ಸಮಾಜದ ಕಟ್ಟಕಡೆಯ ಮತ್ತು ವಂಚಿತ ವರ್ಗದ ಜನರಿಗೂ ಕಾನೂನು ಅರಿವು ತಲುಪಿಸುವುದು ಪ್ರತಿಯೊಬ್ಬ ಭಾವಿ ವಕೀಲರ ಆದ್ಯ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ವಿಕ್ರಂನಾಥ್ ಅವರು ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಮಾಜದ ಕಟ್ಟಕಡೆಯ ಮತ್ತು ವಂಚಿತ ವರ್ಗದ ಜನರಿಗೂ ಕಾನೂನು ಅರಿವು ತಲುಪಿಸುವುದು ಪ್ರತಿಯೊಬ್ಬ ಭಾವಿ ವಕೀಲರ ಆದ್ಯ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ವಿಕ್ರಂನಾಥ್ ಅವರು ಹೇಳಿದರು.ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಲ್ಸಾ), ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಜಂಟಿಯಾಗಿ ರಾಮಯ್ಯ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ‘ತರಗತಿಯಿಂದ ನ್ಯಾಯಾಲಯದವರೆಗೆ: ಸಾಮಾಜಿಕ ನ್ಯಾಯದ ವೇಗವರ್ಧಕರಾಗಿ ಕಾನೂನು ವಿದ್ಯಾರ್ಥಿಗಳು’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲರು ನ್ಯಾಯದಾನ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಕಾನೂನಿನ ಸರಿಯಾದ ವ್ಯಾಖ್ಯಾನ ನೀಡಿ, ನಿರ್ಗತಿಕರಿಗೆ ಉಚಿತ ಕಾನೂನು ನೆರವು ಒದಗಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಮತ್ತು ಸಮಾನತೆಯನ್ನು ಕಾಪಾಡಲು ಅಪಾರ ಕೊಡುಗೆ ನೀಡುತ್ತಿದ್ದಾರೆ. ಭಾವಿ ವಕೀಲರು ಕೂಡ ಸಾಮಾಜಿಕ ನ್ಯಾಯದ ರೂವಾರಿಗಳಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮಾತನಾಡಿ, ಈ ಕಾರ್ಯಾಗಾರವು ಸಾಂಪ್ರದಾಯಿಕ ಶೈಕ್ಷಣಿಕ ಗಡಿಗಳನ್ನು ದಾಟಿ, ಸಾಮಾನ್ಯ ಜನರಿಗೂ ನ್ಯಾಯದ ಲಭ್ಯತೆಯನ್ನು ಹಕ್ಕನ್ನಾಗಿ ಪರಿವರ್ತಿಸಲು ನೆರವಾಗಲಿದೆ ಎಂದರು.
ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರು, ಸಮಾಜದ ಸಾಮಾನ್ಯ ಜನರಿಗೆ ಜಟಿಲವಾದ ಕಾನೂನು ಚೌಕಟ್ಟುಗಳನ್ನು ಸರಳವಾಗಿ ಅರ್ಥೈಸುವ ಮೂಲಕ ವಿದ್ಯಾರ್ಥಿಗಳು ಇಂದಿನಿಂದಲೇ ಸಾಮಾಜಿಕ ಬದಲಾವಣೆಯ ಪ್ರಮುಖ ವೇಗವರ್ಧಕರಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಎಂ.ಎಸ್.ರಾಮಯ್ಯ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಉಮಾಮಹೇಶ್ ಸತ್ಯನಾರಾಯಣ್ ಮಾತನಾಡಿದರು.ಇದೇ ಸಂದರ್ಭದಲ್ಲಿ ಕಾನೂನು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ಪ್ರಗತಿ ಬಿಂಬಿಸುವ ಸ್ಮರಣೀಯ ‘ಕಾಫಿ ಟೇಬಲ್ ಬುಕ್’ ಸೇರಿದಂತೆ ನಾಲ್ಕು ಪ್ರಮುಖ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಮಯ್ಯ ಕಾನೂನು ಕಾಲೇಜಿನ ನಿರ್ದೇಶಕ ಎಂ.ಆರ್.ಆನಂದರಾವ್, ನವದೆಹಲಿಯ ನಲ್ಸಾ ಸದಸ್ಯ ಕಾರ್ಯದರ್ಶಿ ಸಂಜೀವ್ ಪಾಂಡೆ, ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್, ಹುಬ್ಬಳ್ಳಿಯ ಕೆಎಸ್‌ಎಲ್‌ಯು ಕುಲಪತಿ ಸಿ.ಬಸವರಾಜ್, ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ ಸೇರಿದಂತೆ ಇತರರಿದ್ದರು.