7 ಕೋಟಿಗೂ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು

| Published : Sep 26 2025, 01:03 AM IST

7 ಕೋಟಿಗೂ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಎಕರೆ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯ ಮತ್ತು ಮೂರು ಎಕರೆ ಪ್ರದೇಶದಲ್ಲಿ ಸುಂದರವಾದ ಹೂದೋಟ ನಿರ್ಮಾಣ ಕಾರ್ಯ

ಕನ್ನಡಪ್ರಭ ವಾರ್ತೆ ಐಗಳಿ

ಕಳೆದ ಹನ್ನೊಂದು ತಿಂಗಳ ಅವಧಿಯಲ್ಲಿ ನಮ್ಮ ಟ್ರಸ್ಟ್‌ನ ಅವಿರತ ಶ್ರಮ ಮತ್ತು ನಿಮ್ಮೆಲ್ಲರ ಸಹಕಾರದ ಫಲವಾಗಿ, ನಾವು ₹7 ಕೋಟಿಗಿಂತಲೂ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ವಿಜುಗೌಡ ಪಾಟೀಲ್ ಹೇಳಿದರು.ಸಮೀಪದ ಗುಡ್ಡಾಪೂರ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾನಮ್ಮದೇವಿ ತಪಸ್ಸು ಮಾಡಿದ ಪವಿತ್ರ ಸ್ಥಳವಾದ ಕಾತರ ಕಂಠಿಯಲ್ಲಿ, ಒಂದು ಎಕರೆ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯ ಮತ್ತು ಮೂರು ಎಕರೆ ಪ್ರದೇಶದಲ್ಲಿ ಸುಂದರವಾದ ಹೂದೋಟ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ. ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ, ₹3 ಕೋಟಿ ವೆಚ್ಚದಲ್ಲಿ ಆಂಗ್ಲ ಮಾಧ್ಯಮ ಶಾಲೆಯ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದೇವೆ. ಇದು ನಮ್ಮ ಸಮುದಾಯದ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುವಲ್ಲಿ ಸಹಕಾರಿಯಾಗಲಿದೆ. ಭಕ್ತಾದಿಗಳ ಅನುಕೂಲಕ್ಕಾಗಿ, ಕಾನಪೋರೆನ್ಸ್ ಹಾಲ್ ಹಾಗೂ ಸ್ಟ್ರಾಂಗ್ ರೂಮ್ ನಿರ್ಮಾಣ, ದೇವಸ್ಥಾನದ ಆವರಣದಲ್ಲಿ ಫೆವಿಂಗ್ ಬ್ಲಾಕ್ ಹಾಗೂ ಸಿಮೆಂಟ್ ಅಳವಡಿಕೆ, ಕಲ್ಲಿನ ಕಟ್ಟಿ, ಫ್ಲೋರಿಂಗ್ ಮತ್ತು ಗ್ರಾನೈಟ್ ಅಳವಡಿಕೆ ಮುಂತಾದ ಕೆಲಸಗಳು ಭರದಿಂದ ಸಾಗಿವೆ. ಇದಲ್ಲದೆ, ನೇತ್ರಾವತಿ ಕಟ್ಟಡದ ಡಿವೊಲೇಶನ್ ಕಾರ್ಯ, ಭಾವಿ, ದೇವಸ್ಥಾನದ ಕೆಲಸ, ಆರ್.ಸಿ.ಸಿ ಕೆಲಸ, ನಾಲ್ಕು ಗೋಪುರಗಳ ಕಲ್ಲಿನ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಭಕ್ತರಿಗಾಗಿ ದಾಸೋಹ ಮತ್ತು ಯಾತ್ರಿ ನಿವಾಸ ವ್ಯವಸ್ಥೆ ಸುಧಾರಿಸಲು, ಕರ್ನಾಟಕ ಭವನ ಮತ್ತು ಭೀಮಾ ಯಾತ್ರಿ ನಿವಾಸಕ್ಕೆ ಎರಡು ಜನರೇಟರ್ ಮತ್ತು ಸೌರಶಕ್ತಿ ವ್ಯವಸ್ಥೆ ಅಳವಡಿಸಲಾಗಿದೆ ಎಂದರು.

