ಸಾರಾಂಶ
ಮುಂಡರಗಿ: ಇಲ್ಲಿನ ಸುಕ್ಷೇತ್ರ ಸಿಂಗಟಾಲೂರು ಶ್ರೀವೀರಭದ್ರೇಶ್ವರ ದೇವಸ್ಥಾನ ಅಭಿವೃದ್ಧಿಗೊಳ್ಳಲು ನಾಡಿನಾದ್ಯಂತ ಇರುವ ಭಕ್ತರ ತನು, ಮನ, ಧನದಿಂದ ಮಾಡುತ್ತಿರುವ ಸಹಾಯ ಸಹಕಾರವೇ ಕಾರಣ ಎಂದು ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳಿದರು.
ಅವರು ಸೋಮವಾರ ಸಂಜೆ ಸುಕ್ಷೇತ್ರ ಸಿಂಗಟಾಲೂರು ಶ್ರೀವೀರಭದ್ರೇಶ್ವರ ದೇವಸ್ಥಾನದ ಕಾರ್ತಿಕೋತ್ಸವದ ಮಹಾಮಂಗಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಈ ಕಾರ್ತಿಕೋತ್ಸವದ ಮಂಗಲ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತ ಜನಸಾಗರೇ ಹರಿದು ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಬರುವ ಭಕ್ತರಿಗೆ ರಾತ್ರಿ ಪೂರ್ತಿ ಪ್ರಸಾದದ ವ್ಯವಸ್ಥೆ ಮಾಡಲಾಗಿರುತ್ತದೆ. ಈಗಾಗಲೇ ನೂತನವಾಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಕಾಳಿಕಾದೇವಿ ದೇವಸ್ಥಾನ, ಈಶ್ವರ ದೇವಸ್ಥಾನ ಸೇರಿದಂತೆ ಎಲ್ಲ ದೇವಸ್ಥಾನ ಜೀರ್ಣೋದ್ಧಾರಗೊಳಿಸಿದ್ದು, ಗೊಟಗೋಡಿ ರಾಕ್ ಗಾರ್ಡನ್ ಮಾದರಿಯಲ್ಲಿ ಶ್ರೀವೀರಭದ್ರೇಶ್ವರ ಉದ್ಯಾನವನ ನಿರ್ಮಾಣ ನಿರ್ಮಾಣ ಮಾಡಿದ್ದು, ನಿತ್ಯವೂ ನೂರಾರು ಭಕ್ತರು ಆಗಮಿಸಿ ಉದ್ಯಾನವನ ವೀಕ್ಷಿಸಿ ಖುಷಿ ಪಡುತ್ತಿದ್ದಾರೆ ಎಂದರು.
ಈಗಾಗಲೇ ದೇವಸ್ಥಾನದಿಂದ ಹಾಗೂ ಸರ್ಕಾರ ಅನುದಾನದಿಂದ ಯಾತ್ರಾ ನಿವಾಸ ನಿರ್ಮಿಸಿದ್ದು, ನಾಡಿನ ಜನತೆಯ ಅನುಕೂಲಕ್ಕಾಗಿ ಸುಕ್ಷೇತ್ರದಲ್ಲಿ ಬೃಹತ್ ಹಾಗೂ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಪ್ರಾರಂಭ ಕೈಗೆತ್ತಿಕೊಂಡಿದ್ದು, ಕಾಮಗಾರಿ ಪ್ರಾರಂಭಗೊಂಡಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಹಾಯ ಸಹಕಾರ ನೀಡಬೇಕು ಎಂದರು.ಮಧ್ಯರಾತ್ರಿ 12 ಗಂಟೆಯವರೆಗೂ ಭಕ್ತರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಶ್ರೀವೀರಭದ್ರೇಶ್ವರನ ದರ್ಶನ ಪಡೆದು ಕಾರ್ತಿಕದ ದೀಪ ಹಚ್ಚಿದರು.
ಈ ಸಂದರ್ಭದಲ್ಲಿ ಶೇಖಣ್ಣ ಬಾಲೇಹೊಸೂರು, ಕೊಟ್ರೇಶ ಬಳ್ಳೊಳ್ಳಿ. ಮಂಜುನಾಥ ಮುಂಡವಾಡ, ಸುಬಾಸಪ್ಪ ಬಾಗೇವಾಡಿ, ಕಾಸಯ್ಯ ಬೆಂತೂರುಮಠ, ಕುಮಾರ ಸದಾಶಿವಪ್ಪನವರ, ಮಹಾಂತೇಶ ಗುಗ್ಗರಿ, ವಿ.ಎನ್. ಶೆಟ್ಟರ, ರಜನೀಕಾಂತ ದೇಸಾಯಿ, ನಾಗೇಶ ಹುಬ್ಬಳ್ಳಿ, ಎಸ್.ಡಿ. ಚವಡಿ, ಸೋಮು ಹಕ್ಕಂಡಿ, ಮುತ್ತು ಅಳವಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.