ಶಿವನ ಧ್ಯಾನದಲ್ಲಿ ಮಿಂದೆದ್ದ ಮಾದಪ್ಪನ ಭಕ್ತರು

| Published : Mar 10 2024, 01:34 AM IST

ಸಾರಾಂಶ

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಮೂರನೇ ದಿನ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರುಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಮೂರನೇ ದಿನ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದಿಂದ ಜರುಗಿತು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಪೂಜಾ ಕಾರ್ಯಕ್ರಮಗಳ ಬೆಳಗಿನ ಜಾವ ಸ್ವಾಮಿಗೆ ವಿಶೇಷ ಪೂಜೆ ಮಹಾ ಮಂಗಳಾರತಿಯೊಂದಿಗೆ ನಡೆದ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬೇಡಗಂಪಣ ಅರ್ಚಕರು ಪೂಜೆ ಸಲ್ಲಿಸುವ ಮೂಲಕ ಭಕ್ತರಿಗೆ ದರ್ಶನ ಭಾಗ್ಯ ನೀಡಲಾಯಿತು. ಜಾಗರಣೆ:

ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ರಾತ್ರಿ ಮಲೆ ಮಹದೇಶ್ವರನ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ದೇವಾಲಯದ ಸುತ್ತಲೂ ಮೆರವಣಿಗೆಯ ಮೂಲಕ ಪ್ರದಕ್ಷಿಣೆ ಹಾಕಿ ನಂತರ ಉತ್ಸವ ಮೂರ್ತಿಯನ್ನು ಮಲೆ ಮಹದೇಶ್ವರ ಬೆಟ್ಟದ ವಿವಿಧ ಬಡಾವಣೆಗಳಲ್ಲಿ ಇಡೀ ರಾತ್ರಿ ಜಾಗರಣೆ ಮೂಲಕ ಮೆರವಣಿಗೆ ಮಾಡಲಾಯಿತು. ಬೆಳಗಿನಜಾವದವರೆಗೂ ಭಕ್ತರು ಸಹ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾಶಿವರಾತ್ರಿಯಂದು ಶಿವನ ಧ್ಯಾನದಲ್ಲಿ ಭಕ್ತ ವೃಂದ ಮಿಂದೆದ್ದಿತು.ಹಿರಿಯ ನ್ಯಾಯಾಧೀಶರ ಭೇಟಿ:

ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಕೆ.ಸೋಮಶೇಖರ್ , ಶಿವಶಂಕರಪ್ಪ ಅಮರಣ್ಣನವರ್ ಮಹದೇಶ್ವರನ ದರ್ಶನ ಪಡೆದು ದೇವಾಲಯದ ಹೊರಾಂಗಣದಲ್ಲಿ ಮಾತೃಕುಟೀರ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಶ್ರೀ ಕ್ಷೇತ್ರದಲ್ಲಿ ಇಂತಹ ಪುಣ್ಯ ಕೆಲಸ ಮಾಡುತ್ತಿರುವುದು ತಾಯಂದಿರಿಗೆ ಮಕ್ಕಳೊಂದಿಗೆ ಬಂದು ಕ್ಷೇತ್ರದಲ್ಲಿ ಸುರಕ್ಷಿತವಾಗಿ ತೆರಳಲು ಇಂತಹ ಮಾತೃಕುಟೀರ ಬೇಕಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು ಮಾದೇಶ್ವರನಿಗೆ ಚಿನ್ನದ ಕಿರೀಟ:

ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೊದಲ ಬಾರಿಗೆ ಭಕ್ತರು ನೀಡಿದಂತಹ ಚಿನ್ನದಿಂದ ತಯಾರು ಮಾಡಿದ ಮಾದಪ್ಪನಿಗೆ ಒಂದು ಕೆಜಿ 369 ಗ್ರಾಂ ತೂಕದ ಚಿನ್ನದ ಕಿರೀಟವನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎ.ಇ. ರಘು, ಪ್ರಧಾನ ಅರ್ಚಕ ಕೆ.ವಿ. ಮಾದೇಶ್ ಅವರಿಗೆ ಮಹದೇಶ್ವರನಿಗೆ ಕಿರೀಟ ಧರಿಸಲು ನೀಡಿದಂತಹ ಸಂದರ್ಭದಲ್ಲಿ ಮಲೆ ಮಾದೇಶ್ವರನ ಕೃಪಾಕಟಾಕ್ಷದಿಂದ ಭಕ್ತಾದಿಗಳು ನೀಡಿದಂತಹ ಚಿನ್ನದಿಂದ ತಯಾರು ಮಾಡಿದ ಶ್ರೀ ಕ್ಷೇತ್ರದ ಮಾದಪ್ಪನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಚಿನ್ನದ ಕಿರೀಟ ಧಾರಣೆ ಮಲೆ ಮಾದೇಶ್ವರನ ದರ್ಶನ ಭಾಗ್ಯ ಸಿಗಲಿದೆ ಎಂದು ತಿಳಿಸಿದರು. ಹಿರಿಯ ಅಜ್ಜಿಗೆ ಸನ್ಮಾನ:

ಮಲೆ ಮಹದೇಶ್ವರ ಬೆಟ್ಟಕ್ಕೆ ತಿಪಟೂರಿನ 102 ವರ್ಷದ ಅಜ್ಜಿ ತಾಳುಬೆಟ್ಟದಿಂದ ಪಾದಯಾತ್ರೆಯಲ್ಲಿ ತೆರಳಿ ಮಲೆ ಮಹದೇಶ್ವರನ ದರ್ಶನ ಪಡೆದು ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಆಶೀರ್ವಾದ ಪಡೆದರು. ದೇವಾಲಯದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರಿಂದ ಸನ್ಮಾನಿಸಿ ನಂತರ ಮಾತನಾಡಿದ, ಅಜ್ಜಿ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ವ್ಯವಸ್ಥಿತವಾಗಿ ದೇವರ ದರ್ಶನವಾಗಿದೆ. ಜೊತೆಗೆ ಇಲ್ಲಿನ ಪ್ರಾಣಿ ಪಕ್ಷಿಗಳಿಗೆ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಮತ್ತು ದೇಶಕ್ಕೆ ಒಳ್ಳೆಯದಾಗಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ, ಮಹದೇಶ್ವರನಲ್ಲಿ ಪೂಜೆ ಸಲ್ಲಿಸಿರುವುದಾಗಿ ಅಜ್ಜಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಊತ್ಸವಗಳ ಪೂಜೆ:

ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಮಾದಪ್ಪನ ಭಕ್ತರು ವಿವಿಧ ಹರಕೆ ಹೊತ್ತು ಭಕ್ತರಿಂದ ಚಿನ್ನದ ತೇರು ಉತ್ಸವ ಹಾಗೂ ಬೆಳ್ಳಿತೇರಿನ ಉತ್ಸವ ರುದ್ರಾಕ್ಷಿ ಮಂಟಪೋತ್ಸವ, ಬಸವ ವಾಹನ ಉತ್ಸವ ಉಲಿವಾಹನ ಉತ್ಸವ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಎಲ್ಲಿ ನೋಡಿದರೂ ಜನಸ್ತೋಮ:

ಮಲೆ ಮಾದೇಶ್ವರನ ಬೆಟ್ಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧ ತಾಲೂಕುಗಳಿಂದ ಮಹದೇಶ್ವರನ ದರ್ಶನ ಪಡೆಯಲು ಮಹಾಶಿವರಾತ್ರಿಯಂದು ಲಕ್ಷಾಂತರ ಭಕ್ತರು ಆಗಮಿಸುವ ಮೂಲಕ ಮಾದೇಶ್ವರನ ದರ್ಶನ ಪಡೆದು ಶುಕ್ರವಾರ ರಾತ್ರಿ ಜಾಗರಣೆಯಲ್ಲಿ ಮಿಂದೆದ್ದರು.

ನಾಗಮಲ್ಲೇಶ್ವರನಿಗೆ ಪೂಜೆ:

ಮಹಾಶಿವರಾತ್ರಿ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳು ನಾಗಮಲೆಗೆ ತೆರಳಿ ನಾಗಮಲ್ಲೇಶ್ವರನಿಗೆ ಪೂಜೆ ಸಲ್ಲಿಸುವ ಮೂಲಕ ಶ್ರೀ ಕ್ಷೇತ್ರದ ನಾಗಮಲೆ ಸೇರಿದಂತೆ ಗುಜ್ಜುಮಲೆ, ಗುರುಗಂಜಿ ಮಲೆ ಮತ್ತು ಕೋಡುಗಲ್ಲು ಮಲೆ ಮಹದೇಶ್ವರನ ಸನ್ನಿಧಿಗಳಲ್ಲಿ ವಿಶೇಷ ಪೂಜೆ ಅವನ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು .ಸಾಲೂರು ಮಠದಲ್ಲಿ ವಿಶೇಷ ಪೂಜೆ: ಮಲೆ ಮಹದೇಶ್ವರನ ಬೆಟ್ಟಕ್ಕೆ ಬಂದಿದ್ದ ಭಕ್ತಾದಿಗಳು ಮಹಾಶಿವರಾತ್ರಿಯಂದು ಮಹದೇಶ್ವರನ ದರ್ಶನ ಪಡೆದು ನಂತರ ಸಾಲೂರು ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಭಕ್ತರು ಆಶೀರ್ವಾದ ಪಡೆದರು. ಮಠದ ದಾಸೋಹದಲ್ಲಿ ಪ್ರಸಾದ ಸ್ವೀಕರಿಸುವ ಮೂಲಕ ಭಕ್ತಾದಿಗಳು ಶಿವರಾತ್ರಿ ಪೂಜೆ ಸಲ್ಲಿಸಿದರು.