಜಿಲ್ಲೆಯ ಪ್ರವಾಸೋದ್ಯಮ ಬೆಳೆಯಲು ಸಾಧ್ಯ ಎಂದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಯಂತ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸ್ಥಳೀಯರಿಗೆ ಉದ್ಯೋಗವಕಾಶಗಳಿವೆ. ಜಿಲ್ಲೆಯಲ್ಲಿ ಬೀಚ್ ಟೂರಿಸಂ, ಟೆಂಪಲ್ ಟೂರಿಸಂಗೆ ವಿಪುಲ ಅವಕಾಶಗಳಿವೆ ಎಂದರು.ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಜಿಲ್ಲೆಯ ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಡೆದ ಚಿತ್ರಕಲಾ ಶಿಬಿರದಲ್ಲಿ ರಚನೆಯಾದ ಚಿತ್ರಗಳನ್ನು ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಜಿಪಂ ಸಿಇಒ ಈಶ್ವರ ಕುಮಾರ್ ಕಾಂದೂ, ಚಿತ್ರಕಲಾ ಕಲಾವಿದ ರಾಘವೇಂದ್ರ ಆಮಿನ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಇದ್ದರು.
ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ನೀಡುವ ನೂತನ ಕಾಫಿ ಟೇಬಲ್ ಬುಕ್‌ನ ಕವರ್ ಪೇಜ್ ಬಿಡುಗಡೆ ಮಾಡಲಾಯಿತು. ಚಿತ್ರಕಲಾ ಸ್ಪರ್ಧೆ, ಮರಳು ಶಿಲ್ಪ ರಚನೆಯಲ್ಲಿ ವಿಜೇತರಾದ ಕಲಾವಿದರಿಗೆ ಬಹುಮಾನ ವಿತರಿಸಲಾಯಿತು.
)
;Resize=(128,128))
;Resize=(128,128))
;Resize=(128,128))
;Resize=(128,128))