ರಾಮನಗರ: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಕನಕಪುರ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆಯೂ ನಿರೀಕ್ಷೆಗಳು ಮೂಡಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪ್ರತ್ಯೇಕಗೊಂಡು ಅಸ್ತಿತ್ವಕ್ಕೆ ಬಂದ ಬೆಂಗಳೂರು ದಕ್ಷಿಣ(ರಾಮನಗರ) ಜಿಲ್ಲೆಯಾಗಿ 19 ವರ್ಷ ಪೂರ್ಣಗೊಳ್ಳುತ್ತಿದೆ. ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳು ಕೈಗೆ ಸಿಗುವ ಕಾರಣ ಜನರು ರಾಜಧಾನಿಗೆ ಅಲೆದಾಡುವುದು ತಪ್ಪಿತೇ ವಿನಾಃ ಜಿಲ್ಲೆಯು ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿಲ್ಲ ಎಂಬ ಕೊರಗು ಪ್ರತಿಯೊಬ್ಬರಿಗೂ ಕಾಡುತ್ತಿದೆ.ಜಿಲ್ಲಾ ಹಾಗೂ ತಾಲೂಕು ಕೇಂದ್ರ ಸ್ಥಾನಗಳಲ್ಲಿ ಅಗತ್ಯ ಸರ್ಕಾರಿ ಕಟ್ಟಡಗಳು ತಲೆ ಎತ್ತಿಲ್ಲ. ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳು ಇಂದಿಗೂ ಮೂಲಸೌಲಭ್ಯಗಳಿಂದ ವಂಚಿತವಾಗಿವೆ. ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ. ಬಿಡದಿ ಮತ್ತು ಹಾರೋಹಳ್ಳಿ ಹೊರತು ಮತ್ತೊಂದು ಕೈಗಾರಿಕಾ ಪ್ರದೇಶ ಸ್ಥಾಪನೆ ಆಗಿಲ್ಲ.
ಜಿಲ್ಲೆಯ ಪ್ರವಾಸಿ ಸ್ಥಳಗಳ ಅಭಿವೃದ್ಧಿ, ಐದು ತಾಲೂಕುಗಳಿಗೆ ಅನ್ವಯವಾಗುವಂತೆ ವೈಜ್ಞಾನಿಕ ಕಸ ವಿಲೇವಾರಿ ವ್ಯವಸ್ಥೆ, ಸತ್ತೇಗಾಲ ನೀರಾವರಿ ಯೋಜನೆ ಪೂರ್ಣಗೊಳಿಸುವ ಮೂಲಕ ಕೃಷಿಗಾಗಿ ಶಾಶ್ವತ ನೀರಾವರಿ, ಶುದ್ಧ ಕುಡಿಯುವ ನೀರು ಪೂರೈಸುವುದು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿ ಆಗಬೇಕಾಗಿದೆ.ರೇಷ್ಮೆ, ಹೈನುಗಾರಿಕೆ ಹಾಗೂ ಮಾವು ಪ್ರಮುಖ ಕಸುಬುಗಳಾಗಿದ್ದು, ಇದನ್ನು ಅವಲಂಬಿಸಿರುವ ರೈತರ ಪ್ರಗತಿಗಾಗಿ ಪೂರಕವಾದ ಯೋಜನೆ ರೂಪಿಸಬೇಕಿದೆ. ರಾಮನಗರ ಮತ್ತು ಚನ್ನಪಟ್ಟಣವನ್ನು ಅವಳಿ ನಗರಗಳಂತೆ ಅಭಿವೃದ್ಧಿ ಪಡಿಸುವುದು. ಮೇಕೆದಾಟು ಯೋಜನೆ ಅಣೆಕಟ್ಟೆ ನಿರ್ಮಾಣ, ಬಿಡದಿವರೆಗೆ ಮೆಟ್ರೋ ವಿಸ್ತರಣೆ, ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ, ರೇಷ್ಮೆಯಲ್ಲಿ ಉಪಉತ್ಪನ್ನಗಳು ತಯಾರಿಸುವ ಕಾರ್ಖಾನೆ ಸ್ಥಾಪನೆ, ಬೃಹತ್ ಕೈಗಾರಿಕಾ ವಲಯ ಸ್ಥಾಪಿಸಿ ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಅವಶ್ಯಕತೆ ಇದೆ. ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಸೇರಿದಂತೆ ವನ್ಯಜೀವಿಗಳ ಹಾವಳಿ ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಮೂಲಕ ಹೊಸ ರೂಪ ನೀಡಿದರು. ಈಗ ಮುಖ್ಯಮಂತ್ರಿಯಾದ ಬಳಿಕ ಬೆಂಗಳೂರು ದಕ್ಷಿಣ ಜಿಲ್ಲೆಗೆ ಅವಶ್ಯಕತೆಯಿರುವ ಯೋಜನೆಗಳನ್ನು ಸಾಕಾರಗೊಳಿಸಿ ಏನೇನು ಕೊಡುಗೆ ನೀಡಲಿದ್ದಾರೆ ಎಂಬ ಬಗ್ಗೆ ಜನರಲ್ಲಿ ಕುತೂಹಲದ ಚರ್ಚೆಗಳು ನಡೆಯುತ್ತಿದ್ದು, ನಿರೀಕ್ಷೆಗಳು ಬೆಟ್ಟದಂತೆ ಬೆಳೆದು ನಿಂತಿವೆ. ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರ ಶಾಸಕ ಸಿ.ಪಿ.ಯೋಗೇಶ್ವರ್, ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಕೈಜೋಡಿಸಿದಾಗ ಮಾತ್ರ ನಿರೀಕ್ಷೆಗಳೆಲ್ಲವು ಸಾಕಾರಗೊಳ್ಳಲು ಸಾಧ್ಯ.
