ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ನಗರದ ಜೆ.ಎಚ್.ಪಟೇಲ್ ಬಡಾವಣೆಯ ಕೆಎಸ್‌ಸಿಎ ಮೈದಾನದಲ್ಲಿ ಸುಮಾರು 2 ಕೋಟಿ ರು. ವೆಚ್ಚದ ಟರ್ಫ್ ಅಂಕಣ ಹಾಗೂ ಪೆವಿಲಿಯನ್ ನಿರ್ಮಾಣ ಕಾರ್ಯವನ್ನು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ದಾವಣಗೆರೆ ಕ್ರಿಕೆಟ್ ಕ್ಲಬ್ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ವೀಕ್ಷಿಸಿದರು.

ದಾವಣಗೆರೆ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ನಗರದ ಜೆ.ಎಚ್.ಪಟೇಲ್ ಬಡಾವಣೆಯ ಕೆಎಸ್‌ಸಿಎ ಮೈದಾನದಲ್ಲಿ ಸುಮಾರು 2 ಕೋಟಿ ರು. ವೆಚ್ಚದ ಟರ್ಫ್ ಅಂಕಣ ಹಾಗೂ ಪೆವಿಲಿಯನ್ ನಿರ್ಮಾಣ ಕಾರ್ಯವನ್ನು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ದಾವಣಗೆರೆ ಕ್ರಿಕೆಟ್ ಕ್ಲಬ್ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ವೀಕ್ಷಿಸಿದರು.

ನಗರದ ಜೆ.ಎಚ್‌.ಪಟೇಲ್ ಬಡಾವಣೆಯಲ್ಲಿ ಕೆಎಸ್‌ಸಿಎನಿಂದ ಸುಮಾರು 3.5 ಕೋಟಿ ರು. ವೆಚ್ಚದ ಕಾಮಗಾರಿ ಪೈಕಿ 2 ಕೋಟಿ ರು. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿರುವ ಬಗ್ಗೆ ರಾಜ್ಯ ಕ್ರಿಕೆಟ್ ಸಂಸ್ಥೆಯ ತುಮಕೂರು ವಲಯದ ಸಂಚಾಲಕ ಕೆ.ಶಶಿಧರ್‌ 1.17 ಕೋಟಿ ರು. ವೆಚ್ಚದ ಪೆವಿಲಿಯನ್‌, ಡಾರ್ಮೆಂಟರಿ ಸೇರಿದಂತೆ ಕಾಮಗಾರಿ ಬಗ್ಗೆ ದೂಡಾ ಅಧ್ಯಕ್ಷ ದಿನೇಶ.ಕೆ.ಶೆಟ್ಟಿಯವರಿಗೆ ವಿವರಿಸಿದರು.

ಇದೇ ವೇಳೆ ಮಾತನಾಡಿದ ದಿನೇಶ ಕೆ.ಶೆಟ್ಟಿ, ದಾವಣಗೆರೆಯಲ್ಲಿ ಕೆಎಸ್‌ಸಿಎನಿಂದ ಸುಸಜ್ಜಿನ ಕ್ರಿಕೆಟ್ ಮೈದಾನ ನಿರ್ಮಿಸಬೇಕೆಂಬ ಹಲವಾರು ದಶಕಗಳ ಕನಸು ಸಾಕಾರಗೊಳ್ಳುತ್ತಿದೆ. ಹಿಂದೆ ದೂಡಾದಿಂದ ನೀಡಿದ್ದ ಜಾಗದಲ್ಲಿ ಮೈದಾನ ನಿರ್ಮಾಣ ಕಾಮಗಾರಿ ಸಾಗಿದೆ. ಡಾರ್ಮೆಂಟರಿ ನಿರ್ಮಾಣ ಕಾರ್ಯವನ್ನು ಅವಿಶ್ರಾಂತವಾಗಿ ಕಾರ್ಮಿಕರು ನಿರ್ಮಾಣ ಮಾಡುತ್ತಿದ್ದು, ಆದಷ್ಟು ಬೇಗನೆ ವ್ಯವಸ್ಥಿತ ಕ್ರೀಡಾಂಗಣ ಇಲ್ಲಿ ಸಜ್ಜುಗೊಳ್ಳಲಿದೆ ಎಂದರು.

