ನಂಗ್ ವೋಟ್ ಹಾಕಿಲ್ಲ ಅಂದ್ರೂ ವಿರೋಧ ಪಕ್ಷದವರ ಊರು ಅಂತ ಗೊತ್ತಿದ್ರೂ ಮಸಬಹಂಚಿನಾಳಕ್ಕೆ ಇಂದು ಪಿಯುಸಿ ಕಾಲೇಜು ಮಂಜೂರು ಮಾಡಿಸಿದ್ದೇನೆ ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಕುಕನೂರು: ಅಭಿವೃದ್ಧಿ ಯೋಜನೆಗಳಿಗೆ ಜನರ ಬೆಂಬಲ ಅಗತ್ಯ. ಕಳೆದ ಸಾರಿ ನಾನು ಸೋತಾಗ ಕ್ಷೇತ್ರಕ್ಕಿರಲಿ ತಮ್ಮೂರಿಗೆ ವಿರೋಧ ಪಕ್ಷದವರು ಒಂದು ಹಾಸ್ಟೆಲ್, ಕಾಲೇಜ್ ಮಾಡಿಕೊಂಡ್ರಾ ಕೇಳಿ? ನಂಗ್ ವೋಟ್ ಹಾಕಿಲ್ಲ ಅಂದ್ರೂ ವಿರೋಧ ಪಕ್ಷದವರ ಊರು ಅಂತ ಗೊತ್ತಿದ್ರೂ ಮಸಬಹಂಚಿನಾಳಕ್ಕೆ ಇಂದು ಪಿಯುಸಿ ಕಾಲೇಜು ಮಂಜೂರು ಮಾಡಿಸಿದ್ದೇನೆ ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಶಿರೂರು, ಬಳಗೇರಿ ಗ್ರಾಮದಲ್ಲಿ ಜರುಗಿದ ಜನಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಹಿಂದೆ ನಾನು ನೂತನ ಕುಕನೂರು ತಾಲೂಕು ಘೋಷಣೆ ಮಾಡಿಸಿದ್ದೆ. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಸ್ಥಳೀಯ ಎಂ.ಎಲ್.ಎಗಳು ಪ್ರಜಾಸೌಧ ಕಟ್ಟಡ ಕಟ್ಟಲಿಲ್ಲ, ಸದ್ಯ ನಾನು ಪ್ರಜಾ ಸೌಧಕ್ಕೆ ₹18.60 ಕೋಟಿ ಅನುದಾನ ಕೊಡಿಸಿದ್ದೇನೆ. ಡಿಸಿ ಅವರ ಪ್ರಸ್ತಾವನೆ ಮೇರೆಗೆ ಧಾರ್ಮಿಕ ದತ್ತಿ ಇಲಾಖೆ ಜಾಗದಲ್ಲಿ ಕಟ್ಟಡ ನಿರ್ಮಾಣ ಆಗುತ್ತಿದೆ. ಅಲ್ಲಿನ ಜನರು ಧಾರ್ಮಿಕ ದತ್ತಿ ಇಲಾಖೆ ಜಾಗ ತಮ್ಮದೆಂದು ಅಡ್ಡಿ ಮಾಡುವುದು ಸರಿಯಲ್ಲ. ಅವರಿಗೆ ಭೂಮಿ ಬೇಕಾದರೆ ಗಾವರಾಲ ಬಳಿ ಎರಡು ಎಕರೆ ಭೂಮಿ ಕೊಡಿಸುತ್ತೇನೆ ಎಂದರು.

ಯಲಬುರ್ಗಾ ಕ್ಷೇತ್ರದ ಎಲ್ಲ ರಸ್ತೆಗಳಲ್ಲಿರುವ ತಗ್ಗುಗುಂಡಿ ಮುಚ್ಚಲು ತಿಳಿಸಿದ್ದೇನೆ. 34 ಕೆರೆ ತುಂಬಿಸುವ ಯೋಜನೆಗೆ ಟೆಂಡರ್ ಮುಗಿದಿದೆ. ಕೆಲಸ ಆರಂಭವಾಗುತ್ತದೆ ಎಂದರು.

ತಹಸೀಲ್ದಾರ ಬಸವರಾಜ ಬೆಣ್ಣೆ ಶಿರೂರು, ತಾಪಂ ಇಒ ಬೆಟದಪ್ಪ ಮಾಳೆಕೊಪ್ಪ, ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಬಿಇಒ ಶ್ರೀನಿವಾಸ, ಪಿಡಬ್ಲೂಡಿ ಅಧಿಕಾರಿ ಮಲ್ಲಿಕಾರ್ಜುನ, ಅಧಿಕಾರಿಗಳಾದ ಶಿವಶಂಕರ ಕರಡಕಲ್, ರಾಘವೇಂದ್ರ ಜೋಷಿ, ನಾಗರಾಜ, ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ಪ್ರಮುಖರಾದ ದೇವಪ್ಪ ಅರಕೇರಿ, ಬಸವರಾಜ ಮಾಸೂರು, ಈಶಪ್ಪ ಶಿರೂರು, ಹನುಮಂತಗೌಡ ಚಂಡೂರು, ಮಂಜುನಾಥ ಕಡೇಮನಿ, ಈಶ್ವರ ಅಮಾಳಗಿ, ಹಂಪಯ್ಯಸ್ವಾಮಿ, ಹನುಮೇಶ ಕಡೇಮನಿ, ಯಮನೂರಪ್ಪ ಬೂದಗುಂಪಾ, ನಾಗಯ್ಯ ಚನ್ನಪ್ಪನಹಳ್ಳಿ, ಮಲ್ಲಿಕಾರ್ಜುನಗೌಡ, ಭೀಮಣ್ಣ ನಡುಲಮನಿ ಇತರರಿದ್ದರು.

