ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಭೀಮನ ಅಮಾವಾಸ್ಯೆ ಅಂಗವಾಗಿ ಜಿಲ್ಲೆಯ ವಿವಿಧ ದೇವಳಗಳಲ್ಲಿ ಗುರುವಾರ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.ನಗರದ ಶ್ರೀಕಾಳಿಕಾಂಬ ದೇವಸ್ಥಾನ, ಶ್ರೀಚಾಮುಂಡೇಶ್ವರಿ ದೇವಸ್ಥಾನ, ಶಂಕರಪುರದಲ್ಲಿರುವ ಶ್ರೀಗಂಗಾಧರೇಶ್ವರ, ಶ್ರೀರಂಗಪಟ್ಟಣದ ಗಂಜಾಂನ ಶ್ರೀ ನಿಮಿಷಾಂಬ, ಶ್ರೀ ಕ್ಷಣಾಂಬಿಕೆ, ಶ್ರೀ ಲಕ್ಷ್ಮೀದೇವಿ, ಪಾಂಡವಪುರ ತಾಲೂಕಿನ ಆರತಿ ಉಕ್ಕಡ, ಮಹಾಕಾಳಿ ದೇವಸ್ಥಾನ, ಮಳವಳ್ಳಿ ತಾಲೂಕಿನ ಶ್ರೀ ದಂಡಿನ ಮಾರಮ್ಮ, ಶ್ರೀ ಪಟ್ಟಲದಮ್ಮ, ನಾಗಮಂಗಲ ತಾಲೂಕಿನ ಶ್ರೀ ಮುಳುಕಟ್ಟಮ್ಮ, ಶ್ರೀ ಲಕ್ಷ್ಮೀದೇವಿ, ಮದ್ದೂರು ತಾಲೂಕಿನ ಶ್ರೀ ಮದ್ದೂರಮ್ಮ, ಶ್ರೀ ಆದಿಶಕ್ತಿ, ಕೆ.ಆರ್. ಪೇಟೆ ತಾಲೂಕಿನ ಶ್ರೀ ಪಟ್ಟಲದಮ್ಮ, ಶ್ರೀ ಕಿಕ್ಕೇರಮ್ಮ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.
ನಗರದ ಶ್ರೆ ಕಾಳಿಕಾಂಬ ದೇವಸ್ಥಾನದಲ್ಲಿ ಬೆಳಗಿನಿಂದಲೇ ವಿಶೇಷ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ನಡೆದವು. ಸಹಸ್ರಾರು ಮಂದಿ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು. ದೇವಸ್ಥಾನ ಟ್ರಸ್ಟ್‌ನವರು ಭಕ್ತಾದಿಗಳಿಗಾಗಿ ಪ್ರಸಾದ ವ್ಯವಸ್ಥೆಯನ್ನೂ ಮಾಡಿದ್ದರು.ಇದಕ್ಕೂ ಮುನ್ನ ಭೀಮನ ಅಮಾವಾಸ್ಯೆ ಪ್ರಯುಕ್ತ ಮನೆಗಳಲ್ಲಿ ಮಹಿಳೆಯರಿಗೆ ತಮ್ಮ ಗಂಡನಿಗೆ ಒಳಿತಾಗಬೇಕು ಎಂಬ ಕಾರಣದಿಂದ ಪಾದಪೂಜೆ ಮಾಡಿ ಖುಷಿಪಟ್ಟರು.
ಶ್ರೀಹೊಳೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆಮದ್ದೂರು: ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಗುರುವಾರ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ದೇವಾಲಯದ ಪ್ರಧಾನ ಅರ್ಚಕ ಪ್ರದೀಪಚಾರ್ಯ, ಸಹ ಅರ್ಚಕ ಸುರೇಶ್ ಆಚಾರ್ಯ ಅವರುಗಳ ತಂಡ ಮುಂಜಾನೆ ಶ್ರೀಆಂಜನೇಯಸ್ವಾಮಿ ಮೂಲ ವಿಗ್ರಹಕ್ಕೆ ಮಧು ಮತ್ತು ಪಂಚಾಮೃತ ಅಭಿಷೇಕ ಪುಷ್ಪಾಲಂಕಾರ ಸೇವೆ ನೆರವೇರಿಸಲಾಯಿತು. ಅಸಂಖ್ಯಾತ ಭಕ್ತರು ದಂಪತಿ ಸಮೇತ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿ ಧನ್ಯತಾ ಭಾವ ಮೆರೆದರು. ದರ್ಶನ ಪಡೆದ ಭಕ್ತರಿಗೆ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಿತು.