ಪಟ್ಟಣದ ಪಂಚಗ್ರಹ ಹಿರೇಮಠಕ್ಕೆ ಶಿಥಿಕಂಠೇಶ್ವರ ಶ್ರೀ ಪಟ್ಟಾಧ್ಯರಾಗಿ 29 ವರ್ಷಗಳಾದರೂ ಈ ವರೆಗೆ ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿಲ್ಲ. ಮಠದ ಆಸ್ತಿ ಮಾರಾಟ ಮಾಡಲಾಗಿದೆ. ಮಠದ 53 ಎಕರೆ ಜಮೀನನ್ನು ಭೂ ಪರಿವರ್ತಿಸಿ ನಿವೇಶನ (ಲೇಔಟ್) ಮಾಡಲು ಮುಂದಾಗಿದ್ದರೆಂದು ಭಕ್ತರು ಸಿಡಿದೆದ್ದಿದ್ದರು.
ಕುಂದಗೋಳ:
48 ದಿನ ಮಂಡಲ ಅನುಷ್ಠಾನ ಮಾಡಬೇಕು. ಮುಂದೆ ಯಾವುದೇ ಕಾರಣಕ್ಕೂ ಮಠದ ಆಸ್ತಿ ಪರಭಾರೆ ಮಾಡುವಂತಿಲ್ಲ. ಇದೀಗ ಮಾಡಲು ಉದ್ದೇಶಿಸಿರುವ ನಿವೇಶನ ವಿನ್ಯಾಸ ತಕ್ಷಣವೇ ಕೈಬಿಡಬೇಕು. ಭೂಪರಿವರ್ತನೆ ಮಾಡುವಂತಿಲ್ಲ. ಮಠದಿಂದ ನಿರಂತರ ಧರ್ಮ ಜಾಗೃತಿ ನಡೆಸುವ ಜತೆಗೆ ಮಠದ ಕಾರ್ಯವೈಖರಿ ನೋಡಿಕೊಳ್ಳಲು ಕಾವಲು ಸಮಿತಿ ರಚಿಸಬೇಕು.ಇದು ಪಟ್ಟಣದ ಪಂಚಗ್ರಹ ಹಿರೇಮಠದ ಕುರಿತಂತೆ ಎದ್ದಿರುವ ಆಸ್ತಿ ಮಾರಾಟದ ವಿವಾದ, ನಿವೇಶನ ಮಾಡುತ್ತಿರುವ ಶಿಥಿಕಂಠೇಶ್ವರ ಶ್ರೀಗಳಿಗೆ ಕಾಶಿ ಮತ್ತು ರಂಭಾಪುರಿ ಶ್ರೀಗಳು ನೀಡಿರುವ ಆದೇಶ. ಒಂದು ವೇಳೆ ನಿಯಮ ಮೀರಿದರೆ ಪೀಠದಿಂದಲೇ ಪದಚ್ಯುತಿಗೊಳಿಸಲಾಗುವುದು ಎಂಬ ಎಚ್ಚರಿಕೆಯ ಸಂದೇಶವನ್ನೂ ನೀಡಲಾಗಿದೆ. ಈ ಮೂಲಕ ಮಠದ ವಿವಾದ ಸುಖಾಂತ್ಯ ಕಂಡಿದೆ.
