ಹಂಪಿ ಮಾದರಿಯಲ್ಲಿ ವೆಂಕಟಾಪತಿ ಬಾವಿ ಅಭಿವೃದ್ಧಿ

| Published : Feb 13 2025, 12:50 AM IST

ಸಾರಾಂಶ

ಇಲ್ಲಿನ ಇತಿಹಾಸ ಪ್ರಸಿದ್ಧ ವೆಂಕಟಾಪತಿ ಬಾವಿಯನ್ನು ಹಂಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪ್ರವಾಸ್ಯೋದ್ಯಮ ಇಲಾಖೆ ಹೆಜ್ಜೆ ಇಟ್ಟಿದೆ.

ಪ್ರವಾಸೋದ್ಯಮ, ಪುರಾತತ್ವ, ಸ್ಥಳೀಯ ಆಡಳಿತ ಮಂಡಳಿ ಜಂಟಿಯಾಗಿ ಹೊಸ ಯೋಜನೆಕನ್ನಡಪ್ರಭ ವಾರ್ತೆ ಕನಕಗಿರಿ

ಇಲ್ಲಿನ ಇತಿಹಾಸ ಪ್ರಸಿದ್ಧ ವೆಂಕಟಾಪತಿ ಬಾವಿಯನ್ನು ಹಂಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪ್ರವಾಸ್ಯೋದ್ಯಮ ಇಲಾಖೆ ಹೆಜ್ಜೆ ಇಟ್ಟಿದೆ. ಈ ಯೋಜನೆಗೆ ₹1 ಕೋಟಿ ಅನುದಾನ ಮಂಜೂರಾಗಿದ್ದು, ಇನ್ನೇನು ಕಾಮಗಾರಿ ಆರಂಭವಾಗಲಿದೆ.

೨೦೧೮ರ ಮೈಸೂರು ದಸರಾದಲ್ಲಿ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಹಾಗೂ ೨೦೨೩ರಲ್ಲಿಯೂ ಮೈಸೂರು ದಸರಾದಲ್ಲಿ ವೆಂಕಟಾಪತಿ ಬಾವಿಯ ಐತಿಹ್ಯವನ್ನು ಪರಿಚಯಿಸುವ ಕಾರ್ಯ ರಾಜ್ಯ ಸರ್ಕಾರ ಮಾಡಿತ್ತು. ಕನಕಗಿರಿ ಉತ್ಸವದ ಆಚರಣೆ ಸಂದರ್ಭದಲ್ಲಿಯೂ ಈ ಬಾವಿಯ ಕಲಾಕೃತಿ ರಚಿಸಲಾಗಿತ್ತು.

₹1 ಕೋಟಿ ಮಂಜೂರು:

ಬಾವಿಯ ಸಂರಕ್ಷಣೆ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಸುತ್ತಲೂ ಕಬ್ಬಿಣದ ಗ್ರಿಲ್‌ಗಳ ಹೊಂದಿದ ಕಾಂಪೌಂಡ್ ನಿರ್ಮಾಣ, ಬಾವಿಯ ಅಂದ ಹೆಚ್ಚಿಸಲು ವಾಟರ್ ವಾಶ್ ಮಾಡುವುದು, ಪ್ರವೇಶ ದ್ವಾರದ ಅಕ್ಕಪಕ್ಕದಲ್ಲಿ ತರಹೇವಾರಿ ಹೂವಿನ ಸಸಿಗಳನ್ನು ನೆಡಲು ಯೋಜಿಸಲಾಗಿದೆ. ಪ್ರವಾಸಿಗರಿಗೆ ಕುಳಿತುಕೊಳ್ಳಲು ಅಲ್ಲಲ್ಲಿ ಬೆಂಚ್, ಕುಡಿಯುವ ನೀರು, ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳ ನಿರ್ಮಿಸಲು ಅಧಿಕಾರಿಗಳು ಜಂಟಿ ಸಭೆ ನಡೆಸಿ ಸ್ಥಳ ಪರಿಶೀಲನೆ ನಡೆಸಿದ್ದು, ₹೧ ಕೋಟಿ ವೆಚ್ಚದಲ್ಲಿ ವೆಂಕಟಪತಿ ಬಾವಿಗೆ ಹಂಪಿ ಮಾದರಿ ಅಭಿವೃದ್ಧಿ ತೋರಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

15ನೇ ಶತಮಾನದ ಬಾವಿ:

15ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಈ ಕಲಾತ್ಮಕ ಬಾವಿ ಬ್ರಹ್ಮ, ವಿಷ್ಣು, ಮಹೇಶ್ವರ, ೧೧೧ ಶಿಲಾ ಕಂಬಗಳು, ಶೇಷ, ೪ ಪ್ರವೇಶ ದ್ವಾರಗಳು, ನೃತ್ಯಗಾರ್ತಿಯರು, ಶಿಲಾ ಚಿತ್ರಗಳಿವೆ. ೫೦ ಅಡಿ ಆಳ, ೧೫೦ ಅಡಿ ಅಗಲ, ೨೦೦ ಅಡಿ ಉದ್ದ ವಿಸ್ತಿರ್ಣವನ್ನು ಹೊಂದಿದ್ದು, ಪ್ರವಾಸಿಗರ ಪ್ರಮುಖ ಕೇಂದ್ರ ಸ್ಥಾನವಾಗಿದೆ.

ಇಲ್ಲಿ ಜಗನ್ನಾಥದಾಸರು, ವಿಜಯದಾಸರು, ಎದುರಾಳಿ, ಐಪಿಎಲ್‌ ಸೇರಿದಂತೆ ಕನ್ನಡ ಧಾರವಾಹಿಗಳು, ನೂತನ ವಧು-ವರರ ವೆಡ್ಡಿಂಗ್ ಚಿತ್ರೀಕರಣಕ್ಕೆ ವೆಂಕಟಪತಿ ಬಾವಿ ಕಲ್ಯಾಣ ಕರ್ನಾಟದಲ್ಲಿಯೇ ಫೇಮಸ್ ಆಗಿದೆ. ನಾಡಿನ ಸಾಂಸ್ಕೃತಿಕ ಹಾಗೂ ಪರಂಪರೆಯ ಪ್ರತೀಕವಾಗಿರುವ ಈ ಬಾವಿಯನ್ನು ಹಂಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ, ಪುರಾತತ್ವ ಹಾಗೂ ಸ್ಥಳೀಯ ಆಡಳಿತ ಮಂಡಳಿ ಜಂಟಿಯಾಗಿ ಹೊಸ ಯೋಜನೆ ರೂಪಿಸಿದೆ.

ಕನಕಗಿರಿ ವೆಂಕಟಾಪತಿ ಬಾವಿಯನ್ನು ಹಂಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ₹೧ ಕೋಟಿ ಮಂಜೂರಾಗಿದೆ. ಈಗಾಗಲೇ ಪುರಾತತ್ವ ಹಾಗೂ ಪರಂಪರೆ ಇಲಾಖೆ, ಸ್ಥಳೀಯ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಲಾಗಿದೆ. ಹಂತ-ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳುವ ಯೋಚನೆ ಇದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ತಿಳಿಸಿದ್ದಾರೆ.