ಸಾರಾಂಶ
ಸಿಎಂ ಸಿದ್ಧರಾಮಯ್ಯ ಕಾಂಗ್ರೆಸ್ ಮುಖ್ಯಮಂತ್ರಿಯಲ್ಲ, ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನು ಅರಿತುಕೊಂಡು ಪಕ್ಷಭೇದ ಮರೆತು ಎಲ್ಲ ಶಾಸಕರಿಗೂ ಸಮಾನಾಂತರ ಅನುದಾನ ನೀಡಬೇಕು
ನರಗುಂದ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನತೆಗೆ ಆರ್ಥಿಕ ಸಬಲತೆ ಉಂಟಾಗಿದೆ. ಅಭಿವೃದ್ಧಿಗೆ ಮಾತ್ರ ಸಂಪೂರ್ಣ ಹಿನ್ನಡೆಯಾಗಿದೆ ಎಂದು ಶಾಸಕ ಸಿ. ಸಿ.ಪಾಟೀಲ ಹೇಳಿದರು.
ಅವರು ತಾಲೂಕಿನ ಶಿರೋಳ ಗ್ರಾಮದ ಎಸ್.ಸಿ ಕಾಲನಿಯಲ್ಲಿ 2024-25ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ತಾಪಂ ಅನಿರ್ಬಂಧಿತ ಅನುದಾನ ₹ 25.17 ಲಕ್ಷಗಳ ಓಎಚ್ ಟಿ ಟ್ಯಾಂಕ್ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸಿಎಂ ಸಿದ್ಧರಾಮಯ್ಯ ಕಾಂಗ್ರೆಸ್ ಮುಖ್ಯಮಂತ್ರಿಯಲ್ಲ, ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನು ಅರಿತುಕೊಂಡು ಪಕ್ಷಭೇದ ಮರೆತು ಎಲ್ಲ ಶಾಸಕರಿಗೂ ಸಮಾನಾಂತರ ಅನುದಾನ ನೀಡಬೇಕು. ವಿಷ ಕುಡಿಯುತ್ತೇವೆ ಎಂದರೂ ಹಣ ಇಲ್ಲ, ಅಭಿವೃದ್ಧಿಗೆ ಎಲ್ಲಿಂದ ಹಣ ತರಬೇಕೆಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಕೊನೆ ಪಕ್ಷ ರಸ್ತೆಯಲ್ಲಿನ ಗುಂಡಿಗಳನ್ನಾದರೂ ಮುಚ್ಚಲು ಅನುದಾನ ನೀಡಬೇಕೆಂದು ಆಗ್ರಹಿಸುತ್ತೇನೆ ಎಂದರು.ತಾಲೂಕಿನಲ್ಲಿ 3 ನೀರಾವರಿ ವಿಭಾಗದ ಕಚೇರಿಗಳಿವೆ. ಒಬ್ಬರೇ ಅಭಿಯಂತರರು ಇದ್ದಾರೆ. ಅಧಿಕಾರಿಗಳೆಲ್ಲರೂ ವರ್ಗಾವಣೆಗೊಂಡಿದ್ದಾರೆ. ರೈತರ ಕೃಷಿ ಭೂಮಿಗಳಿಗೆ ನೀರು ಒದಗಿಸಲಿಕ್ಕೆ ಆಗುತ್ತಿಲ್ಲ. ನೀರು ನಿರ್ವಹಣೆಗೆ ಟೆಂಡರ್ ಕರೆಯದ ಕಾರಣ ಜಾಕವೆಲ್ಲಗಳು ಬಂದಾಗಿವೆ.ನಿರ್ವಹಣೆ ಮಾಡುವವರು ಇಲ್ಲದೇ ಎಲ್ಲ ಕಾಲುವೆಗಳಲ್ಲಿನ ನೀರು ಹಳ್ಳಕ್ಕೆ ಹರಿದು ಹೋಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕಪ್ಪಲಿ ಗ್ರಾಮದ ಗ್ರಂಥಾಲಯ ದುರಸ್ತಿ ಮತ್ತು ಸಿಸಿ ರಸ್ತೆಗೆ ₹ 9.50 ಲಕ್ಷ ಹಾಗೂ ಶಿರೋಳ ಗ್ರಾಮದ ಬಾಲಕರ ಹಿಂದುಳಿದ ವರ್ಗದ ವಸತಿ ನಿಲಯ ಕಟ್ಟಡ ದುರಸ್ತಿ ಮತ್ತು ರಡ್ಡೇರನಾಗನೂರ ಗ್ರಾಮದಲ್ಲಿ ಸಿಸಿ ರಸ್ತೆ ಅಭಿವೃದ್ಧಿಗೆ ₹ 8.10 ಲಕ್ಷಗಳ ಕಾಮಗಾರಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಅಪ್ಪಯ್ಯ ಹಿರೇಮಠ, ಬಾಪುಗೌಡ ತಿಮ್ಮನಗೌಡ್ರ, ವಿ.ಕೆ. ಮರಿಗುದ್ದಿ, ನಾಗನಗೌಡ ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ತಾಪಂ ಇಓ ಎಸ್.ಕೆ.ಇನಾಮದಾರ, ಹನುಮಂತ ಕಾಡಪ್ಪನವರ, ನಿಂಗಪ್ಪ ಗಾಡಿ ಸೇರಿದಂತೆ ಮುಂತಾದವರು ಇದ್ದರು.