ಗುಣಮಟ್ಟದ ಕಾಮಗಾರಿಗಳು ನಡೆದರೆ ಮಾತ್ರ ಅಭಿವೃದ್ಧಿ: ಎಚ್.ಟಿ.ಮಂಜು

| Published : Jun 27 2025, 12:48 AM IST

ಸಾರಾಂಶ

ಸಾರಂಗಿ ಜನ ನನಗೆ ರಾಜಕೀಯ ಶಕ್ತಿ ನೀಡಿದ್ದಾರೆ. ಇವರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗುಣಮಟ್ಟದ ಕಾಮಗಾರಿಗಳು ನಡೆದರೆ ಮಾತ್ರ ಸರ್ಕಾರದ ಹಣ ಸದ್ಬಳಕೆಯಾಗಲು ಸಾಧ್ಯ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ತಾಲೂಕಿನ ಸಾರಂಗಿ ಗ್ರಾಮದಲ್ಲಿ 20 ಲಕ್ಷ ರು. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಪಂ ಸದಸ್ಯರು ಮತ್ತು ಆಯಾ ಭಾಗದ ಜನ ತಮ್ಮ ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಮೇಲೆ ನಿಗಾ ವಹಿಸಿ ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ 10 ಕೋಟಿ ರು. ಅನುದಾನ ನೀಡಿದೆ. ಅದರಲ್ಲಿ ಸಾರಂಗಿಗೆ 20 ಲಕ್ಷ ರು. ನೀಡಿದ್ದೇನೆ. ಲ್ಯಾಂಡ್ ಆರ್ಮಿ ವತಿಯಿಂದ ಕಾಮಗಾರಿ ನಡೆಯಲಿದೆ. ಅನುದಾನ ನೀಡಿದ ಮಾತ್ರಕ್ಕೆ ಅಭಿವೃದ್ಧಿಯಾಗಲ್ಲ. ನಾನು ನೀಡಿದ ಅನುದಾನ ಸದ್ಬಳಕೆಯಾಗಿ ಗುಣಮಟ್ಟದ ಕಾಮಗಾರಿ ನಡೆದರೆ ಮಾತ್ರ ನೈಜ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ನನ್ನ ಕ್ಷೇತ್ರಕ್ಕೂ ಒಂದು ಪಶು ಆಸ್ಪತ್ರೆ ದೊರಕಿದೆ. ಇದನ್ನು ನಿಮ್ಮ ಗ್ರಾಮದಲ್ಲಿ ನಿರ್ಮಿಸಲು ಸೂಚಿಸಿದ್ದೇನೆ. ಸೂಕ್ತ ಜಾಗ ನೀಡಿದರೆ ಮುಂದಿನ ದಿನಗಳಲ್ಲಿ ಪಶು ಚಿಕಿತ್ಸಾ ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗಲಿದೆ. ಹಾಳಾಗಿದ್ದ ಸಾರಂಗಿ ಬ್ರಿಡ್ಜ್ ಸರಿಮಾಡಿಸಿದ್ದೇನೆ ಎಂದರು.

ಸಾರಂಗಿ ಜನ ನನಗೆ ರಾಜಕೀಯ ಶಕ್ತಿ ನೀಡಿದ್ದಾರೆ. ಇವರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ವಿಪಕ್ಷ ಶಾಸಕನಾಗಿದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಬದ್ದನಾಗಿದ್ದೇನೆಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ರಾಜು, ಸದಸ್ಯರಾದ ರಮೇಶ್, ನಂಜಪ್ಪ, ಮಂಜುನಾಥ್, ಮಹದೇವಮ್ಮ, ಸುಲೋಚನಾ, ಕಿಟ್ಟಿ, ಗೌಡ ಆನಂದ್, ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಾಗೇಶ್, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಟಿಎಪಿಸಿಎಂಎಸ್ ನಿರ್ದೇಶಕ ಕೊರಟಗೆರೆ ದಿನೇಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ ಸೇರಿದಂತೆ ಹಲವರಿದ್ದರು.