ಸಾರಾಂಶ
12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಚಳವಳಿ ಮಾಡದಿದ್ದರೆ ನಾವೆಲ್ಲರೂ ಅಂಧಕಾರ ಕೂಪದಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಶರಣರು ಕಾಲಿಟ್ಟ ಕ್ಷೇತ್ರವೆಲ್ಲ ಪವಿತ್ರ ಪುಣ್ಯಸ್ಥಳವಾಗಿ ಮಾರ್ಪಟ್ಟಿವೆ. ಬಸವಣ್ಣ ಅವರು ಆತ್ಮ ಹಾಗೂ ಪರಮಾತ್ಮನನ್ನು ಸಂಧಿಸುವ ಶಿವಯೋಗವನ್ನು ಜಗತ್ತಿಗೆ ಸಾರಿದ್ದಾರೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ಬಸವಾದಿ ಶರಣರ ವಚನಗಳು ನಮ್ಮ ಬದುಕಿನ ನಿತ್ಯ ಆಚರಣೆಯಾಗಬೇಕು ಎಂದು ಚಿಕ್ಕಮಗಳೂರು ಜಿಲ್ಲೆ ಎನ್ಆರ್ ಪುರ ಬಸವಕೇಂದ್ರದ ಬಸವಯೋಗಿ ಪ್ರಭುಗಳು ಹೇಳಿದರು.
ಪಟ್ಟಮದ ದೇವೀರಮ್ಮನಹಳ್ಳಿಯ ಫ.ಗು. ಹಳಗಟ್ಟಿ ಬಡಾವಣೆಯಲ್ಲಿ ಬಸವ ಮಾಸ ಸಮಿತಿ ವತಿಯಿಂದ ಒಂದು ತಿಂಗಳ ಕಾಲ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಚಳವಳಿ ಮಾಡದಿದ್ದರೆ ನಾವೆಲ್ಲರೂ ಅಂಧಕಾರ ಕೂಪದಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಶರಣರು ಕಾಲಿಟ್ಟ ಕ್ಷೇತ್ರವೆಲ್ಲ ಪವಿತ್ರ ಪುಣ್ಯಸ್ಥಳವಾಗಿ ಮಾರ್ಪಟ್ಟಿವೆ.
ಬಸವಣ್ಣ ಅವರು ಆತ್ಮ ಹಾಗೂ ಪರಮಾತ್ಮನನ್ನು ಸಂಧಿಸುವ ಶಿವಯೋಗವನ್ನು ಜಗತ್ತಿಗೆ ಸಾರಿದ್ದಾರೆ. ಹಾಗಾಗಿ ವಚನ ಸಾಹಿತ್ಯ ನಮ್ಮ ಬದುಕಿನ ಭಾಗವಾಗಬೇಕು ಎಂದು ಹೇಳಿದರು.
ಅಂತರಂಗದಲ್ಲಿ ಮೌಢ್ಯ, ಕಂದಾಚಾರ, ದ್ವೇಷ, ಅಸೂಹೆ ತುಂಬಿಕೊಂಡು ಘರ್ಷಣೆ, ಕಲಹಗಳಿಗೆ ಎಡೆ ಮಾಡಿಕೊಡುತ್ತಿದ್ದೇವೆ. ನಾವು ಆಡುವ ಮಾತು, ನಡೆದುಕೊಳ್ಳುವ ರೀತಿ ನಮ್ಮ ಸುತ್ತಲಿನ ಪರಿಸರವನ್ನು ಸುಂದರಗೊಳಿಸುತ್ತದೆ.
ಹಾಗಾಗಿ ನಡೆ ನುಡಿಯಲ್ಲಿ ನಾವು ಬಹಳ ಎಚ್ಚರವಹಿಸಬೇಕು. ಸತ್ಸಂಗದಲ್ಲಿ ಕೂಡಿ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವುದರಿಂದ ನಿಜ ಜೀವನ ಮೌಲ್ಯಗಳ ಅರಿವು ಹೆಚ್ಚಾಗುತ್ತದೆ ಎಂದರು.
ಕುದೇರು ಮಠದ ಗುರುಶಾಂತ ಸ್ವಾಮೀಜಿ ಮಾತನಾಡಿ, 12ನೇ ಶತಮಾಣದಲ್ಲೇ ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಅವಕಾಶ ಸಿಗುವಂತಾಗಬೇಕು ಎಂದು ಬಸವಣ್ಣ ಪ್ರತಿಪಾದಿಸಿದ್ದರು.
ಅಂತೆಯೇ ಪ್ರಸ್ತುತ ಮಹಿಳೆಯರು ಪುರುಷರೊಂದಿಗೆ ಸಮಾನವಾಗಿ ಅವಕಾಶಗಳನ್ನು ಪಡೆಯುವಂತಾಗಿದೆ. ಎಲ್ಲರನ್ನು ಒಳಗೊಳ್ಳುವ ಬಸವಣ್ಣರ ಸಮ ಸಮಾಜದ ಕನಸು ಸಾಕಾರಗೊಳ್ಳಬೇಕಾದರೆ ನಾವು ಮಾನವೀಯ ಮೌಲ್ಯಗಳನ್ನು ಹೆಚ್ಚು ಪರಿಪಾಲಿಸಬೇಕು ಎಂದು ಹೇಳಿದರು.
ಧನುರ್ಮಾಸದಲ್ಲಿ ಸತತ ಒಂದು ತಿಂಗಳ ಕಾಲ ನಡೆದ ಬಸವ ಮಾಸದಲ್ಲಿ ಪ್ರವಚನವನ್ನು ನೀಡಿದ ಪ್ರವಚನಕಾರರನ್ನು ಸನ್ಮಾನಿಸಲಾಯಿತು. ವಚನ ರಸಪ್ರಶ್ನೆ, ವಚನ ಗಾಯನ, ಛದ್ಮವೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಿಳೆಯರ ಭಜನಾ ತಂಡ ವಚನ ಗಾಯನವನ್ನು ನಡೆಸಿಕೊಟ್ಟರು.
ಇದಕ್ಕೂ ಮುನ್ನ ಬಸವಣ್ಣ ಪುತ್ಥಳಿಯೊಂದಿಗೆ ಆಕರ್ಷಕ ಕಲಾತಂಡಗಳ ಭವ್ಯ ಮೆರವಣಿಗೆ ನಡೆಯಿತು. ಎಲ್ಲರೂ ಶ್ವೇತವಸ್ತ್ರಧಾರಿಗಳಾಗಿ ಭಾಗವಹಿಸುವ ಮೂಲಕ ಮೆರವಣಿಗೆ ಅಂದ ಹೆಚ್ಚಿಸಿದರು.
ಭಜನ ತಂಡದವರು ವಚನ ಗಾಯನವನ್ನು ನಡೆಸಿಕೊಟ್ಟು ಮೆರವಣಿಗೆ ಕಳೆ ತಂದರು. ಫ.ಗು.ಹಳಕಟ್ಟಿನಗರದಿಂದ ಆರಂಭಗೊಂಡ ಮೆರವಣಿಗೆ ದೇವೀರಮ್ಮನಹಳ್ಳಿ ರಸ್ತೆಯ ಮಾರ್ಗವಾಗಿ ಸಂಚರಿಸಿ ವಿಶ್ವಗುರು ಬಸವಣ್ಣ ವೃತ್ತದಲ್ಲಿ ಅಂತ್ಯಗೊಂಡಿತು.
ಬಸಹಳ್ಳಿಹುಂಡಿ ಮಠದ ಬಸವರಾಜ ಸ್ವಾಮೀಜಿ, ಬಸವ ಮಾಸ ಸಮಿತಿ ಅಧ್ಯಕ್ಷ ಆಯರಹಳ್ಳಿ ಪ್ರಭುಸ್ವಾಮಿ, ಬಸವ ಮಾಸ ಸಮಿತಿಯ ಚೆನ್ನಪ್ಪ, ನಂದಿನಿ ಮಹೇಶ್, ಸುರೇಶ್, ಮಹದೇವಪ್ಪ ಇದ್ದರು.