ಬಾಕ್ಸ್.............
ರಾಮನಗರ ಕ್ಷೇತ್ರ:
* ರಾಮನಗರದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಅಗತ್ಯ ಅನುದಾನ ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ವೇಗ ನೀಡಬೇಕಿದೆ.* ನಗರ ಮತ್ತು ಹಳ್ಳಿಗಳಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಕಲ್ಪಿಸುವ ಯೋಜನೆ ಪ್ರಗತಿಯಲ್ಲಿದ್ದು, ತ್ವರಿತಗತಿಯಲ್ಲಿ ಮುಗಿಸಬೇಕು. ಆನಂತರ ರಸ್ತೆ, ಒಳಚರಂಡಿ ಹಾಗೂ ಯುಜಿಡಿ ಕಾಮಗಾರಿ ಪೂರ್ಣಗೊಳಿಸಬೇಕಿದೆ.
* ರಾಮನಗರ ನೂತನ ಜಿಲ್ಲಾಸ್ಪತ್ರೆಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ ಒದಗಿಸುವುದು, ಹಳೆಯ ಜಿಲ್ಲಾಸ್ಪತ್ರೆಯನ್ನು ತಾಯಿ ಮಗುವಿನ ಆಸ್ಪತ್ರೆಯನ್ನಾಗಿ ಮಾರ್ಪಡಿಸುವುದು.* ರಾಮನಗರದಲ್ಲಿ ಸ್ಲಂ ಕ್ಲಿಯರೆನ್ಸ್ ಬೋರ್ಡಿನಿಂದ ದಶಕದ ಹಿಂದೆ ಮನೆ ನಿರ್ಮಿಸಿಕೊಡುವ ವಾಗ್ದಾನವನ್ನು ಪೂರೈಸುವುದು. ಬಡವರಿಗೆ ಸೂರು ಮತ್ತು ನಿವೇಶನ ಒದಗಿಸುವುದು.
*ಆರ್ಥಿಕತೆಯ ದೃಷಿಯಿಂದ ಇಲ್ಲಿನ ರೇಷ್ಮೆ ಗೂಡು ಮಾರುಕಟ್ಟೆಯನ್ನು ಸುಸಜ್ಜಿತ ಮಾರುಕಟ್ಟೆ (ಕೆ.ಆರ್.ಮಾರ್ಕಟ್ ರೀತಿಯಲ್ಲಿ) ನಿರ್ಮಾಣ ಮಾಡಿ ಉಳಿಸಿಕೊಳ್ಳುವುದು.* ರಾಮನಗರದಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುವ ಪ್ರಯಾಣಿಕರಿಗಾಗಿ ಸುಸಜ್ಜಿತ ಬಸ್ ನಿಲ್ದಾಣ ಸ್ಥಾಪನೆ. ಅರ್ಕಾವತಿ ರಿವರ್ ಫ್ರಂಟ್ ಡೆವಲಪ್ ಮೆಂಟ್, ಸುಸಜ್ಜಿತವಾದ ಕ್ರೀಡಾಂಗಣ, ಪಾರ್ಕ್ ನಿರ್ಮಾಣ.
