ಕನ್ನಡ ಸಾಹಿತ್ಯಕ್ಕೆ ದೇವರ ದಾಸಿಮಯ್ಯ ಕೊಡುಗೆ ಅದ್ಭುತ: ಎಡಿಸಿ ಅಬೀದ್‌ ಗದ್ಯಾಳ

| Published : Apr 03 2025, 12:33 AM IST / Updated: Apr 03 2025, 12:34 AM IST

ಕನ್ನಡ ಸಾಹಿತ್ಯಕ್ಕೆ ದೇವರ ದಾಸಿಮಯ್ಯ ಕೊಡುಗೆ ಅದ್ಭುತ: ಎಡಿಸಿ ಅಬೀದ್‌ ಗದ್ಯಾಳ
Share this Article
  • FB
  • TW
  • Linkdin
  • Email

ಸಾರಾಂಶ

ಬುಧವಾರ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಪಾಲ್ಗೊಂಡು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲದೇವರ ದಾಸಿಮಯ್ಯ ಅವರು 176 ಕ್ಕೂ ಹೆಚ್ಚು ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಅವರು ಬರೆದ ವಚನಗಳಲ್ಲಿ ಭಕ್ತಿಯ ಸ್ವಾರಸ್ಯ ಅಡಗಿದ್ದು, ತಮ್ಮ ವೃತ್ತಿಯನ್ನು ನಿರ್ವಹಿಸುತ್ತಲೇ ಸಮಾಜದ ಬದಲಾವಣೆಗೆ ವಿಶೇಷವಾದ ಸೇವೆ ಸಲ್ಲಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ.

ಬುಧವಾರ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ ಮಹನೀಯರು ಸಮಾಜಕ್ಕೆ ಸಲ್ಲಿಸಿದ ಸೇವೆಗಳನ್ನು ನೆನೆಯುವ ಮೂಲಕ ಅವರಿಗೆ ಗೌರವ ಸಲ್ಲಿಸಿ ಜಯಂತಿ ಕಾರ್ಯಕ್ರಮಗಳಿಗೆ ಅರ್ಥಪೂರ್ಣ ಮಹತ್ವ ದೊರೆಯುವಂತಾಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀನಿವಾಸ್ ರಾವ್ ಮಾತನಾಡಿ, ದೇವರ ದಾಸಿಮಯ್ಯನವರು ಮಾಡುವ ಕಾಯಕದಲ್ಲಿ ದೇವರನ್ನು ಕಂಡವರು. ಅವರಂತೆಯೇ ಪ್ರತಿಯೊಬ್ಬರು ತಮ್ಮ ಕೆಲಸದಲ್ಲಿ ನಿಷ್ಠೆ ಹಾಗೂ ಶ್ರದ್ದೆಯನ್ನು ತೋರುವ ಮೂಲಕ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಗಿರೀಶ್ ಶೆಟ್ಟಿಗಾರ್ ದಾಸಿಮಯ್ಯರ ಕುರಿತು ವಿಶೇಷ ಉಪನ್ಯಾಸ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ರವಿ ಶೆಟ್ಟಿಗಾರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಲಕ್ಷ್ಮಣ ಕೊಡಿಯಾಲ್ ಬೈಲ್, ನೇಕಾರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಉಪನ್ಯಾಸಕ ಪ್ರದೀಪ್ ಹಾವಂಜೆ ನಿರೂಪಿಸಿದರು. ಜಯರಾಮ್ ಶೆಟ್ಟಿಗಾರ್ ವಂದಿಸಿದರು.