ಚಿದಾನಂದ ಅವಧೂತರು ರಚಿಸಿರುವ ದೇವಿ ಪುರಾಣದಲ್ಲಿ ಮನುಷ್ಯನಲ್ಲಿರುವ ಅರಿಷಡ್ವರ್ಗಗಳನ್ನು ತ್ಯಜಿಸುವ ಮೂಲಕ ದೈವತ್ವದ ಕಡೆ ಹೋಗುವ ಮಾರ್ಗವಾಗಿದೆ.

ಕನ್ನಡಪ್ರಭ ವಾರ್ತೆ ಗದಗ

ದೇವಿ ಪುರಾಣವು ನಮ್ಮ ದೇಹದ, ನಮ್ಮ ದೇಶದ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಪುರಾಣವಾಗಿದೆ ಎಂದು ಹೊಸಳ್ಳಿಯ ಬೂದೀಶ್ವರ ಮಠದ ಬೂದೀಶ್ವರ ಸ್ವಾಮಿಗಳು ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ಗ್ರಾಮದೇವತೆ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ನಡೆದ ದೇವಿ ಪುರಾಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಚಿದಾನಂದ ಅವಧೂತರು ರಚಿಸಿರುವ ದೇವಿ ಪುರಾಣದಲ್ಲಿ ಮನುಷ್ಯನಲ್ಲಿರುವ ಅರಿಷಡ್ವರ್ಗಗಳನ್ನು ತ್ಯಜಿಸುವ ಮೂಲಕ ದೈವತ್ವದ ಕಡೆ ಹೋಗುವ ಮಾರ್ಗವಾಗಿದೆ. ಈ ದಿಸೆಯಲ್ಲಿ ದಾನ, ಧರ್ಮ ಮಾಡಬೇಕು. ಸನ್ಮಾರ್ಗದಲ್ಲಿ ತೊಡಗಿಕೊಳ್ಳಬೇಕು ಎಂದರು.ಕಾಂಗ್ರೆಸ್ ಯುವ ಮುಖಂಡ ಪ್ರಕಾಶ ಕರಿ ಮಾತನಾಡಿ, 47 ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಪುರಾಣ ಕಾರ್ಯಕ್ರಮದ ಇತಿಹಾಸ ಮಹತ್ವದಾಗಿದ್ದು, 50ನೇ ವರ್ಷದ ದೇವಿ ಪುರಾಣದ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಣೆ ಮಾಡಲು ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮ ದೇವತೆ ದೇವಸ್ಥಾನದಲ್ಲಿ ಸರ್ವ ಧರ್ಮದವರು ಪಾಲ್ಗೊಂಡು ನಿಸ್ವಾರ್ಥ ಸೇವೆ ಸಲ್ಲಿಸುವ ದೇಗುಲವಾಗಿದೆ ಎಂದರು.

ವಿಶ್ವನಾಥ ಶಾಸ್ತ್ರೀಗಳು ಪುರಾಣ ಪ್ರವಚನ ಮಂಗಲಗೊಳಿಸಿದರು. ಪುರಾಣ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ ಹಾಗೂ ದೇಣಿಗೆ ನೀಡಿದ ಮಹನೀಯರನ್ನು ಸನ್ಮಾನಿಸಲಾಯಿತು.

ಇದಕ್ಕೂ ಪೂರ್ವ ಬೆಳಗ್ಗೆ ದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಸುಮಂಗಲಿಯರಿಂದ ಪೂರ್ಣಕುಂಭದೊಂದಿಗೆ ದೇವಿ ಮೂರ್ತಿಯನ್ನು ಜಾನಪದ ಕಲಾ ತಂಡದೊಂದಿಗೆ ಮೆರವಣಿಗೆ ಮಾಡಲಾಯಿತು. ಷಡಕ್ಷರಯ್ಯ ಬದ್ನಿಮಠ ಪುರಾಣ ಪಠಣ ಮಾಡಿದರು. ಶಂಕ್ರಪ್ಪ ಬಣವಿ, ಮಲ್ಲಪ್ಪ ಕಲ್ಲೂರ, ಬಸನಗೌಡ ಪಾಟೀಲ ಸಂಗೀತ ಸೇವೆ ನೀಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ಪುರಾಣ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.ಕುಬೇರಗೌಡ ಪಾಟೀಲ, ಅಶೋಕ ಮಂದಾಲಿ, ಬಸವರಾಜ ಅರಹುಣಶಿ, ಬಸವರಾಜ ಭೂಮಣ್ಣವರ, ಕಲ್ಲಪ್ಪ ಬಣವಿ, ಸುರೇಶ ಬಣವಿ ಇದ್ದರು. ಅನಸೂಯಾ ಭೂಮಣ್ಣವರ, ಶ್ವೇತಲಕ್ಷ್ಮೀ ಪವಾಡಶೆಟ್ಟರ ಪ್ರಾರ್ಥಿಸಿದರು. ಪ್ರಕಾಶ ಅರಹುಣಶಿ ನಿರೂಪಿಸಿದರು. ಚಂದ್ರು ಬಣವಿ ವಂದಿಸಿದರು.