ಶ್ರಾವಣ ಹಿನ್ನೆಲೆಯಲ್ಲಿ ಶ್ರೀಕುಮಾರಸ್ವಾಮಿ ದರ್ಶನ ಪಡೆದ ಭಕ್ತರು

| Published : Aug 12 2025, 12:30 AM IST

ಶ್ರಾವಣ ಹಿನ್ನೆಲೆಯಲ್ಲಿ ಶ್ರೀಕುಮಾರಸ್ವಾಮಿ ದರ್ಶನ ಪಡೆದ ಭಕ್ತರು
Share this Article
  • FB
  • TW
  • Linkdin
  • Email

ಸಾರಾಂಶ

ಶ್ರಾವಣ ಮಾಸದ ಮೂರನೇ ಸೋಮವಾರದಂದು ತಾಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದ ಲೋಹಾದ್ರಿ ಗಿರಿಯಲ್ಲಿ ನೆಲೆನಿಂತು ಭಕ್ತರನ್ನು ಪೊರೆಯುತ್ತಿರುವ ಪುರಾಣ ಪ್ರಸಿದ್ಧ ಶ್ರೀಕುಮಾರಸ್ವಾಮಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು.

ಕನ್ನಡಪ್ರಭ ವಾರ್ತೆ ಸಂಡೂರು

ಶ್ರಾವಣ ಮಾಸದ ಮೂರನೇ ಸೋಮವಾರದಂದು ತಾಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದ ಲೋಹಾದ್ರಿ ಗಿರಿಯಲ್ಲಿ ನೆಲೆನಿಂತು ಭಕ್ತರನ್ನು ಪೊರೆಯುತ್ತಿರುವ ಪುರಾಣ ಪ್ರಸಿದ್ಧ ಶ್ರೀಕುಮಾರಸ್ವಾಮಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು.

ಶ್ರಾವಣ ಮಾಸದ ಮೂರನೇ ಸೋಮವಾರ, ಷಷ್ಠಿ ಹಾಗೂ 5 ವರ್ಷದಲ್ಲಿ 2 ಬಾರಿ ಬರುವ ಶ್ರೀಕುಮಾರಸ್ವಾಮಿ ಜಾತ್ರೆಯ ಸಂದರ್ಭದಲ್ಲಿ ಶ್ರೀಕುಮಾರಸ್ವಾಮಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಗುತ್ತದೆ.

ಸಂಡೂರಿನಿಂದ ಶ್ರೀಕುಮಾರಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರಲು ಸಾರಿಗೆ ಸಂಸ್ಥೆಯವರು ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಿದ್ದರು. ಬೆಳಗ್ಗೆ ೯ ಗಂಟೆಯ ನಂತರ ದೇವಸ್ಥಾನಕ್ಕೆ ತೆರಳಲು ಹೆಚ್ಚಿನ ಸಂಖೆಯಲ್ಲಿ ಭಕ್ತರು ಸಂಡೂರಿನ ಪುರಸಭೆ ಬಸ್ ನಿಲ್ದಾಣಕ್ಕೆ ಬಂದಿದ್ದು, ಆ ಸಂದರ್ಭದಲ್ಲಿ ಕೆಲ ಸಮಯ ಬಸ್‌ ಬಾರದ್ದರಿಂದ, ಕೆಲ ಸಮಯ ಭಕ್ತರು ಗೊಣಗಾಟ ನಡೆಸಿದ್ದಲ್ಲದೆ ಹೆಚ್ಚಿನ ಬಸ್‌ಗಳನ್ನು ಬಿಡಲು ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಒತ್ತಾಯಿಸಿದರು.

ದೇವಸ್ಥಾನಕ್ಕೆ ಹೋಗುವ ಬಸ್ ಬರುತ್ತಿದ್ದಂತೆ ಭಕ್ತರು ಸೀಟುಗಳನ್ನು ಹಿಡಿಯಲು ಹಾಗೂ ಬಸ್‌ನೊಳಗೆ ಹೋಗಲು ಹರಸಾಹಸ ಪಡುವಂತಹ ಸ್ಥಿತಿ ಉಂಟಾಗಿತ್ತು. ಕೆಲ ಸಮಯದ ನಂತರ ಬಸ್‌ಗಳು ಒಂದರ ಹಿಂದೆ ಒಂದರಂತೆ ಬಂದಿದ್ದರಿಂದ ನೂಕು ನುಗ್ಗಲು ಕಡಿಮೆಯಾಯಿತು.

ಶ್ರೀಕುಮಾರಸ್ವಾಮಿ ದೇವಸ್ಥಾನಕ್ಕೆ ತೆರಳಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಸ್ಥಾನದ ಪ್ರಾಂಗಣದಲಿರುವ ಶ್ರೀಕುಮಾರಸ್ವಾಮಿ, ಶ್ರೀಪಾರ್ವತಿ ದೇವಿ, ಶ್ರೀನಾಗನಾಥೇಶ್ವರ ಹಾಗೂ ದೇವಸ್ಥಾನದ ಮಾರ್ಗದಲ್ಲಿರುವ ಶ್ರೀಹರಿಶಂಕರ ದೇವರುಗಳ ದರ್ಶನ ಪಡೆದು ಪುನೀತರಾದವರು. ನೂರಾರು ಭಕ್ತರು ಸಂಡೂರಿನಿಂದ ೧೨ ಕಿಮೀ ದೂರದಲ್ಲಿರುವ ಶ್ರೀಕುಮಾರಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆಯ ಮೂಲಕ ತೆರಳಿ ದರ್ಶನ ಪಡೆದರು. ಸರ್ವ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಬರುವ ಹಿನ್ನೆಲೆ ದೇವಸ್ಥಾನದ ಮಾರ್ಗದಲ್ಲಿ ಅದಿರು ಸಾಗಣೆ ಲಾರಿಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ದೇವಸ್ಥಾನದ ಬಳಿಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಹಾಗೂ ಸ್ಮಯೋರ್ ಸಂಸ್ಥೆಯ ಸಿಬ್ಬಂದಿ ನೇಮಿಸಲಾಗಿತ್ತು.