ಬಿಜೆಪಿಯ ₹ 2.45 ಲಕ್ಷ ಕೋಟಿ ಬಿಲ್ ಪೆಂಡಿಂಗ್

ಸರ್ಕಾರದಲ್ಲಿ ಹಣವಿಲ್ಲ ಎಂದು ಸುಮ್ಮನೆ ಮಾತನಾಡುವ ವಿರೋಧ ಪಕ್ಷದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಮುಕ್ತಾಯದಲ್ಲಿ ಬರೋಬ್ಬರಿ ₹ 2.45 ಲಕ್ಷ ಕೋಟಿ ಬಿಲ್‌ಗಳನ್ನು ನಾನಾ ಯೋಜನೆ ರೂಪಿಸಿ ಹಣ ನೀಡದೆ ಪೆಂಡಿಂಗ್ ಉಳಿಸಿತ್ತು. ಅದನ್ನೂ ಕಾಂಗ್ರೆಸ್ ಸರ್ಕಾರ ಸರಿಪಡಿಸಿದೆ. ರಾಷ್ಟ್ರದಲ್ಲಿ ರಾಜ್ಯ ಜನರಿಗೆ ನೇರವಾಗಿ ₹1.20 ಲಕ್ಷ ಕೋಟಿಯನ್ನು ನೀಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಯಾವುದೇ ಯೋಜನೆ ನಿಲ್ಲುವುದಿಲ್ಲ. ಗ್ಯಾರಂಟಿ ಯೋಜನೆಯ ಶಕ್ತಿ ಯೋಜನೆಯಲ್ಲಿ ₹ 900 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದು, ₹ 23 ಸಾವಿರ ಕೋಟಿ ನೀಡಿದ್ದೇವೆ. ಗೃಹಲಕ್ಷ್ಮಿ ಯೋಜನೆಗೆ ₹ 73 ಸಾವಿರ ಕೋಟಿ ನೀಡಿದ್ದೇವೆ. ರಾಜ್ಯದ ₹ 4 ಕೋಟಿ 36 ಲಕ್ಷ ಜನರಿಗೆ 10 ಕೆಜಿ ಅಕ್ಕಿ ನೀಡುತ್ತಿದ್ದೇವೆ. ಗೃಹಜ್ಯೋತಿ, ಯುವ ನಿಧಿಗಳಿಗೆ ಹಣ ನೀಡಿದ್ದೇವೆ. 36.10 ಲಕ್ಷ ರೈತರ ಪಂಪ್‌ಸೆಟ್ಟಿಗೆ ಉಚಿತ ವಿದ್ಯುತ್ ನೀಡಿದ್ದೇವೆ. 46 ಲಕ್ಷ ಶಾಲಾ ಮಕ್ಕಳಿಗೆ ಬಿಸಿಯೂಟ, ಹಾಲು, ಸಮವಸ್ತ್ರ, ಶೂ ನೀಡಿದ್ದೇವೆ. ಮಾಸಾಶನ, ವೃದ್ಧಾಪ್ಯ ವೇತನ ಹೆಚ್ಚು ಜನರು ಪಡೆಯಲಿ ಎಂದು ಆದಾಯ ಮಿತಿಯನ್ನು ₹ 32 ಸಾವಿರದಿಂದ ₹ 1.20 ಲಕ್ಷ ವರೆಗೆ ಏರಿಸಿದ್ದೇವೆ ಎಂದರು.ವಿಬ್ ಜಿ ರಾಮ್ ಜಿಗೆ ಹಣ ನೀಡದ ಕೇಂದ್ರ ಸರ್ಕಾರ

ಉದ್ಯೋಗ ಭರವಸೆಯ ನರೇಗಾ ಯೋಜನೆಯನ್ನು ತೆಗೆದು ವಿಬ್ ಜಿ ರಾಮ್ ಜೀ ಯೋಜನೆ ಮಾಡಿದ್ದಾರೆ. ಹಿಂದಿನ ನರೇಗಾ ಯೋಜನೆಗೆ ಕೇಂದ್ರ ಸರ್ಕಾರ 90% ಹಣ ನೀಡುತ್ತಿತ್ತು, ಆದರೆ ವಿಬ್ ಜಿ ರಾಮ್ ಜಿ ಮಾಡಿದ್ದರಿಂದ 60% ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕಿದೆ. ಹಿಂದೆ ನರೇಗಾಕ್ಕೆ ₹600 ಕೋಟಿ ಕೊಡುತ್ತಿದ್ದೇವು. ಸದ್ಯ ವಿಬ್ ಜಿ ರಾಮ್ ಜಿಗೆ ₹3 ಸಾವಿರ ಕೋಟಿ ಕೊಡಬೇಕಾಗುತ್ತದೆ ಎಂದರು.

