ಬುಡಕಟ್ಟು ಮಹಿಳೆಯರ ಅಭಿವೃದ್ಧಿ ನಿರೀಕ್ಷಿತ ಮಟ್ಟ ತಲುಪಿಲ್ಲ: ಎಂಎಲ್‌ಸಿ ಹೇಮಲತಾ

| Published : Feb 09 2024, 01:45 AM IST

ಬುಡಕಟ್ಟು ಮಹಿಳೆಯರ ಅಭಿವೃದ್ಧಿ ನಿರೀಕ್ಷಿತ ಮಟ್ಟ ತಲುಪಿಲ್ಲ: ಎಂಎಲ್‌ಸಿ ಹೇಮಲತಾ
Share this Article
  • FB
  • TW
  • Linkdin
  • Email

ಸಾರಾಂಶ

ಬುಡಕಟ್ಟು ಸಮುದಾಯದ ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು. ಆರೋಗ್ಯ ಮತ್ತು ಶಿಕ್ಷಣದಲ್ಲಿ ಬುಡಕಟ್ಟು ಮಹಿಳೆ ಮುಖ್ಯವಾಹಿನಿಗೆ ಇನ್ನೂ ಪ್ರವೇಶಿಸಿಲ್ಲ. ಬುಡಕಟ್ಟು ಮಹಿಳೆ ಮುಖ್ಯವಾಹಿನಿಗೆ ಸೇರಲಿ ಎಂದೆ ಸರ್ಕಾರಗಳಿಂದ ಸಾಕಷ್ಟು ಅನುದಾನ ನೀಡಿ ಹತ್ತಾರು ಯೋಜನೆಗಳ ಜಾರಿ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಹರಿಹರ

ಸರ್ಕಾರಗಳು ಗಣನೀಯ ಮೊತ್ತದ ಅನುದಾನ ಬಿಡುಗಡೆ ಮಾಡುತ್ತಿದ್ದರೂ ಬುಡಕಟ್ಟು ಮಹಿಳೆಯರ ಅಭಿವೃದ್ಧಿ ನಿರೀಕ್ಷಿತ ಮಟ್ಟಕ್ಕೆ ಬಾರದಿರುವುದಕ್ಕೆ ಇಚ್ಚಾಶಕ್ತಿ ಕೊರತೆಯೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹೇಳಿದರು.

ತಾಲೂಕಿನ ರಾಜನಹಳ್ಳಿ ಗ್ರಾಮದ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಗುರುವಾರ ವಾಲ್ಮೀಕಿ ಜಾತ್ರೆ-೨೦೨೪ನಲ್ಲಿ ‘ಬುಡಕಟ್ಟು ಮಹಿಳೆ-ಸಬಲೀಕರಣ’ ವಿಷಯ ಕುರಿತ ಮಹಿಳಾ ಗೋಷ್ಠಿ ಉದ್ಘಾಟಿಸಿ ಮಾತನಾಡಿ ಈ ಸಮುದಾಯದ ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು. ಆರೋಗ್ಯ ಮತ್ತು ಶಿಕ್ಷಣದಲ್ಲಿ ಬುಡಕಟ್ಟು ಮಹಿಳೆ ಮುಖ್ಯವಾಹಿನಿಗೆ ಇನ್ನೂ ಪ್ರವೇಶಿಸಿಲ್ಲ. ಬುಡಕಟ್ಟು ಮಹಿಳೆ ಮುಖ್ಯವಾಹಿನಿಗೆ ಸೇರಲಿ ಎಂದೆ ಸರ್ಕಾರಗಳಿಂದ ಸಾಕಷ್ಟು ಅನುದಾನ ನೀಡಿ ಹತ್ತಾರು ಯೋಜನೆಗಳ ಜಾರಿ ಮಾಡಲಾಗಿದೆ ಎಂದರು.