ದಾಸೋಹಕ್ಕೆ ಭಕ್ತರನ್ನು ಕರೆದೊಯ್ಯಲು ವಾಹನವನ್ನು ಸಹ ಖರೀದಿಸಲಾಗಿದೆ. ಕರ್ನಾಟಕ ಸರ್ಕಾರದಿಂದ ಕರ್ನಾಟಕ ಭವನ (ಅನ್ನಛತ್ರಾಲಯ) ಮತ್ತು ಮಹಾರಾಷ್ಟ್ರ ಸರ್ಕಾರದಿಂದ ಕಾಂಪೌಂಡ್, ರಸ್ತೆ ಮತ್ತು ಪತ್ರಾಜೆಡ್ ನಿರ್ಮಾಣಕ್ಕೆ ನೆರವು ದೊರೆತಿದೆ. ಸುಮಾರು 30 ಯಾತ್ರಿ ನಿವಾಸಗಳನ್ನು ನಿರ್ಮಿಸಲು ಸಿದ್ಧತೆ ನಡೆದಿದೆ. ದೇವಸ್ಥಾನ ನಿರ್ಮಾಣಕ್ಕೆ ₹50 ಕೋಟಿ ಮಂಜೂರಾತಿಗೆ ಡಿಸಿಎಂ ಡಿಕೆ ಶಿವಕುಮಾರಗೆ ಮನವಿ ಮಾಡಿದ್ದೇವೆ. ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಂದ ₹100 ಕೋಟಿ ವೆಚ್ಚದಲ್ಲಿ ವಿಜಯಪುರದಿಂದ ಜತ್ತಗೆ ತೆರಳಲು ಗುಡ್ಡಾಪುರ ಮಾರ್ಗವಾಗಿ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಪಡೆದಿದ್ದೇವೆ. ಇದು ಭಕ್ತಾದಿಗಳಿಗೆ ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಿದೆ. ₹2 ಕೋಟಿ ವೆಚ್ಚದಲ್ಲಿ ಹೈಟೆಕ್ ಶೌಚಾಲಯಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದರು.

ನವೆಂಬರ್‌ನಲ್ಲಿ ನಡೆಯುವ ಜಾತ್ರೆಗೆ ಆಗಮಿಸುವ 2 ಲಕ್ಷಕ್ಕೂ ಅಧಿಕ ಪಾದಯಾತ್ರೆ ಭಕ್ತಾದಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲು, ಅಲ್ಲದೆ, ಏಕಶಿಲೆಯಲ್ಲಿ ಬೃಹದಾಕಾರದ ಎರಡು ದೀಪಸ್ತಂಭ ನಿರ್ಮಾಣದ ಗುರಿ ಹೊಂದಲಾಗಿದೆ. ಕರ್ನಾಟಕದಿಂದ ಹೆಚ್ಚು ಬಸ್ಸುಗಳು ಬರುವ ಕಾರಣ, ಬಸ್ ನಿಲ್ದಾಣ ನಿರ್ಮಿಸಲು ಟ್ರಸ್ಟ್ ವತಿಯಿಂದ ಒಂದು ಎಕರೆ ಜಾಗವನ್ನು ನೀಡಲು ಮುಂದಾಗಿದ್ದೇವೆ. ಈ ಸಂಬಂಧ ಕರ್ನಾಟಕ ಸರ್ಕಾರಕ್ಕೆ ಮತ್ತು ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಮಾಡಿದ್ದೇವೆ. ಈ ದೇವಾಲಯದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಿದ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೂ, ನಮ್ಮ ಎಲ್ಲಾ ಟ್ರಸ್ಟ್ ಸದಸ್ಯರಿಗೂ, ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ, ನಮಗೆ ಸದಾ ಪ್ರೋತ್ಸಾಹ ನೀಡಿದ ಲಕ್ಷಾಂತರ ಭಕ್ತರಿಗೆ ಋಣಿಯಾಗಿದ್ದೇವೆ ಎಂದರು.

ಈ ವೇಳೆ ಟ್ರಷ್ಠ ಕಮೀಟಿಯ ನಿರ್ದೇಶಕ ಸಾಗರ ಚಂಪಣ್ಣವರ, ಕಾರ್ಯದರ್ಶೀ ವಿಠ್ಠಲ ಪೂಜಾರಿ, ಲೆಕ್ಕಿಗ ಈರಣ್ಣ ಜೇವೂರ ಸೇರಿದಂತೆ ಇತರರು ಇದ್ದರು.