ದಲಿತರಿಗೆ ಸ್ಮಶಾನ ಜಾಗ ನೀಡುವಂತೆ ದೇವಹೊಸಹಳ್ಳಿ ಗ್ರಾಮಸ್ಥರ ಆಗ್ರಹ

| Published : Dec 13 2024, 12:47 AM IST

ದಲಿತರಿಗೆ ಸ್ಮಶಾನ ಜಾಗ ನೀಡುವಂತೆ ದೇವಹೊಸಹಳ್ಳಿ ಗ್ರಾಮಸ್ಥರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬದುಕಿದ್ದಾಗ ನಮಗೆ ಒಂಚೂರು ಭೂಮಿ ನೀಡುತ್ತಿಲ್ಲ, ಸತ್ತಾಗ ಸಹ ನಮ್ಮ ಜನರಿಗೆ ಅಂತ್ಯಸಂಸ್ಕಾರ ಮಾಡಲು ಸರಿಯಾದ ಜಾಗವಿಲ್ಲದಂತಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇನ್ನು ಸ್ಮಶಾನ ಭೂಮಿಗಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ದುರ್ದೈವ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ದಲಿತರ ಸ್ಮಶಾನಕ್ಕೆ ಜಾಗ ಮಂಜೂರು ಮಾಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ತಾಲೂಕಿನ ದೇವರಹೊಸಹಳ್ಳಿ ಗ್ರಾಮಸ್ಥರು ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು.

