ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಮುಖ್ಯ

| Published : Aug 04 2025, 12:15 AM IST

ಸಾರಾಂಶ

ಐತಿಹಾಸಿಕ ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಮುಖ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಆನಂದಪುರ: ಐತಿಹಾಸಿಕ ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಮುಖ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸಮೀಪದ ಮುರುಘ ಮಠದಲ್ಲಿ ಭಾನುವಾರ ಶ್ರೀಮಠದ ಪ್ರವೇಶದ ಮಹಾದ್ವಾರಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಮಠಗಳ ಇತಿಹಾಸ ರಾಷ್ಟ್ರ ಮತ್ತು ಪ್ರಪಂಚದಾದ್ಯಂತ ಬೆಳಕು ಚೆಲ್ಲುತ್ತಿವೆ. ಇಂತಹ ಮಠಗಳ ಅಭಿವೃದ್ಧಿಗೆ ಭಕ್ತರ ಸಮೂಹ ಹೆಚ್ಚಿನ ಸಹಕಾರ ನೀಡಬೇಕೆಂದು ಕರೆ ನೀಡಿದರು. ಶಿವಮೊಗ್ಗ ಜಿಲ್ಲೆಯಲ್ಲಿ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಆರಂಭಗೊಂಡಿದೆ. ತಾಳಗುಪ್ಪ ಹೊನ್ನಾವರ ಮತ್ತು ತಾಳಗುಪ್ಪ ಸಿದ್ದಾಪುರ ಸಿರಸಿ ಮಾರ್ಗವಾಗಿ ಹುಬ್ಬಳ್ಳಿ ಸಂಪರ್ಕಿಸುವ ರೈಲ್ವೆ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೇ ಸರ್ವೆ ಕಾರ್ಯ ಮುಗಿದಿದ್ದು, ಅರಣ್ಯ ಇಲಾಖೆಯ ಅನುಮತಿ ಪಡೆದು ರೈಲ್ವೆ ಅಭಿವೃದ್ಧಿ ಸಂಬಂಧಪಟ್ಟಂತೆ ಕೇಂದ್ರ ರೈಲ್ವೆ ಮಂತ್ರಿಯೊಂದಿಗೆ ಮಾತನಾಡಿದ್ದೇನೆ. ಅಲ್ಲದೆ ತಾಳಗುಪ್ಪ ರೈಲ್ವೆ ನಿಲ್ದಾಣ, ರೈಲ್ವೆ ಜಂಕ್ಷನ್ ಆಗಲಿದ್ದು. ಆನಂದಪುರ ರೈಲ್ವೆ ನಿಲ್ದಾಣದ ಮೂಲಭೂತ ಸೌಕರ್ಯದೊಂದಿಗೆ ಮೇಲ್ ಸೇತುವೆ ನಿರ್ಮಾಣ, ಒಂದೇ ಭಾರತ್ ರೈಲು ಸಂಚಾರ ಪ್ರಾರಂಭಗೊಂಡರೆ ರೈಲು ನಿಲುಗಡೆಗೊಳ್ಳಲು ಬೇಕಾಗುವಷ್ಟು ಫ್ಲಾಟ್ ಫಾರಂಅನ್ನು ವಿಸ್ತರಣೆ ಸೇರಿದಂತೆ ಅನೇಕ ಅಭಿವೃದ್ಧಿಗೆ 3 ಕೋಟಿ ರು. ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಪ್ರಾಯೋಗಿಕವಾಗಿ ಸಂಚರಿಸುತ್ತಿರುವ ಯಶವಂತಪುರ ತಾಳಗುಪ್ಪ ವಿಶೇಷ ರೈಲು ಇನ್ನೂ ಮೂರು ತಿಂಗಳಗಳ ಕಾಲ ಸಂಚರಿಸಲಿದೆ. ತಾಳಗುಪ್ಪ ಸಾಗರ ಭಾಗದ ಪ್ರಯಾಣಿಕರು ತಾಳಗುಪ್ಪದಿಂದ ಹೆಚ್ಚಿನ ಟಿಕೆಟ್ ಬುಕಿಂಗ್ ಮಾಡುವುದರ ಮೂಲಕ ಸಹಕರಿಸಿದರೆ ಮುಂದಿನ ದಿನಗಳಲ್ಲಿ ಈ ರೈಲು ನಿರಂತರವಾಗಿ ಸಂಚರಿಸಲು ಅನುಮತಿ ದೊರಕಲಿದೆ. ಆದ್ದರಿಂದ ಈ ಭಾಗದ ಪ್ರಯಾಣಿಕರು ಹೆಚ್ಚು ಹೆಚ್ಚು ಟಿಕೆಟ್ ಬುಕ್ಕಿಂಗ್ ಮಾಡುವುದರ ಮೂಲಕ ಸಂಚರಿಸಬೇಕೆಂದು ಮನವಿ ಮಾಡಿದರು.

ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ಕಲೀಮುಲ್ಲಾ ಖಾನ್, ಮಾಜಿ ಸಚಿವ ಹರತಾಳು ಹಾಲಪ್ಪ, ಜಿಪಂ ಮಾಜಿ ಸದಸ್ಯ ರತ್ನಾಕರ ಹೊನ ಗೋಡ್, ತಾಪಂ ಮಾಜಿ ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ್, ಮಾಮ್ಕೋಸ್ ನಿರ್ದೇಶಕ ಭರ್ಮಪ್ಪ, ವೀರೇಶ್ ಆಲವಳ್ಳಿ, ದೇವೇಂದ್ರಪ್ಪ ಸಾಗರ, ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಟಾಕಪ್ಪ ಕಣ್ಣೂರ್, ನಿಜಲಿಂಗಪ್ಪ ಗೌಡ, ಕೊಟ್ರಪ್ಪ ನೇದರಹಳ್ಳಿ, ಉಮೇಶ್ ಗೌಡ್ರು, ವೀರೇಶ್ ಬರದಳ್ಳಿ, ಚಂದ್ರ ಮೌಳಿ ಇತರರಿದ್ದರು.