ಶ್ರೀರಂಗಪಟ್ಟಣದ ಸ್ನಾನಘಟ್ಟ ಮತ್ತು ಪಶ್ಚಿಮ ವಾಹಿನಿಯಲ್ಲಿ ಪಿಂಡ ಪ್ರದಾನ ಮಾಡಲು ಬರುವ ಯಾತ್ರಾರ್ಥಿಗಳಿಂದ ಕಾವೇರಿ ನದಿ ಕಲುಷಿತವಾಗದಂತೆ ತಡೆಯಲು ಸ್ವಚ್ಛತೆಯ ಗುತ್ತಿಗೆ ಪಡೆದಿರುವ ಟೆಂಡರ್‌ದಾರ ಯಾತ್ರಾರ್ಥಿಗಳಿಂದ ಪುರಸಭೆ ನಿಗದಿಪಡಿಸಿರುವ ೧೦೦ ರು. ಶುಲ್ಕಕ್ಕಿಂತ ಮೂರರಿಂದ ಐದು ಪಟ್ಟು ಶುಲ್ಕ ವಸೂಲಿ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣದ ಸ್ನಾನಘಟ್ಟ ಮತ್ತು ಪಶ್ಚಿಮ ವಾಹಿನಿಯಲ್ಲಿ ಪಿಂಡ ಪ್ರದಾನ ಮಾಡಲು ಬರುವ ಯಾತ್ರಾರ್ಥಿಗಳಿಂದ ಕಾವೇರಿ ನದಿ ಕಲುಷಿತವಾಗದಂತೆ ತಡೆಯಲು ಸ್ವಚ್ಛತೆಯ ಗುತ್ತಿಗೆ ಪಡೆದಿರುವ ಟೆಂಡರ್‌ದಾರ ಯಾತ್ರಾರ್ಥಿಗಳಿಂದ ಪುರಸಭೆ ನಿಗದಿಪಡಿಸಿರುವ ೧೦೦ ರು. ಶುಲ್ಕಕ್ಕಿಂತ ಮೂರರಿಂದ ಐದು ಪಟ್ಟು ಶುಲ್ಕ ವಸೂಲಿ ಮಾಡುತ್ತಿದ್ದು, ಇದು ಸಾವಿನ ನೋವಿನಲ್ಲಿರುವ ಜನರಿಂದ ಟೆಂಡರ್‌ದಾರರು ಹಣ ಸುಲಿಗೆ ಮಾಡುತ್ತಿರುವುದಾಗಿ ಸಾರ್ವಜನಿಕ ವಲಯದಿಂದ ಗಂಭೀರ ಆರೋಪ ಕೇಳಿಬಂದಿದೆ.

ಕಾವೇರಿ ನದಿಗೆ ಅಸ್ಥಿ ಬಿಡುವವರಿಂದ ಪ್ರತಿ ಪೂಜೆಗೆ ೧೦೦ ರು. ಹಾಗೂ ಕಾವೇರಿ ನದಿ ದಂಡೆಯಲ್ಲಿ ಇತರೆ ಪೂಜಾ ಕೈಂಕರ್ಯ ಕೈಗೊಳ್ಳುವವರಿಂದ ೧೦೦ ರು. ಶುಲ್ಕ ಪಡೆಯುವಂತೆ ಪುರಸಭೆ ದರ ನಿಗದಿಪಡಿಸಿದೆ. ಎನ್.ರವಿಕುಮಾರ್ ಎಂಬುವವರು ೨ ಲಕ್ಷ ರು. ಭದ್ರತಾ ಠೇವಣಿ ಇಟ್ಟು ಟೆಂಡರ್ ಪಡೆದುಕೊಂಡಿದ್ದಾರೆ.

೨೦೨೫ರ ಜೂನ್ ತಿಂಗಳಲ್ಲಿ ಟೆಂಡರ್ ಪಡೆದಿರುವ ಗುತ್ತಿಗೆದಾರ ಎನ್.ರವಿಕುಮಾರ್ ಸ್ವಚ್ಛತಾ ಕಾರ್ಯಕ್ಕೆ ಯಾತ್ರಾರ್ಥಿಗಳಿಂದ ೧೦೦ ರು. ಬದಲಿಗೆ ೨೦೦, ೩೦೦, ೫೦೦ ರು.ಗಳನ್ನು ದಬ್ಬಾಳಿಕೆಯಿಂದ ಗಲಾಟೆ ಮಾಡಿ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಕುಟುಂಬದವರ ಸಾವಿನ ನೋವಿನಲ್ಲಿರುವ ಭಕ್ತರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದರೂ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳು ಜಾಣಮೌನ ವಹಿಸಿದ್ದಾರೆ ಎಂದು ಚಲುವರಾಜು ಎಂಬುವರು ಲೋಕಾಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ದೂರು ನೀಡಿದ್ದಾರೆ.

ಒಂದು ಪೂಜೆಗೆ ೧೦೦ ರು.ನ ಎರಡರಿಂದ ಐದು ಟಿಕೆಟ್:

ಪಶ್ಚಿಮ ವಾಹಿನಿ ಮತ್ತು ಸ್ನಾನಘಟ್ಟಕ್ಕೆ ಬರುವ ಯಾತ್ರಾರ್ಥಿಗಳಿಂದ ಒಂದು ಪೂಜೆಗೆ ೧೦೦ ರು.ನ ಒಂದು ಟಿಕೆಟ್ ನೀಡುವ ಬದಲು ಎರಡರಿಂದ ಐದು ಟಿಕೆಟ್ ನೀಡುತ್ತಿದ್ದಾರೆ. ನದಿಯಲ್ಲಿ ಅಸ್ಥಿ ಮತ್ತು ಶ್ರಾದ್ಧ ಕಾರ್ಯಕ್ರಮ ಹಾಗೂ ಇತರೆ ಯಾವುದೇ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಪ್ರತಿ ಪೂಜೆಗೆ ೧೦೦ ರು. ಕಡ್ಡಾಯವಾಗಿ ನೀಡಬೇಕು ಎಂದು ನಾಮಫಲಕ ಅಳವಡಿಸಲಾಗಿದೆ. ಆದರೂ, ಯಾತ್ರಾರ್ಥಿಗಳಿಂದ ಒಂದಕ್ಕೆ ಐದು ಪಟ್ಟು ಹಣ ವಸೂಲಿ ಮಾಡುತ್ತಿದ್ದರೂ ಹೇಳೋರು, ಕೇಳೋರೇ ದಿಕ್ಕಿಲ್ಲದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸ್ವಚ್ಛತಾ ಕಾರ್ಯಕ್ಕೆ ಮನಸೋಇಚ್ಛೆ ಟಿಕೆಟ್ ಹರಿಯುತ್ತಾ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ ಜನರೊಂದಿಗೆ ಜಗಳಕ್ಕಿಳಿಯುವುದು, ತನ್ನ ಕಡೆಯ ಹುಡುಗರಿಂದ ಬೆದರಿಕೆ ಹಾಕುತ್ತಿರುವ ಬಗ್ಗೆಯೂ ಸಾಕಷ್ಟು ದೂರುಗಳು ಕೇಳಿಬಂದಿವೆ. ದೂರದ ಊರುಗಳಿಂದ ಶ್ರೀರಂಗಪಟ್ಟಣಕ್ಕೆ ಬರುವ ಯಾತ್ರಾರ್ಥಿಗಳು ಟೆಂಡರ್‌ದಾರನ ಧನದಾಹದಿಂದ ರೋಸಿಹೋಗಿದ್ದಾರೆ.

ಏಕೆ ಶುಲ್ಕ ನಿಗದಿ?

ಕಾವೇರಿ ನದಿ ದಂಡೆಗಳಲ್ಲಿ ಅಸ್ಥಿ ವಿಸರ್ಜನೆ ಮತ್ತು ಇತರೆ ಪೂಜಾ ಕಾರ್ಯಗಳನ್ನು ಮಾಡುತ್ತಿದ್ದು, ಅಸ್ಥಿ ವಿಸರ್ಜನೆ ಸಮಯದಲ್ಲಿ ಬರುವ ಯಾತ್ರಾರ್ಥಿಗಳು ಕಾವೇರಿ ನದಿಗೆ ಅಸ್ಥಿ ವಿಸರ್ಜನೆ, ಪ್ಲಾಸ್ಟಿಕ್, ಬಟ್ಟೆ ಹಾಗೂ ಇತರೆ ತ್ಯಾಜ್ಯಗಳನ್ನು ಬಿಡುತ್ತಿರುವುದರಿಂದ ನದಿ ನೀರು ಮಲಿನವಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಶಾಲ್‌ಕುಮಾರ್ ಕೌಶಿಕ್ ಎಂಬುವರು ಹೈಕೋರ್ಟ್‌ನಲ್ಲಿ ರಿಟ್‌ಪಿಟಿಷನ್ ದಾಖಲಿಸಿದ್ದರು. ಇದರನ್ವಯ ಹೈಕೋರ್ಟ್ ನೀಡಿರುವ ಆದೇಶದಲ್ಲಿ ನದಿ ನೀರು ಮಲಿನವಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿರುವ ಕಾವೇರಿ ನದಿ ದಂಡೆಯಲ್ಲಿರುವ ಸ್ನಾನಘಟ್ಟ, ಪಶ್ಚಿಮವಾಹಿನಿ, ಸಂಗಮ, ಗೋಸಾಯಿಘಾಟ್ ಪ್ರದೇಶದಲ್ಲಿ ಅಸ್ಥಿ ಬಿಡುವ ಮತ್ತು ಇತರೆ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವವರಿಂದ ೧೦೦ ರು. ಶುಲ್ಕ ನಿಗದಿಪಡಿಸಲಾಗಿದೆ.