ಆಗಿದ್ದೇನು?ಪಟ್ಟಣದ ಪಂಚಗ್ರಹ ಹಿರೇಮಠಕ್ಕೆ ಶಿಥಿಕಂಠೇಶ್ವರ ಶ್ರೀ ಪಟ್ಟಾಧ್ಯರಾಗಿ 29 ವರ್ಷಗಳಾದರೂ ಈ ವರೆಗೆ ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿಲ್ಲ. ಮಠದ ಆಸ್ತಿ ಮಾರಾಟ ಮಾಡಲಾಗಿದೆ. ಮಠದ 53 ಎಕರೆ ಜಮೀನನ್ನು ಭೂ ಪರಿವರ್ತಿಸಿ ನಿವೇಶನ (ಲೇಔಟ್) ಮಾಡಲು ಮುಂದಾಗಿದ್ದರೆಂದು ಭಕ್ತರು ಸಿಡಿದೆದ್ದಿದ್ದರು. ಮಠದ ಆಸ್ತಿ ಉಳಿಸುವಂತೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದ ಭಕ್ತರು, ಮಠದ ಆಸ್ತಿ ಹಾಗೂ ಪರಂಪರೆ ಉಳಿಸಿ ಎಂದು ರಂಭಾಪುರಿ ಹಾಗೂ ಕಾಶಿ ಪೀಠದ ಶ್ರೀಗಳ ಮೊರೆ ಹೋಗಿದ್ದರು. ಹೀಗಾಗಿ ಶುಕ್ರವಾರ ಕಾಶಿ ಹಾಗೂ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ಮಠದಲ್ಲಿ ಭಕ್ತರ ಸಭೆ ನಡೆಸಿ ಅಹವಾಲು ಆಲಿಸಲಾಯಿತು. ಬಳಿಕ ಶಿಥಿಕಂಠೇಶ್ವರ ಶ್ರೀಗಳಿಂದ ಸ್ಪಷ್ಟೀಕರಣ ಕೇಳಿದ ಉಭಯಶ್ರೀಗಳು ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.
ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಂಚಗ್ರಹ ಹಿರೇಮಠ ಕಾಶಿಪೀಠದ ಶಾಖಾಮಠವಾಗಿದ್ದು ಮಠದ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು. ಮಠದ ಆಸ್ತಿ ಪರಭಾರೆ ಮಾಡದೆ ಧರ್ಮ ಜಾಗೃತಿ ಮಾಡಿಕೊಂಡು ಹೋಗಬೇಕು ಎಂದು ಶಿಥಿಕಂಠೇಶ್ವರ ಶ್ರೀಗಳಿಗೆ ಸೂಚಿಸಿದರು. ಈಗಾಗಲೇ ನಡೆದಿರುವ ಘಟನೆಗಳಿಗೆ ಶಿಥಿಕಂಠೇಶ್ವರ ಶ್ರೀ ಮನ್ನಿಸುವಂತೆ ಕೇಳಿದ್ದಾರೆ. ಇನ್ನು ಮುಂದೆ ಮಠದ ಪರಂಪರೆಗೆ ಚ್ಯುತಿ ಬರದಂತೆ ಅವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯ ನೆರವೇರಿಸಿಕೊಂಡು ಹೋಗುತ್ತಾರೆ ಎಂದರು.ಪದಚ್ಯುತಿ ಎಚ್ಚರಿಕೆ:
ಮಠದ ನಿಯಮಗಳಿಗೆ ತದ್ವಿರುದ್ಧವಾಗಿ ನಡೆದುಕೊಂಡರೆ ಪೀಠದಿಂದಲೇ ಪದಚ್ಯುತಿಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಶ್ರೀಗಳು, ಈಗ ತೆಗೆದುಕೊಂಡಿರುವ ಷರತ್ತುಗಳನ್ನು ಬಾಂಡ್ ಪೇಪರ್‌ನಲ್ಲಿ ಬರೆಯಿಸಿ ನೋಂದಣಿ ಮಾಡಿಸಲಾಗುವುದು. ಹೀಗಾಗಿ ಭಕ್ತರು ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.ಮಠಕ್ಕೆ ಆದಿಲಶಾಹಿ 96 ಎಕರೆ ಜಮೀನು ಇನಾಂ ನೀಡಿದ್ದು, ಇದರಲ್ಲಿ ನಿವೇಶನ ಮಾಡದೆ ಉಳಿಸಿ-ಬೆಳೆಸಿಕೊಂಡು ಹೋಗಬೇಕು ಎಂದ ರಂಭಾಪುರಿ ಶ್ರೀ, ಈಗಿನ ಶ್ರೀಗಳು ಪೀಠಾಧಿಪತಿಗಳಾಗಿ 29 ವರ್ಷ ವರ್ಷವಾಗಿದ್ದು, ರಜತ ಮಹೋತ್ಸವ ಏರ್ಪಡಿಸಿದ್ದರೆ ಸಂತಸವಾಗುತ್ತಿತ್ತು. ಆದರೆ ಶ್ರೀಗಳ ವಿರುದ್ಧ ಭಕ್ತರು ನೀಡಿದ ದೂರು ನಿವಾರಿಸಲು ಬಂದಿದ್ದು, ವಿಷಾದ ಸಂಗತಿ ಎಂದ ಶ್ರೀಗಳು, ಶಿಥಿಕಂಠೇಶ್ವರ ಶ್ರೀಗಳಿಗೆ ಪ್ರಾಯಶ್ಚಿತ್ತವಾಗಿ 48 ದಿನ ತೀರ್ಥ ಕ್ಷೇತ್ರದಲ್ಲಿ ಮಂಡಲ ಪೂಜೆ ಅನುಷ್ಠಾನ ಮಾಡಿ ಬಳಿಕ ಶ್ರೀಮಠಕ್ಕೆ ಬಂದು ಧರ್ಮದ ಕಾರ್ಯ ಮಾಡುವಂತೆ ಸೂಚಿಸಲಾಗಿದೆ ಎಂದರು.
ಭಕ್ತರ (ಕಾವಲು) ಸಮಿತಿ:15 ಜನರ ಭಕ್ತರ ಸೇವಾ ಸಮಿತಿ ರಚಿಸಿ ಶ್ರೀಮಠದ ಏಳ್ಗಿಗೆಗೆ ಶ್ರೀಗಳ ಜತೆಗೆ ಕೈಜೋಡಿಸಲು ಸಮಿತಿ ರಚಿಸಲಾಗುವುದು. ಶಿಥಿಕಂಠೇಶ್ವರ ಮಠವು ಕಲ್ಪವೃಕ್ಷವಿದ್ದು, ಭಕ್ತರು ಶ್ರೀಮಠದ ಜತೆಗೆ ಬಾಂಧವ್ಯ ಮುಂದುವರಿಸಿಕೊಂಡು ಹೋಗಬೇಕೆಂದು ಭಕ್ತರಲ್ಲಿ ಹೇಳಿದರು.
ಪಂಚಗ್ರಹ ಹಿರೇಮಠದ ಶ್ರೀ ಶಿಥಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಾಶಿ ಹಾಗೂ ರಂಭಾಪುರಿ ಶ್ರೀಗಳು ಸೂಚಿಸಿದಂತೆ ನಡೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.ಮುಕ್ತಿಮಂದಿರದ ವಿಮಲ ರೇಣುಕ ಸ್ವಾಮೀಜಿ, ಭಕ್ತರ ಆರೋಪಗಳನ್ನು ಉಭಯ ಶ್ರೀಗಳಿಗೆ ವಿವರಿಸಿದರು. ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಮಠದ ಅಭಿವೃದ್ಧಿಗೆ ನಿರಂತರವಾಗಿ ಕೈಜೋಡಿಸಿದ್ದು ₹ 10 ಲಕ್ಷ ಮಂಜೂರು ಮಾಡಿರುವುದಾಗಿ ತಿಳಿಸಿದರು.
ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ಎಂ.ಎಸ್. ಅಕ್ಕಿ, ಮುಖಂಡರಾದ ಶಿವಾನಂದ ಬೆಂತೂರ, ಸೋಮರಾವ್ ದೇಸಾಯಿ, ಎ.ಬಿ. ಉಪ್ಪಿನ, ರಮೇಶ ಕೊಪ್ಪದ, ಸುರೇಶ ಸವಣೂರ, ಶಂಕರಗೌಡ ದೊಡಮನಿ, ಫಕ್ಕೀರೇಶ ನಾವಳ್ಳಿಮಠ, ಸತೀಶ ಕೊಬ್ಬಯ್ಯನವರ, ಉಮೇಶ ಹೆಬಸೂರ, ಗುರು ಪಾಟೀಲ, ಶ್ರೀಕಂಠಗೌಡ ಹಿರೇಗೌಡ್ರ, ನಾಗರಾಜ ದೇಶಪಾಂಡೆ, ಬಸವರಾಜ ಕುಂದಗೋಳಮಠ, ಎಸ್.ಎಫ್. ಬೆಂಗೇರಿ, ಅಜ್ಜಯ್ಯ ರಟ್ಟಿಗೇರಮಠ, ಭರಮಣ್ಣ ಸೊರಟೂರು, ಸಿದ್ದಪ್ಪ ಇಂಗಳಹಳ್ಳಿ ಇದ್ದರು.