ಸಾರಾಂಶ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಸಮೀಪದ ಆಡುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಸಕರ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಯಾವುದೇ ಕಾಮಗಾರಿಗಳು ಪೂರ್ಣಗೊಳ್ಳುತ್ತಿಲ್ಲ ಎಂದು ಆಡುವಳ್ಳಿ ಗ್ರಾಪಂ ಅಧ್ಯಕ್ಷ ಯು.ಸಿ. ಪ್ರದೀಪ್ ದೂರಿದ್ದಾರೆ.ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರ ನೇತೃತ್ವದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕಳೆದ ಎರಡ್ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. .
ಕೇಂದ್ರ ಸರ್ಕಾರದ ಜಲಜೀವನ್ ಯೋಜನೆಯಡಿ ಆಡುವಳ್ಳಿ ಗ್ರಾಪಂ ವ್ಯಾಪ್ತಿ ಉಬ್ಬಿನಮನೆ, ಮೇಗರಮಕ್ಕಿ, ಬಂಡಿಹೊಳೆ, ಕತಗಾರ್, ಹೊಟ್ಟಿನಕೊಡಿಗೆಯಲ್ಲಿ ಜಲಜೀವನ್ ಕಾಮಗಾರಿ ಪೈಪ್‌ಲೈನ್‌ಗಾಗಿ ಗುಂಡಿ ತೆಗೆದಿದ್ದು, ಹಲವು ದಿನಗಳಾದರೂ ಸಹ ಅದನ್ನು ಇನ್ನೂ ಮುಚ್ಚಿಲ್ಲ. ಇದರಿಂದಾಗಿ ವಾಹನ ಸವಾರರು, ಸಾರ್ವಜನಿಕರು ಸಂಕಷ್ಟ ಪಡುವಂತಾಗಿದೆ.ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ತುರ್ತು ಹಾಗೂ ಅಗತ್ಯವಾಗಿದ್ದರೂ ಸಹ ಕಳೆದ ಎರಡು-ಮೂರು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಳಿಸಿದ್ದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಮಳೆಗಾಲದ ಸಂದರ್ಭ ಜನರು ರಸ್ತೆ ಬದಿಯಲ್ಲಿ ಓಡಾಟ ನಡೆಸುವುದೇ ಕಷ್ಟಸಾಧ್ಯವಾಗಿದೆ. ಕೆಲವು ಮನೆಗಳ ಮುಂದೆ ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದು ಇದಕ್ಕೆ ಮನೆ ಚಿಕ್ಕಮಕ್ಕಳು ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ.
ಜಿಪಂ, ತಾಪಂನ ಅಡಿಯಲ್ಲಿ ಜಲಜೀವನ್ ಕಾಮಗಾರಿ ನಿರ್ವಹಣೆ ಮಾಡುತ್ತಿದ್ದು, ಸ್ಥಳೀಯ ಗ್ರಾಪಂ ಸದಸ್ಯರು ಈ ಬಗ್ಗೆ ಗಮನಕ್ಕೆ ತರುತ್ತಿಲ್ಲ. ಶಾಸಕರು ಈ ಯೋಜನೆಗಳಲ್ಲಿ ಗ್ರಾಪಂ ಅಧಿಕಾರ ಮೊಟಕುಗೊಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಹಲವು ಕಡೆಗಳಲ್ಲಿ ನಡೆಯುತ್ತಿರುವ ಜಲಜೀವನ್ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಈ ಬಗ್ಗೆ ಎಚ್ಚೆತ್ತು ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಬೇಕಿದೆ ಎಂದು ಅವರು ಹೇಳಿದ್ದಾರೆ.ಜೆಜೆಎಂ ಯೋಜನೆಯಡಿ ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಸೂಚಿಸಿದ್ದರೂ ಸಹ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಸರ್ವೆ ನಡೆಸಿ ಕುಡಿಯುವ ನೀರಿನ ಅಗತ್ಯವಿರುವ ಮನೆಗಳನ್ನು ಪಟ್ಟಿಯಿಂದ ಕೈಬಿಟ್ಟು ಯೋಜನೆಯಿಂದ ವಂಚಿತರಾಗುವಂತೆ ಮಾಡುತ್ತಿದ್ದಾರೆ ಎಂದು ದೂರಿದರು.
ಜೆಜೆಎಂನಲ್ಲಿ ಅಂಡವಾನೆಗದ್ದೆ, ಜೀರುಳ್ಳಿ, ರಟ್ಟೆಹಳ್ಳಿ ಭಾಗಕ್ಕೆ ಕುಡಿಯುವ ನೀರಿನ ಕೊಳೆಬಾವಿ ಕೊರೆಯಲು ಅನುಮೋದನೆ ಸಿಕ್ಕಿದರೂ ಸಹ ಇನ್ನೂ ಕಾರ್ಯಗತವಾಗಿಲ್ಲ. ಶಾಸಕರ ಬಗ್ಗೆ ಅಧಿಕಾರಿಗಳಿಗೆ ಭಯವಿಲ್ಲವಾಗಿದೆ. ಆಡುವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜೆಜೆಎಂ ಕಾಮಗಾರಿಗಳನ್ನು ಸಮರ್ಪಕವಾಗಿ ಶೀಘ್ರದಲ್ಲಿ ನಡೆಸದಿದ್ದಲ್ಲಿ ಎನ್.ಆರ್.ಪುರ ತಾಲೂಕು ಕಚೇರಿ ಮುಂಭಾಗದಲ್ಲಿ ಶಾಸಕರು, ಆಡಳಿತ ಪಕ್ಷದ ವಿರುದ್ಧ ಧರಣಿ ನಡೆಸಲಾಗುವುದು ಎಂದು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.