ಬಾಕ್ಸ್.........ಕನಕಪುರ ಕ್ಷೇತ್ರ :
* ಕಾವೇರಿ ನದಿಗೆ ಮೇಕೆದಾಟು ಬಳಿ ಅಡ್ಡಲಾಗಿ ಸಮತೋಲನ ಜಲಾಶಯ ನಿರ್ಮಾಣ ಮಾಡುವುದು. ಏತ ನೀರಾವರಿ ಮೂಲಕ ತಾಲೂಕಿನಲ್ಲಿನ ಕೆರೆಗಳನ್ನು ತುಂಬಿಸುವುದು ಮತ್ತು ಪ್ರಗತಿಯಲ್ಲಿರುವ ಏತ ನೀರಾವರಿಗಳನ್ನು ಪೂರ್ಣಗೊಳಿಸುವುದು.* ಹಾರೋಹಳ್ಳಿ ಕೈಗಾರಿಕೆ ಪ್ರದೇಶ ಸಾಕಷ್ಟು ಅಭಿವೃದ್ದಿ ಕಾಣುತ್ತಿದ್ದು ಸಾರಿಗೆ ಒತ್ತಡ ಕಡಿಮೆ ಮಾಡಲು ಆರ್ಟ್ ಆಫ್ ಲೀವಿಂಗ್ ಆಶ್ರಮದಿಂದ 20 ಕಿ.ಮೀ. ಮೆಟ್ರೊ ರೈಲು ವಿಸ್ತರಿಸುವುದು.
* ಕನಕಪುರ ತಾಲೂಕಿಗೆ ಇಲ್ಲಿವರೆಗೆ ರೈಲ್ವೆ ಸಂಪರ್ಕ ಸಾಧ್ಯವಾಗಿಲ್ಲ. ಬೆಂಗಳೂರಿನ ಹೆಜ್ಜಾಲದಿಂದ ಕನಕಪುರ - ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ಕೊಯಮತ್ತೂರಿಗೆ ರೈಲ್ವೆ ಸಂಪರ್ಕ ಕಲ್ಪಿಸುವುದು.*ಪ್ರವಾಸೋಮದ್ಯಮಕ್ಕೆ ತಾಲೂಕಿನಲ್ಲಿ ಸಾಕಷ್ಟು ಅವಕಾಶವಿದ್ದು ಸಂಗಮ -ಮೇಕೆದಾಟು ಅಭಿವೃದ್ದಿ, ಚುಂಚಿ ಫಾಲ್ಸ್ , ಮಾವತ್ತೂರು ಕೆರೆ ಅಭಿವೃದ್ಧಿ, ಟ್ರಕ್ಕಿಂಗ್‌ಗೆ ಹೆಸರಾದ ಬೆಳಿಕಲ್ ಬೆಟ್ಟ, ಅಚ್ಚಲು ಬೆಟ್ಟ, ಕಬ್ಬಾಳ್ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವುದು.
*ರೇಷ್ಮೆಗೆ ಹೆಸರಾಗಿರುವ ಕನಕಪುರ ತಾಲೂಕಿನಲ್ಲಿ ರೇಷ್ಮೆ ಟೆಕ್ನೊ ಪಾರ್ಕ್ ನಿರ್ಮಾಣ ಮಾಡಿ ರೇಷ್ಮೆಗೆ ಉತ್ತೇಜನ ನೀಡುವುದು.*ಕನಕಪುರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಧಿಕೃತವಾಗಿ ಚಾಲನೆ ನೀಡಿ, ಕಾಮಗಾರಿ ಮುಗಿಸುವುದು. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯಕೀಯ ಸಲಕರಣೆ ಒದಗಿಸುವುದು.
ಬಾಕ್ಸ್..........ಮಾಗಡಿ ಕ್ಷೇತ್ರ :
* ಮಹಿಳೆಯರಿಗೆ ಅನೂಕೂಲವಾಗುವಂತೆ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್ ಸ್ಥಾಪನೆ ಹಾಗೂ ಬಿಡದಿ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಹೆಚ್ಚು ಅವಕಾಶ ನೀಡುವುದು.* ಶ್ರೀರಂಗ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾಗಿದೆ.
*ನಾಡಪ್ರಭು ಕೆಂಪೇಗೌಡರ ಸಮಾಧಿ ಇರುವ ಕೆಂಪಾಪುರ ಗ್ರಾಮ ಅಭಿವೃದ್ಧಿಗೆ ಅನುದಾನ ಬಂದಿದೆ. ಆದರೆ, ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗಿಲ್ಲ. ಕೆಂಪಾಪುರವನ್ನು ಅಭಿವೃದ್ಧಿ ಪಡಿಸುವುದು.*ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮಿಗಳ ಹುಟ್ಟೂರು ವೀರಾಪುರ ಹಾಗೂ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರಾದ ಬಾನಂದೂರು ಗ್ರಾಮಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿ ಕಾಮಗಾರಿಗೆ ಚಾಲನೆಯೂ ದೊರಕಿದೆ. ಆದರೂ ಕಾಮಗಾರಿ ತೆವಳುತ್ತ ಸಾಗಿದೆ.