ಗುರುವಾರ ತಾಲೂಕಿನ ದೇವರಹೊಸಹಳ್ಳಿ ಗ್ರಾಮದಿಂದ ಕಾಲ್ನಡಿಗೆ ಜಾಥಾ ಹೊರಟ ಗ್ರಾಮಸ್ಥರು ಹಾಗೂ ದಲಿತ ಸಂಘಟನೆಗಳ ಮುಖಂಡರು, ನಗರದ ಎಲೇಕೇರಿ, ಡಿ.ಟಿ.ರಾಮು ವೃತ್ತ, ಗಾಂಧಿಭವನ ವೃತ್ತ, ಬಸ್ ನಿಲ್ದಾಣ ಮೂಲಕ ಜಾಥಾ ನಡೆಸಿ ನಗರದ ತಾಲೂಕು ಕಚೇರಿ ಮುಂದೆ ಸಮಾವೇಶಗೊಂಡರು. ಈ ವೇಳೆ ರಸ್ತೆಯುದ್ದಕ್ಕೂ ಜಿಲ್ಲಾಡಳಿತ, ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ದೇವರಹೊಸಹಳ್ಳಿ ಗ್ರಾಮ ಸರ್ವೇ ನಂ.೧೧೫ರ ಜಮೀನಿನಲ್ಲಿ ಹಲವಾರು ದಶಕಗಳಿಂದ ದಲಿತರ ಶವಗಳನ್ನು ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ. ಆದರೆ, ಇತ್ತೀಚಿಗೆ ಕೆಲವರು ಈ ಭೂಮಿ ತಮ್ಮದೆಂದು ತಕರಾರು ತೆಗೆಯುತ್ತಿದ್ದಾರೆ. ಈ ಕೂಡಲೇ ಈ ಜಾಗದ ಸಮಸ್ಯೆಯನ್ನು ಪರಿಹರಿಸಬೇಕು. ಸದರಿ ಜಾಗವನ್ನು ದಲಿತರ ಸ್ಮಶಾನ ಭೂಮಿ ಎಂದು ನಿಗದಿ ಮಾಡಿ ಅಧಿಕೃತ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ದಶಕಗಳಿಂದ ನಮ್ಮ ಸಮುದಾಯದವರು ಮೃತಪಟ್ಟರೆ ಅವರ ಅಂತ್ಯಕ್ರಿಯೆಯನ್ನು ಇದೇ ಜಾಗದಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಜಾಗ ನಮಗೆ ಸೇರಿದ್ದು ಎಂದು ಕೆಲವರು ತಕರಾರು ತೆಗೆಯುತ್ತಿದ್ದಾರೆ. ಹಿಂದೆ ೨೦೧೮ ಹಾಗೂ ೨೦೨೧ರಲ್ಲಿ ಸಹ ಇದೇ ರೀತಿ ಆಗಿತ್ತು. ಆಗ ಸ್ಥಳಕ್ಕೆ ಅಗಮಿಸಿದ್ದ ಆಗಿನ ತಹಸೀಲ್ದಾರ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ, ಸಮಾಧಾನಪಡಿಸಿದ್ದರು. ಆದರೆ, ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗಲಿಲ್ಲ. ಭರವಸೆ ಭರವಸೆಯಾಗಿಯೇ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬದುಕಿದ್ದಾಗ ನಮಗೆ ಒಂಚೂರು ಭೂಮಿ ನೀಡುತ್ತಿಲ್ಲ, ಸತ್ತಾಗ ಸಹ ನಮ್ಮ ಜನರಿಗೆ ಅಂತ್ಯಸಂಸ್ಕಾರ ಮಾಡಲು ಸರಿಯಾದ ಜಾಗವಿಲ್ಲದಂತಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇನ್ನು ಸ್ಮಶಾನ ಭೂಮಿಗಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ದುರ್ದೈವ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವರಹೊಸಹಳ್ಳಿ ಗ್ರಾಮದ ದಲಿತರ ಸ್ಮಶಾನ ಭೂಮಿ ಸಮಸ್ಯೆಯನ್ನು ಪರಿಹರಿಸುವಂತೆ ತಾಲೂಕು ಆಡಳಿತಕ್ಕೆ ಹತ್ತಾರು ಬಾರಿ ಮನವಿ ಮಾಡಲಾಗಿದೆಯಾದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ದಲಿತರ ಶವವನ್ನು ತಂದು ತಾಲೂಕು ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರೂ ಸಹ ನಮ್ಮ ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗುತ್ತಿಲ್ಲ. ಪ್ರತಿ ಬಾರಿ ಪ್ರತಿಭಟನೆ ನಡೆಸಿದಾಗಲೂ ಸಹ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸುತ್ತಾರೆ, ಆದರೆ, ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಿಲ್ಲ. ಇನ್ನು ೧೫ ದಿನಗಳ ಒಳಗೆ ಸದರಿ ಜಾಗವನ್ನು ದಲಿತರ ಸ್ಮಶಾನ ಭೂಮಿ ಎಂದು ನಿಗದಿಗೊಳಿಸಿ ಅಧಿಕೃತ ಆದೇಶ ಹೊರಡಿಸಬೇಕು. ಇಲ್ಲದಿದ್ದಲ್ಲಿ, ಜಿಲ್ಲಾಮಟ್ಟದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದಲಿತರ ಸ್ಮಶಾನ ಜಾಗದ ಸಮಸ್ಯೆ ಕೇವಲ ದೇವರಹೊಸಹಳ್ಳಿ ಗ್ರಾಮಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂದಿನ ತಾಲೂಕು ಹಾಗೂ ಜಿಲ್ಲೆಯ ಹತ್ತಾರು ಗ್ರಾಮಗಳಲ್ಲಿ ಈ ಸಮಸ್ಯೆ ಇದೆ. ದಲಿತರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ಸೂಕ್ತ ಜಾಗ ಇಲ್ಲದಂತ ಪರಿಸ್ಥಿತಿ ಇದೆ. ತಾಲೂಕು ಹಾಗೂ ಜಿಲ್ಲಾಡಳಿತ ನಮ್ಮ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದಕ್ಕೆ ಶಾಶ್ವತವಾದ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಗ್ರಾಮಸ್ಥರು ಹಾಗೂ ದಲಿತರ ಸಂಘಟನೆಗಳ ಮುಖಂಡರು ಸ್ಮಶಾನ ಜಾಗ ಸಮಸ್ಯೆ ಪರಿಹರಿಸುವಂತೆ ತಹಸೀಲ್ದಾರ್ ನರಸಿಂಹಮೂರ್ತಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್, ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

ಈ ವೇಳೆ ದಲಿತ ಮುಖಂಡರಾದ ಮತ್ತೀಕೆರೆ ಹನುಮಂತಯ್ಯ, ಪಟ್ಲು ಗೋವಿಂದರಾಜು, ವೆಂಕಟೇಶ್ (ಸೇಠು), ಸಿದ್ದರಾಮಯ್ಯ, ಲಾಯರ್ ಕುಮಾರ್, ಸುರೇಶ್ ಗೌತಮ್, ಕೃಷ್ಣಯ್ಯ ಇತರರು ಇದ್ದರು.