ನಮ್ಮೂರಲ್ಲಿ ಶೌಚಾಲಯ ಕಟ್ಟಿಸಿ ಕೊಡ್ರಿ

ಕುಕನೂರು: ಸರ್ ನಮ್ಮೂರಲ್ಲಿ ಶೌಚಾಲಯ ಇಲ್ಲ, ಕಟ್ಟಿಸಿಕೊಡ್ರಿ ಎಂದು ತಾಲೂಕಿನ ಹರಿಶಂಕರ ಬಂಡಿ ಗ್ರಾಮದ ಮಹಿಳೆಯರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಜರುಗಿದ ಜನಸಂದರ್ಶನ ಕಾರ್ಯಕ್ರಮದಲ್ಲಿ ಸಚಿವ ಬಸವರಾಜ ರಾಯರಡ್ಡಿ ಅವರನ್ನು ಒತ್ತಾಯಿಸಿದರು.

ಈ ವೇಳೆ ಸಚಿವ ಬಸವರಾಜ ರಾಯರಡ್ಡಿ ಅವರು, ಇವೆಲ್ಲ ಗ್ರಾಪಂ ಸದಸ್ಯರು, ಪಿಡಿಒಗಳು ಮಾಡುವ ಕೆಲಸ. ಸರ್ಕಾರ ಒಂದು ಶೌಚಾಲಯ ನಿರ್ಮಾಣಕ್ಕೆ ₹12500 ನೀಡುತ್ತದೆ. ಗ್ರಾಪಂನಿಂದ ಪಡೆದು ಕಟ್ಟಿಸಿಕೊಳ್ರಿ. ಆಗ ಮಹಿಳೆಯರು ನಮ್ಮೂರು ಬಂಡೆಗಳ ಮೇಲಿದೆ, ಅಲ್ಲಿ ಶೌಚಾಲಯ ಕಟ್ಟಿಸಲು ಆಗುವುದಿಲ್ಲ. ಈ ಹಿಂದೆ ಕಟ್ಟಿಸಿದ ಶೌಚಾಲಯ ನಮ್ಮ ಜಾಗದಲ್ಲಿದೆ ಎಂದು ಗ್ರಾಮದವರೊಬ್ಬರು ಅದಕ್ಕೆ ಬೀಗ ಹಾಕಿದ್ದಾರೆ. ಹೀಗಾಗಿ ಶೌಚಾಲಯ ಕಟ್ಟಿಸಿಕೊಡಬೇಕು ಎಂದು ಒತ್ತಾಯಿಸಿದ ವೇಳೆ, ಶೌಚಾಲಯ ಕಟ್ಟಿಸೋದು, ಲೈಟ್ ಹಾಕಿಸೋದು, ನೀರು ಬಿಡುವುದು, ಸ್ವಚ್ಛತೆ ಮಾಡುವುದು ಇದು ಗ್ರಾಪಂ ಸದಸ್ಯರ ಕೆಲಸ. ಇಲ್ಲಾಂದ್ರೆ ನಾನೇ ಎಂಎಲ್ಎ ಬಿಟ್ಟು ಗ್ರಾಪಂ ಸದಸ್ಯನಾಗಿ ಕೆಲಸ ಮಾಡಬೇಕು ನೋಡ್ರಿ ಎಂದರು.

ಇನ್ನೂ 3 ತಿಂಗಳಲ್ಲಿ ಗ್ರಾಪಂ, ತಾಪಂ, ಜಿಪಂ ಚುನಾವಣೆ ಬರುತ್ತವೆ. ನಿಮ್ಮೂರಿನ ಇಬ್ಬರು ಹೆಣ್ಣು ಮಕ್ಕಳು ಗ್ರಾಪಂ ಸದಸ್ಯರಾಗಿ ಕೆಲಸ ಮಾಡಿ. ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಮಹಿಳೆಯರು ತಮ್ಮ ಮನೆಯ ಗಂಡಸರಿಗೆ ಒತ್ತಾಯಿಸಿರಿ ಎಂದ ಅವರು ಗ್ರಾಮದಲ್ಲಿರುವ ಸಮಸ್ಯೆಯನ್ನು ಶೀಘ್ರವೇ ಪಿಡಿಒ, ತಾಪಂ ಇಒ, ತಹಸೀಲ್ದಾರ್ ಬಗೆ ಹರಿಸಿಕೊಟ್ಟು ಮಹಿಳೆಯರ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಸೂಚಿಸಿದರು.