ಕನ್ನಡಪ್ರಭ ವಾರ್ತೆ ಗೋಕಾಕ
ಸಾಮಾಜಿಕ ನ್ಯಾಯದ ರೂವಾರಿ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಎಲ್ಲ ಸಮಾಜಗಳನ್ನು ಒಂದುಗೂಡಿಸಿಕೊಂಡು ಯಾರಿಗೂ ಅನ್ಯಾಯವಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದಾಗಿ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ತಾಲೂಕಿನ ತಳಕಟ್ನಾಳ ಗ್ರಾಮದಲ್ಲಿ ಬುಧವಾರ ಸುಮಾರು ₹ 4 ಕೋಟಿ ವೆಚ್ಚದ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು. ಜಾತಿ, ಮತ, ಪಂಥಗಳ ಬೇಧ ಭಾವ ಮಾಡದೇ ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ನಡೆಯುತ್ತಿದ್ದೇನೆ. ತಳಕಟ್ನಾಳ ಗ್ರಾಮದಲ್ಲಿ ಅನೇಕ ಕಾಮಗಾರಿಗಳನ್ನು ನೆರವೇರಿಸಿರುವುದು ಖುಷಿಯಾಗಿದೆ ಎಂದರು.ಕ್ಷೇತ್ರದಲ್ಲಿ ಹದಿಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದೇನೆ. ಕೆಲವು ರಸ್ತೆಗಳಿಗೆ ಈಗಾಗಲೇ ಅನುದಾನ ಬಂದಿದೆ. ಉದಗಟ್ಟಿ- ತಳಕಟ್ನಾಳ- ಖಂಡ್ರಟ್ಟಿ ರಸ್ತೆ, ಹಡಗಿನಾಳ ಕ್ರಾಸ್‌ನಿಂದ ಹಡಗಿನಾಳ ತನಕ, ಬೀರನಗಡ್ಡಿ ರಸ್ತೆಗಳ ಸುಧಾರಣೆ ಕಾಮಗಾರಿಗಳು ಮಂಜೂರಾಗಿದೆ. ಜತೆಗೆ ರೈತರ ತೋಟಪಟ್ಟಿ ರಸ್ತೆಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ 56 ತೋಟದ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದು, ಇನ್ನೂ 50 ನಿರ್ಮಾಣ ಮಾಡಬೇಕಿದೆ. ನಮ್ಮ ತಾಲೂಕಿನಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳಿರುವುದರಿಂದ ರಸ್ತೆಗಳ ಸುಧಾರಣೆ ಅವಶ್ಯವಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಹೆಚ್ಚಿನ ರಸ್ತೆಗಳನ್ನು ಸುಧಾರಣೆ ಮಾಡಲು ಕಾಮಗಾರಿಗಳಿಗೆ ಮಂಜೂರಾತಿ ನೀಡುವಂತೆ ಕೋರಿದ್ದಾಗಿ ತಿಳಿಸಿದರು.ರೈತರಿಗೆ ಸಮರ್ಪಕ ನೀರು ಪೂರೈಕೆ ಆಗಬೇಕು. ಈ ದಿಸೆಯಲ್ಲಿ ಸತೀಶ್ ಜಾರಕಿಹೊಳಿಯವರು ನನಗಿಂತ ಮೊದಲು ಕಾಲುವೆಗಳಿಗೆ ಭೇಟಿ ನೀಡುತ್ತ ರೈತ ಬಾಂಧವರಿಗೆ ನೀರು ತಲುಪಿಸುತ್ತಿದ್ದರು. ಅವರ ನಂತರ ನಾನೂ ಅದೇ ಹಾದಿಯಲ್ಲಿ ನಡೆಯುತ್ತಿದ್ದೇನೆ. ಕಾಲುವೆ, ಹಳ್ಳಗಳಿಗೆ ನೀರು ಬಿಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ. ಏ.1 ರಿಂದ ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಮತ್ತು ಸಿಬಿಸಿ ಕಿನಾಲ್ ಗಳಿಗೆ ನೀರನ್ನು ಬಿಡುಗಡೆ ಮಾಡುವಂತೆಯೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ದೇವರ ದಯೆಯಿಂದ ಮಳೆಯಾದರೆ ರೈತರು ಖುಷಿಯಾಗುತ್ತಾರೆ. ರೈತರು ಸುಖದಿಂದ ಇದ್ದರೆ ಇಡೀ ಜಗವು ಸಂತಸದಿಂದ ಇರುತ್ತದೆ ಎಂದು ಹೇಳಿದರು.ಶಾಸಕ ಬಾಲಚಂದ್ರ ಜಾರಕಿಹೊಳಿ ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಯನ್ನು ಉದ್ಘಾಟಿಸಿದರು. ನಂತರ ತೆರೆದ ವಾಹನದಲ್ಲಿ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆ ತರಲಾಯಿತು. ವಿವಿಧ ವಾದ್ಯ ವೃಂದಗಳು, ಆನೆ, ಡೋಲಕ, ಸುಮಂಗಲೆಯರಿಂದ ಕುಂಭ ಮೇಳ ಆಕರ್ಷಿಯವಾಗಿತ್ತು. ಗ್ರಾಮದೇವತೆಯ ಜಾತ್ರೆಯು ಸಡಗರ ಸಂಭ್ರಮದಿಂದ ಜರುಗಿತು. ಇದೇ ವೇಳೆ ₹ 2.50 ಕೋಟಿ ವೆಚ್ಚದ ಲಕ್ಷ್ಮೀದೇವಿ ನಗಾರೆಖಾನೆ, ₹ 60 ಲಕ್ಷ ವೆಚ್ಚದ ಯಾತ್ರಿ ನಿವಾಸ, ₹ 10 ಲಕ್ಷ ವೆಚ್ಚದ ದುರ್ಗಾದೇವಿ ಅಡಿಗೆ ಕೋಣೆ, ₹ 10 ಲಕ್ಷ ವೆಚ್ಚದ ರೇವಣಸಿದ್ಧೇಶ್ವರ ಚಾಂದಣಿ, ₹10 ಲಕ್ಷ ವೆಚ್ಚದ ಬಲಭೀಮ ದೇವರ ಚಾಂದಣಿ, ₹ 10 ಲಕ್ಷ ವೆಚ್ಚದ ಬಸವೇಶ್ವರ ರಂಗ ಮಂದಿರದ ಕಟ್ಟಡ ಸೇರಿದಂತೆ ಹುಲ್ಲಾರ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಒಟ್ಟು ನಾಲ್ಕು ಕೊಠಡಿಗಳನ್ನು ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು.ಸಾನಿಧ್ಯವನ್ನು ಕವಲಗುಡ್ಡದ ಅಮರೇಶ್ವರ ಮಹಾರಾಜರು, ತಳಕಟ್ನಾಳದ ಆತ್ಮಾನಂದ ಸ್ವಾಮಿಗಳು, ಕಪರಟ್ಟಿಯ ಬಸವರಾಜ ಸ್ವಾಮಿಗಳು ವಹಿಸಿದ್ದರು. ತಾಪಂ ಮಾಜಿ ಸದಸ್ಯ ಲಕ್ಷ್ಮಣ ಮಸಗುಪ್ಪಿ ಪ್ರಾಸ್ತಾವಿಕ ಮಾತನಾಡಿದರು.ವೇದಿಕೆಯಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಪ್ರಭಾ ಶುಗರ್ಸ್ ಅಧ್ಯಕ್ಷ ಶಿದ್ಲಿಂಗಪ್ಪ ಕಂಬಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಲಕ್ಕಪ್ಪ ಹುಲಕುಂದ, ಮಲ್ಲಿಕಾರ್ಜುನ ಕಬ್ಬೂರ, ವಿಠ್ಠಲ ಸವದತ್ತಿ, ಅಶೋಕ ನಾಯಿಕ, ನಿಂಗಪ್ಪ ದೊಡಮನಿ, ರವಿ ಪರುಶೆಟ್ಟಿ, ಹಣಮಂತ ನಾಯಿಕ, ವಿಠ್ಠಲ ಹುಲ್ಲಾರ, ವಿರುಪಾಕ್ಷಿ ಮುಂಗರವಾಡಿ ಹಾಗೂ ವಿವಿಧ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.