ಹಿಂದೆ ದೂಡಾ ಅಧ್ಯಕ್ಷರಾಗಿದ್ದ ಶಾಮನೂರು ರಾಮಚಂದ್ರಪ್ಪ, ಆಗಿನ ಆಯುಕ್ತ ಆದಪ್ಪ, ಇಇ ಶ್ರೀಕರ್‌ ಇತರರು ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಸೂಚನೆಯಂತೆ ಇಲ್ಲಿ ಕ್ರಿಕೆಟ್‌ಗಾಗಿ ಮೈದಾನಕ್ಕೆ ಜಾಗ ಮಂಜೂರು ಮಾಡಿದ್ದರು. ಶಾಮನೂರು ಶಿವಶಂಕರಪ್ಪ, ಇತರರು ಕ್ರಿಕೆಟ್‌, ಕ್ರೀಡಾಪಟುಗಳು, ತಂಡಗಳಿಗೆ ಇಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಸೂಚಿಸಿದ್ದಾರೆ ಎಂದು ತಿಳಿಸಿದರು.

ಕೆಎಸ್‌ಸಿಎ ಇಲ್ಲಿ ಅತ್ಯುತ್ತಮ ಮಟ್ಟದ ಕ್ರಿಕೆಟ್ ಅಂಕಣ, ಪೆವಿಲಿಯನ್‌, ಡಾರ್ಮೆಂಟರಿ, ಸ್ವಿಮ್ಮಿಂಗ್ ಫೂಲ್ ಸೇರಿದಂತೆ ಸಾಕಷ್ಟು ಅತ್ಯಾಧುನಿಕ ಸೌಲಭ್ಯ ಒಳಗೊಂಡ ಮೈದಾನ ಇಲ್ಲಿ ಮುಂದಿನ ದಿನಗಳಲ್ಲಿ ತಲೆ ಎತ್ತಲಿದೆ ಎಂದರು.

ದಾವಣಗೆರೆ ಕ್ರಿಕೆಟ್ ಕ್ಲಬ್‌ನ ಹಿರಿಯ ಕ್ರಿಕೆಟ್‌ ಪಟು ನಾಗರಾಜ ಎಸ್.ಬಡದಾಳ್, ಕೆಎಸ್‌ಸಿಎ ತುಮಕೂರು ವಲಯಕ್ಕೆ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಕೋಲಾರ ಜಿಲ್ಲೆ ಒಳಪಡುತ್ತಿದ್ದವು. ಈಗ ಕೋಲಾರ ಬೆಂಗಳೂರು ವಲಯಕ್ಕೆ ಸೇರಿದೆ. ಹಾಗಾಗಿ ದಾವಣಗೆರೆ, ಚಿತ್ರದುರ್ಗ, ವಿಜಯನಗರ ಜಿಲ್ಲೆ ಒಳಗೊಂಡ ದಾವಣಗೆರೆ ವಲಯ ರಚಿಸುವಂತೆ ರಾಜ್ಯ ಕ್ರಿಕೆಟ್ ಸಂಸ್ಥೆ ಮೇಲೆ ಇಲ್ಲಿನ ಕ್ರಿಕೆಟ್ ಕ್ಲಬ್‌ಗಳು ಹಾಗೂ ಹಿರಿಯ ಕ್ರೀಡಾಪಟುಗಳು ಒತ್ತಡ ಹೇರಬೇಕಿದೆ ಇದೆ ಎಂದು ಹೇಳಿದರು.

ಕೆಎಸ್‌ಸಿಎ ತುಮಕೂರು ವಲಯ ಸಂಚಾಲಕ ಕೆ.ಶಶಿಧರ್, ಹಿರಿಯ ಕ್ರಿಕೆಟ್ ಪಟುಗಳಾದ ರೊಳ್ಳಿ ಮಂಜುನಾಥ, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಮುಖಂಡ ಶಾಮನೂರು ತಿಪ್ಪೇಶ, ಕ್ರಿಕೆಟ್ ಕೋಚ್‌ಗಳಾದ ಕೆ.ಎನ್.ಗೋಪಾಲಕೃಷ್ಣ, ಕುಮಾರ, ಕ್ರೀಡಾಪಟುಗಳಾದ ಗೌರವ್, ನಂದನ್, ರುದ್ರೇಶ ಇತರರು ಇದ್ದರು.