ಗುರುಪೀಠದ ಧರ್ಮದರ್ಶಿ ತುಮಕೂರಿನ ಶಾಂತಲಾ ರಾಜಣ್ಣ ಮಾತನಾಡಿ, ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಾಯಕ ಸಮಾಜದವರ ಸ್ಥಿತಿ, ಗತಿ ಉತ್ತಮವಾಗಿದೆ. ಅನೇಕ ಕೋಟೆ, ಕೊತ್ತಲೆಗಳ ನಾಯಕ ಸಮುದಾಯದವರು ಆಳಿದ್ದರಿಂದ ಇಲ್ಲಿ ಸಮುದಾಯದವರು ಉತ್ತಮ ಸ್ಥಿತಿಗೆ ತಲುಪಲು ಸಾಧ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದೇವದುರ್ಗ ಕ್ಷೇತ್ರ ಶಾಸಕಿ ಕರೆಮ್ಮ ಜಿ.ನಾಯಕ ಮಾತನಡಿ, ದೇಶದ ೧೪ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮುರವರೂ ಬುಡಕಟ್ಟು ಮಹಿಳೆ ಎಂಬುದು ಹೆಮ್ಮೆಯ ವಿಷಯ. ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಏಕೈಕ ಶಾಸಕಿಯಾಗಿ ನಾನು ಆಯ್ಕೆಯಾಗಿದ್ದೇನೆ ಎಂದರು.

ಉಪನ್ಯಾಸ ನೀಡಿದ ಹೈಕೋರ್ಟ್ ವಕೀಲೆ ಅಶ್ವಿನಿ ಮಾತನಾಡಿ, ಸಾಮಾಜಿಕ, ರಾಜಕೀಯ, ನ್ಯಾಯಾಂಗ ಸೇರಿ ವಿವಿಧ ಕ್ಷೇತ್ರಗಳು ಈಗಲೂ ಪುರುಷ ಪ್ರಧಾನವಾಗಿವೆ. ಹೈಕೋರ್ಟ್‌ನ ಕಲಾಪಗಳಲ್ಲಿ ಭಾಗವಹಿಸುವ ಮಹಿಳಾ ವಕೀಲರು ಪುರುಷ ವಕೀಲರ ಗುಂಪು ತಳ್ಳಿ ತಮ್ಮ ಅಹವಾಲು ಹೇಳಲು ಸಾಹಸ ಪಡಬೇಕಿದೆ. ಹೀಗೆ ತಳ್ಳುವ ಧೋರಣೆ ಇರುವ ಮಹಿಳೆಯರು ಮುಂದೆ ಬರಲು ಸಾಧ್ಯವೆಂದು ಹೇಳಿದರು.

ಶ್ರೀ ಮಠದ ಪೀಠಾಧಿಪತಿ ಪ್ರಸನ್ನಾನಂದ ಶ್ರೀ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಎಂ.ಡಿ. ಕವಿತಾ ವಾರಂಗಲ್, ಅಬಕಾರಿ ಉಪ ಆಯುಕ್ತೆ ಗದಗಿನ ಲಕ್ಷ್ಮೀ ಮಾರುತಿ ತೋಟಗಂಟಿ ಹಾಗೂ ವಿವಿದೆಡೆಯಿಂದ ಆಗಮಿಸಿದ್ದ ಮಹಿಳಾ ಅತಿಥಿಗಳು ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿನಿಯರು, ಕ್ರೀಡಾಪಟುಗಳ ಸತ್ಕರಿಸಲಾಯಿತು. ಹಾಸನದ ಮೌಲ್ಯ ಲಂಕೇಶ್, ಬಳ್ಳಾರಿಯ ಆವಂತಿಕ, ದಾವಣಗೆರೆಯ ಸ್ಪೂರ್ತಿ ನೃತ್ಯ ಪ್ರದರ್ಶನ ನೀಡಿದರು. ಶುಭ ವೇಣುಗೋಪಾಲ್ ನಿರೂಪಿಸಿದರು. ವಿಜಯಶ್ರೀ ಮಹೇಂದ್ರ ಕುಮಾರ್ ಸ್ವಾಗತಿಸಿದರು.