*ಬಿಡದಿ ಟೌನ್ ಶಿಪ್ ಯೋಜನೆ ಪೂರ್ಣಗೊಳಿಸುವುದು. ಬಿಡದಿ ಪಟ್ಟಣದವರೆಗೆ ಮೆಟ್ರೋ ವಿಸ್ತರಣೆ ಮಾಡುವುದು. ಮಾಗಡಿ ಪಟ್ಟಣದಲ್ಲಿ ಎಂಜಿನಿಯರಿಂಗ್ ಹಾಗೂ ಕಾನೂನು ಕಾಲೇಜು ಸ್ಥಾಪನೆ ಮಾಡುವುದು.*ಮಂಚನಬೆಲೆ ಜಲಾಶಯದಿಂದ ಮಾಗಡಿ ಪಟ್ಟಣಕ್ಕೆ ಪೂರೈಸುತ್ತಿರುವ ಕುಡಿಯುವ ನೀರನ್ನು ಶುದ್ಧೀಕರಿಸಿ ಪೂರೈಸುವುದು. ವೈ.ಜಿ.ಗುಡ್ಡ ಜಲಾಶಯದಿಂದ ಕುಡಿಯುವ ನೀರು ಪೂರೈಸುವುದು. ಬೈರಮಂಗಲ ಭಾಗದ ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಒದಗಿಸುವುದು.
ಬಾಕ್ಸ್............ಚನ್ನಪಟ್ಟಣ ಕ್ಷೇತ್ರ :
*ವಂದಾರಗುಪ್ಪೆ ಬಳಿ ರೇಷ್ಮೆಗೂಡಿನ ಹೈಟೆಕ್ ಮಾರುಕಟ್ಟೆ ಹಾಗೂ ಬೈರಾಪಟ್ಟಣದಲ್ಲಿ ಮಾವು ಸಂಸ್ಕರಣಾ ಘಟಕವನ್ನು ತ್ವರಿಗತಿಯಲ್ಲಿ ನಿರ್ಮಿಸಿ ಲೋಕಾರ್ಪಣೆ ಮಾಡುವುದು.* ಚನ್ನಪಟ್ಟಣದಲ್ಲಿ ಬಾಕಿ ಉಳಿದಿರುವ ಖಾಸಗಿ ಬಸ್ ನಿಲ್ದಾಣ ಪೂರ್ಣ ಗೊಳಿಸುವುದು. ಕಣ್ವ ಜಲಾಶಯದಲ್ಲಿ ಚಿಲ್ಡ್ರನ್ ಪಾರ್ಕ್ ಸ್ಥಾಪಿಸುವುದು.
*ಚನ್ನಪಟ್ಟಣ ನಗರ ವ್ಯಾಪ್ತಿಯ ಯುಜಿಡಿ ಕಾಮಗಾರಿ ಕಳೆದ 18 ವರ್ಷಗಳಿಂದ ಸ್ಥಗಿತ ಗೊಂಡಿದ್ದು, ನಗರವನ್ನು ಯುಜಿಡಿ ವ್ಯವಸ್ಥೆಗೆ ಒಳಪಡಿಸುವುದು. ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು.*ಚನ್ನಪಟ್ಟಣ ತಾಲೂಕಿನ ಪ್ರಧಾನ ಕಸುಬಾದ ಹೈನುಗಾರಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪಶು ಆಹಾರ ಘಟಕ ಸ್ಥಾಪನೆ. ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸಿಕೊಡುವ ಉದ್ದೇಶದಿಂದ ಟರ್ಮಿನಲ್ ಮಾರುಕಟ್ಟೆ ಸ್ಥಾಪನೆ.
* ಕೆಎಸ್‌ಐಸಿಯ ಸ್ಪನ್ ಸಿಲ್ಕ್ ಮಿಲ್ ಪುನರ್ ಆರಂಭಗೊಂಡಿದೆ. ಅಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಉನ್ನತೀಕರಿಸುವ ಕೆಲಸ ಆಗಬೇಕಿದೆ. ಜೊತೆಗೆ ರೇಷ್ಮೆ ಸೀರೆ ಮಾರಾಟದ ಶೋ ರೂಮ್ ಪ್ರಾರಂಭಿಸಬೇಕಿದೆ.* ಸಂಕಷ್ಟದಲ್ಲಿರುವ ಚನ್ನಪಟ್ಟಣದ ಸಾಂಪ್ರದಾಯಿಕ ಬೊಂಬೆ ಉದ್ಯಮಕ್ಕೆ ನೆರವು ನೀಡುವುದು. ಗಾರ್ಮೆಂಟ್ಸ್ ಸ್ಥಾಪಿಸಿ ಸಾವಿರಾರು ಮಹಿಳೆಯರಿಗೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸುವುದು.(ಫೋಟೋಸ್ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ನಕ್ಷೆ ಫೋಟೊ ಬಳಸಿ)