ಟೆಂಡರ್‌ದಾರನ ವಿರುದ್ಧ ಕ್ರಮವಿಲ್ಲ:

ನದಿ ನೀರಿನ ಸ್ವಚ್ಛತೆಯ ಗುತ್ತಿಗೆ ಪಡೆದಿರುವ ಟೆಂಡರ್‌ದಾರರು ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವುದರಿಂದ ಭಕ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಟೆಂಡರ್‌ದಾರನ ದಬ್ಬಾಳಿಕೆ ವಿರುದ್ಧ ಚಲುವರಾಜು ಎಂಬುವರು ಪುರಸಭೆ ಮುಖ್ಯಾಧಿಕಾರಿ, ಲೋಕಾಯುಕ್ತರಿಗೆ ದೂರು ನೀಡಿದ್ದರೂ ಇದುವರೆಗೂ ಯಾರೊಬ್ಬರೂ ಟೆಂಡರ್‌ದಾರನ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಧಿಕಾರಿಗಳು, ಪೊಲೀಸರೂ ಟೆಂಡರ್‌ದಾರನ ಬೆಂಬಲಕ್ಕೆ ನಿಂತಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಟೆಂಡರ್‌ದಾರ ರವಿ ವಿರುದ್ಧ ದೂರು ನೀಡಿರುವ ಚಲುವರಾಜು ಅವರನ್ನು ರವಿ ಕಡೆಯ ಹುಡುಗರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಕಳೆದ ಆರು ತಿಂಗಳಿನಿಂದ ನಿರಂತರವಾಗಿ ಸಾರ್ವಜನಿಕರಿಂದ ಸುಲಿಗೆ ಮಾಡುತ್ತಾ ಹಣ ಮಾಡುವ ದಂಧೆಯಲ್ಲಿ ತೊಡಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಪುರೋಹಿತರಿಂದಲೂ ಹಣ ವಸೂಲಿ

ಪಿಂಡಪ್ರದಾನ, ಅಸ್ಥಿ ವಿಸರ್ಜನೆ, ನಾರಾಯಣ ಬಲಿಯಂತಹ ಪೂಜಾ ಕಾರ್ಯಗಳನ್ನು ನಡೆಸಿಕೊಡುವ ಪುರೋಹಿತರು ಒಂದೊಂದು ಪೂಜೆಗೆ ಕನಿಷ್ಠ ೫೦೦ ರು.ನಿಂದ ೫೦೦೦ ರು.ವರೆಗೆ ಪಡೆಯುತ್ತಿದ್ದಾರೆ. ಇವರಿಂದಲೂ ಕಮಿಷನ್ ರೂಪದಲ್ಲಿ ಟೆಂಡರ್‌ದಾರ ಹಣ ಪಡೆಯುತ್ತಿದ್ದಾನೆ. ಪುರೋಹಿತರು ಪೂಜೆ ನೆರವೇರಿಸಲು ಸರ್ಕಾರಕ್ಕೆ ಪ್ರತಿ ವರ್ಷ ೨೨೦೦ ರು. ಪಾವತಿ ಮಾಡಿ ಪೂಜೆ ಮಾಡುವ ಅಧಿಕೃತ ಪರವಾನಗಿ ಪಡೆಯುತ್ತಿದ್ದಾರೆ. ಸ್ನಾನಘಟ್ಟದಲ್ಲಿ ಪೂಜೆ ಮಾಡುವ ೧೦ ರಿಂದ ೧೨ ಮಂದಿ ಪುರೋಹಿತರಿಂದ ೨೨೦೦ ರು. ಬದಲಿಗೆ ೧೦ ಸಾವಿರ ರು.ವರೆಗೆ ಹಣ ವಸೂಲಿ ಮಾಡಿದ್ದಾನೆ. ಪುರೋಹಿತರು ಟೆಂಡರ್‌ದಾರ ಎನ್.ರವಿಕುಮಾರ್‌ಗೆ ಹೆದರಿ ಹಣ ನೀಡಿದ್ದಾರೆ.

- ಚಲುವರಾಜು, ದೂರುದಾರ